2021ರಲ್ಲಿ ಭಾರತದ ರಸ್ತೆಗೆ ಎಲೆಕ್ಟ್ರಿಕ್ ಟ್ರಕ್ ಕಾಲಿಡಲಿರುವ ನಿರೀಕ್ಷೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2020 | 4:00 PM

ಜರ್ಮನ್ ಮೂಲದ ಟ್ರಕ್ ಮತ್ತು ಬಸ್ ಉತ್ಪಾದಕ ಕಂಪನಿಯಾಗಿರುವ ಡೈಮ್ಲರ್, 2021ರಲ್ಲಿ ಎಲೆಕ್ಟ್ರಿಕ್ ಟ್ರಕ್​ಗಳನ್ನು ರಸ್ತೆಗಿಳಿಸಲು ಯೋಜನೆ ರೂಪಿಸಿದೆ. ಇದು ಸಾಧ್ಯವಾದರೆ ಭಾರತದಲ್ಲಿ ರಸ್ತೆಗೆ ಇಳಿದ ಮೊದಲ ಎಲೆಕ್ಟ್ರಿಕ್ ಟ್ರಕ್ ಎಂಬ ಹಿರಿಮೆಗೆ ಡೈಮ್ಲರ್ ಪಾತ್ರವಾಗಲಿದೆ.

2021ರಲ್ಲಿ ಭಾರತದ ರಸ್ತೆಗೆ ಎಲೆಕ್ಟ್ರಿಕ್ ಟ್ರಕ್ ಕಾಲಿಡಲಿರುವ ನಿರೀಕ್ಷೆ
ಸಾಂಕೇತಿಕ ಚಿತ್ರ
Follow us on

ದೆಹಲಿ: ಇತ್ತೀಚಿಗಷ್ಟೇ ಉತ್ತರಾಖಂಡ್ ಸರ್ಕಾರ ಎಲೆಕ್ಟ್ರಿಕ್ ಬಸ್ ಆರಂಭಿಸಿದ ಸುದ್ದಿ ಓದಿದ್ದೇವೆ. ಡೈಮ್ಲರ್ ಎಂಬ ಟ್ರಕ್ ಮತ್ತು ಬಸ್ ಉತ್ಪಾದಕ ಕಂಪನಿ ಈ ಕ್ಷೇತ್ರದಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಜರ್ಮನ್ ಮೂಲದ ಟ್ರಕ್ ಮತ್ತು ಬಸ್ ಉತ್ಪಾದಕ ಕಂಪನಿಯಾಗಿರುವ ಡೈಮ್ಲರ್, 2021ರಲ್ಲಿ ಎಲೆಕ್ಟ್ರಿಕ್ ಟ್ರಕ್​ಗಳನ್ನು ರಸ್ತೆಗಿಳಿಸಲು ಯೋಜನೆ ರೂಪಿಸಿದೆ. ಇದು ಸಾಧ್ಯವಾದರೆ ಭಾರತದಲ್ಲಿ ರಸ್ತೆಗೆ ಇಳಿದ ಮೊದಲ ಎಲೆಕ್ಟ್ರಿಕ್ ಟ್ರಕ್ ಎಂಬ ಹಿರಿಮೆಗೆ ಡೈಮ್ಲರ್ ಪಾತ್ರವಾಗಲಿದೆ. ಡೈಮ್ಲರ್ ಕಂಪನಿಯು ‘ಭಾರತ್ ಬೆಂಜ್’ ಮತ್ತು ‘ಫುಸೋ’ ಎಂಬ ಹೆಸರಿನಲ್ಲಿ ಭಾರತದಲ್ಲಿ ಬೃಹತ್ ಗಾತ್ರದ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಕಳೆದ ವಾರ ಎಫ್​ಸಿಸಿಐನ ವಾರ್ಷಿಕ ಸಭೆಯ ನಂತರ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ವಿಷಯ ಬಹಿರಂಗಪಡಿಸಿದ್ದರು. ಡೈಮ್ಲರ್​​ನ ಭಾಗವಾಗಿರುವ ಮರ್ಸಿಡೀಸ್ ಬೆಂಜ್​ನ ಪ್ರತಿನಿಧಿ ಜೊತೆ ಸಂವಾದ ನಡೆಸಿದ ನಂತರ ಗಡ್ಕರಿ ಈ ವಿಷಯ ತಿಳಿಸಿದ್ದರು.

ಡೈಮ್ಲರ್ ಈಗಾಗಲೇ eCanter ಎಂಬ ಎಲೆಕ್ಟ್ರಿಕ್ ಟ್ರಕ್​ಗಳನ್ನು ಬಿಡುಗಡೆಗೊಳಿಸಿದೆ. 2021ರಲ್ಲಿ ಇದೇ ಸರಣಿಯ ಇನ್ನೊಂದು ಟ್ರಕ್​ ಮಾರುಕಟ್ಟೆಗೆ ಬಿಡಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ಒಮ್ಮೆ ಚಾರ್ಜ್ ಮಾಡಿದರೆ 100 ಕಿಮೀ ಓಡಿಸಲು ಸಾಧ್ಯವಿರುವ eCanter ಟ್ರಕ್​ 3200 ಕೆಜಿ (3.2 ಟನ್) ಭಾರ ಹೋರುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಆಧುನಿಕ ಟ್ರಕ್ ಉತ್ಪಾದನೆಯಲ್ಲಿ ಭಾರತ್ ಬೆಂಜ್ ಈಗಾಗಲೇ ಮುಂಚೂಣಿಯಲ್ಲಿದೆ. ಭಾರತ್ ಬೆಂಜ್​ನ ಬಿಎಸ್ 5 ಟ್ರಕ್​ಗಳು ಜನಪ್ರಿಯವಾಗಿವೆ. ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ತೈಲದ ಪ್ರಮಾಣವನ್ನು ಕಡಿಮೆ ಮಾಡುವ ಚಿಂತನೆ ಸರ್ಕಾರಕ್ಕಿದೆ. ಹೀಗಾಗಿ, ಎಲ್ಲಾ ಬಗೆಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ.

ಇನ್ನಿತರ ಟ್ರಕ್ ಉತ್ಪಾದಕ ಕಂಪನಿಗಳಾದ ಮಹೇಂದ್ರ, ಟಾಟಾ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವತ್ತ ಹೆಜ್ಜೆ ಹಾಕುವ ನಿರೀಕ್ಷೆಯಿದೆ.