
ದಾವೋಸ್, ಜನವರಿ 20: ಭಾರತ ಪ್ರಸ್ತುತದಲ್ಲಿ ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಮತ್ತು ಭವಿಷ್ಯದ ಸುಭದ್ರ ತಾಣವಾಗಿ ಹೊರ ಹೊಮ್ಮುತ್ತಿದ್ದು, ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (WEF) ಎರಡನೇ ದಿನದ ಶೃಂಗ ಸಭೆ ಇದಕ್ಕೆ ಸಾಕ್ಷಿಯಾಯಿತು. 2026ರ ಶುರುವಿನಲ್ಲೇ ಈ ವಿಶ್ವ ಆರ್ಥಿಕ ವೇದಿಕೆ ಮಹತ್ವದ ಸಭೆಯಲ್ಲಿ ಮಂಗಳವಾರ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಭಾರತದೊಂದಿಗೆ ಹೂಡಿಕೆ ಒಪ್ಪಂದಕ್ಕೆ ಫಲಪ್ರದ ಮಾತುಕತೆ ಮತ್ತು ಚರ್ಚೆ ಮಾಡಿದ್ದಾರೆ.
ಭಾರತದ ತ್ವರಿತ, ಶುದ್ಧ ಇಂಧನ ವಿಸ್ತರಣೆಯಲ್ಲಿ ಪಾಲುದಾರರಾಗಲು ಜಾಗತಿಕ ಹೂಡಿಕೆದಾರರನ್ನು ಸೆಳೆದರು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಭಾರತ ಪ್ರಮುಖ ಪಾತ್ರದಾರಿಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
Presented Country Strategy Dialogue on India at the Congress Centre at @wef, Davos, outlining India’s clean energy transition as a driver of growth, competitiveness and social transformation under the leadership of Hon’ble Prime Minister Shri @narendramodi ji.
Highlighted how… pic.twitter.com/v4YtLnTTvt
— Pralhad Joshi (@JoshiPralhad) January 20, 2026
“ಸುಸ್ಥಿರತೆ ಮತ್ತು ಜಾಗತಿಕ ಪರಿವರ್ತನೆಗೆ ಮಾರ್ಗಗಳು” ಕುರಿತ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿದ್ದ ಸಚಿವ ಪ್ರಲ್ಹಾದ ಜೋಶಿ, ಸುಸ್ಥಿರತೆ ಬಾಹ್ಯ ಕಾಳಜಿ ಮಾತ್ರವಲ್ಲ, ಸ್ಪರ್ಧಾತ್ಮಕತೆ, ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯ ಕೇಂದ್ರ ಚಾಲಕವಾಗಿದೆ ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗಿ
“ಜಗತ್ತು ಪರಿವರ್ತನೆಗೊಳ್ಳಬೇಕೆ ಬೇಡವೇ?” ಎಂಬುದು ಈ ದಶಕದ ನಿರ್ಣಾಯಕ ಸವಾಲು ಅಲ್ಲ, ಆದರೆ ಸುಸ್ಥಿರತೆಯನ್ನು ಅಗತ್ಯ ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ಆರ್ಥಿಕವಾಗಿ ಬಲಪಡಿಸುವ ರೀತಿಯಲ್ಲಿ ಹೇಗೆ ತಲುಪಿಸಬಹುದು? ಎಂಬುದೇ ನಮ್ಮ ಮುಂದಿರುವ ನಿಜವಾದ ಸವಾಲು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಡಿಸೆಂಬರ್ 2025ರ ವೇಳೆಗೆ 267 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸಿದೆ ಮತ್ತು 2030ರ ಗುರಿಗಳನ್ನು ಪೂರೈಸುವ ಹಾದಿಯಲ್ಲಿದೆ ಎಂದು ಇದೇ ವೇಳೆ ಜಾಗತಿಕವಾಗಿ ಗಮನ ಸೆಳೆದರು. ಶುದ್ಧ ಇಂಧನ ಮತ್ತು ಸುಸ್ಥಿರತೆಯಲ್ಲಿ ನಮ್ಮ ಬಲವಾದ ದೇಶೀಯ ಉತ್ಪಾದನೆ, ಗ್ರಿಡ್ ಆಧುನೀಕರಣ, ಇಂಧನ ಸಂಗ್ರಹ ಪರಿಹಾರಗಳು ಮತ್ತು ಪರಮಾಣು ಶಕ್ತಿಗಾಗಿ ಉದಯೋನ್ಮುಖ ಚೌಕಟ್ಟುಗಳಿಂದ ಬೆಂಬಲಿತವಾಗಿದೆ. ಸುಸ್ಥಿರ ಮತ್ತು ಅಂತರ್ಗತ ಜಾಗತಿಕ ಇಂಧನ ಪರಿವರ್ತನೆಯನ್ನು ಸಕ್ರಿಯಗೊಳಿಸಲು ಬಂಡವಾಳ ಹಾಗೂ ಸರ್ಕಾರಗಳು, ಖಾಸಗಿ ವಲಯ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸಹಯೋಗದ ಅಗತ್ಯವಿದೆ ಎಂದು ಜೋಶಿ ಅಭಿಪ್ರಾಯಪಟ್ಟರು.
2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವ ಜೋಶಿ, ಭಾರತದ ವಿಧಾನವು “ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಹೇಳಿದರು.
ಭಾರತ ಸುಸ್ಥಿರತೆಯನ್ನು ಕೇವಲ ತಾಂತ್ರಿಕ ಬದಲಾವಣೆಯಾಗಿ ನೋಡದೆ ಆರ್ಥಿಕತೆ ಮತ್ತು ಸಮಾಜದ ಕಾರ್ಯತಂತ್ರದ ರೂಪಾಂತರವಾಗಿ ನೋಡುತ್ತದೆ ಮತ್ತು ಬೆಳವಣಿಗೆಗೆ ಅತ್ಯಂತ ವಿಶ್ವಾಸಾರ್ಹ ಹಾಗೂ ಕೈಗೆಟುಕುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ಮಾರ್ಗವಾಗಿ ದೃಢ ನಿಶ್ಚಯದಿಂದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅನುಸರಿಸುತ್ತಿದೆ ಎಂದು ದೃಢಪಡಿಸಿದರು.
ಇದೇ ವೇಳೆ ಸಚಿವ ಪ್ರಲ್ಹಾದ ವಿವಿಧ ರಾಷ್ಟ್ರಗಳ ಕೈಗಾರಿಕಾ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಸಭೆ ಸಹ ನಡೆಸಿದರು. ಓಮನ್ ಪ್ರಧಾನಿ ಕಚೇರಿ ಆರ್ಥಿಕ ಸಲಹೆಗಾರ ಡಾ. ಸೈದ್ ಮೊಹಮ್ಮದ್ ಅಹ್ಮದ್ ಅಲ್ ಸಕ್ರಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸೌರ, ಪವನ, ಹಸಿರು ಹೈಡ್ರೋಜನ್ ಮತ್ತು ಇಂಧನ ಸಂಗ್ರಹದಲ್ಲಿ ಭಾರತದ ಮಹತ್ತರ ಸಾಧನೆ ಬಗ್ಗೆ ತಿಳಿಯಪಡಿಸಿದರು. ಭಾರತ-ಓಮನ್ ಸಿಇಪಿಎ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ ಬಗ್ಗೆ ಚರ್ಚೆ ಮಾಡಿದ್ದಾರೆ.
ಬೆಲ್ಜಿಯಂ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳು, ಯುರೋಪಿಯನ್ ವ್ಯವಹಾರಗಳು ಮತ್ತು ಅಭಿವೃದ್ಧಿ ಸಹಕಾರ ಸಚಿವ ಮ್ಯಾಕ್ಸಿಮ್ ಪ್ರೆವೋಟ್ ಅವರೊಂದಿಗೆ ಸಹ ಮಹತ್ವದ ಸಭೆ ನಡೆಸಿ, ಭಾರತ-ಬೆಲ್ಜಿಯಂ ಪಾಲುದಾರಿಕೆ ಬಗ್ಗೆ ಪುನರುಚ್ಚರಿಸಿದರು.
ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಸುಬೈಹ್ ಅಬ್ದುಲ್ ಅಜೀಜ್ ಅಲ್-ಮುಖೈಝೀಮ್ ಅವರೊಂದಿಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆ ಸಂಬಂದ ಚರ್ಚಿಸಿದರು.
WEF ವಾರ್ಷಿಕ ಸಭೆಯ ಹೊರತಾಗಿ ಪ್ರಲ್ಹಾದ ಜೋಶಿ ಅವರು ಅಂತಾರಾಷ್ಟ್ರೀಯ ಸಹಕಾರ ಮತ್ತು ಶುದ್ಧ ಇಂಧನದಲ್ಲಿ ಹೂಡಿಕೆಯನ್ನು ಬಲಪಡಿಸಲು ಉನ್ನತ ಮಟ್ಟದ ದ್ವಿಪಕ್ಷೀಯ ಸಂವಾದ ನಡೆಸಿದರು. ಭಾರತದಲ್ಲಿ ದೀರ್ಘಕಾಲೀನ ಹವಾಮಾನ ಮತ್ತು ಶುದ್ಧ ಇಂಧನ ಹೂಡಿಕೆ ಹೆಚ್ಚಿಸುವತ್ತ ಗಮನಹರಿಸಿದ ಜೋಶಿ, ಲಾ ಕೈಸ್ಸೆಯ ಅಧ್ಯಕ್ಷ ಮತ್ತು ಸಿಇಒ ಚಾರ್ಲ್ಸ್ ಎಮಂಡ್ ಮತ್ತು ಸಿಒಒ ಶ್ರೀಮತಿ ಸಾರಾ ಬೌಚರ್ಡ್ ಅವರೊಂದಿಗೆ ಚರ್ಚೆ ನಡೆಸಿದರು. 2030ರ ವೇಳೆಗೆ ಗುಂಪಿನ ಬದ್ಧ USD 400 ಶತಕೋಟಿ ಹವಾಮಾನ ಕ್ರಿಯಾ ಹೂಡಿಕೆಗಳನ್ನು ಬಳಸಿಕೊಳ್ಳಲು “ಭಾರತದೊಂದಿಗೆ ಪಾಲುದಾರಿಕೆ” ವೃದ್ಧಿಗೆ ಪ್ರೋತ್ಸಾಹಿಸಿದರು.
ಐಕಿಯಾ ಚಿಲ್ಲರೆ ವ್ಯವಹಾರವನ್ನು ನಿರ್ವಹಿಸುವ ಇಂಗ್ಕಾ ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷ ಜುವೆನ್ಸಿಯೊ ಮೇಜ್ಟು ಅವರನ್ನು ಭೇಟಿಯಾದ ಪ್ರಲ್ಹಾದ ಜೋಶಿ, ಅವರಲ್ಲಿ ಇಂಗ್ಕಾ ಗ್ರೂಪ್ ಭಾರತದ ನವೀಕರಿಸಬಹುದಾದ ಇಂಧನ ವಲಯವನ್ನು ವಿಶೇಷವಾಗಿ ಸೌರ, ಪವನ ಮತ್ತು ಹೈಬ್ರಿಡ್ ಪರಿಹಾರಗಳಲ್ಲಿ ಪ್ರವೇಶಿಸಲು ಆಸಕ್ತಿ ವ್ಯಕ್ತಪಡಿಸಿದೆ.
ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಸಭೆ ವೇಳೆ ಪ್ರಮುಖವಾಗಿ “ಇಂಡಿಯಾ ಪೆವಿಲಿಯನ್” ಸಹ ಉದ್ಘಾಟನೆ ಕಂಡಿತು. ಸಚಿವ ಪ್ರಹ್ಲಾದ್ ಜೋಶಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ವಿವಿಧ ರಾಜ್ಯಗಳ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಗವಹಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಯುಎಇಯ ಫ್ರಂಟ್ಲೈನ್ ಆರೋಗ್ಯ ಕಾರ್ಯಕರ್ತರಿಗೆ ಶುಭ ಸುದ್ದಿ; 37 ಕೋಟಿ ರೂ. ಆರ್ಥಿಕ ನಿಧಿ ಘೋಷಿಸಿದ ಬುರ್ಜೀಲ್ ಹೋಲ್ಡಿಂಗ್ಸ್
ಇಂಡಿಯಾ ಪೆವಿಲಿಯನ್ ಉದ್ಘಾಟನೆ ವೇಳೆ ಸಚಿವ ಪ್ರಲ್ಹಾದ ಜೋಶಿ ‘ದಿ ಇಂಡಿಯಾ ಸ್ಟೋರಿ’ ಹೆಸರಿನ ಹಸಿರು ಹೂಡಿಕೆ ಕೈಪಿಡಿ ಸಹ ಬಿಡುಗಡೆ ಮಾಡಿದರು. ಇದು ಉತ್ಪಾದನೆ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತದ ಸಾಮರ್ಥ್ಯ ಹಾಗೂ 2047ರ ವಿಕಸಿತ ಭಾರತದ ದೃಷ್ಟಿಕೋನ ಮತ್ತು ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಗೆ ಬದ್ಧತೆಯನ್ನು ಪ್ರಸ್ತುತಪಡಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದರು.
ಭಾರತ NDC ಗುರಿಗಳಿಗಿಂತ ಐದು ವರ್ಷಗಳ ಮೊದಲೇ ಶೇ.50% ಪಳೆಯುಳಿಕೆ ರಹಿತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸಿದೆ. ಇಂಧನ ಪರಿವರ್ತನೆಯನ್ನು ಜನ-ಕೇಂದ್ರಿತ ಚಳುವಳಿಯಾಗಿ ಪರಿವರ್ತಿಸಿದೆ ಎಂದು ಪ್ರಲ್ಹಾದ ಜೋಶಿ ವಿದೇಶಿ ನಾಯಕರ ಗಮನ ಸೆಳೆದರು.
ಭಾರತದಲ್ಲಿ ಸೌರ ಸುಂಕಗಳು ಸುಮಾರು ಶೇ.80ರಷ್ಟು ಕಡಿಮೆಗೊಳಿಸಿ ನವೀಕರಿಸಬಹುದಾದ ಇಂಧನ ಮತ್ತು ಸಂಗ್ರಹಣೆಗೆ ಒಟ್ಟು ನೀಡಿದೆ. ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಜಾಗತಿಕವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿದ್ದು, ದೇಶೀಯ ಉತ್ಪಾದನಾ ಸಾಮರ್ಥ್ಯವು 144 GW ಗೆ ವಿಸ್ತರಣೆ ಕಂಡಿದೆ. ಭಾರತವನ್ನು ಕೇವಲ ಮಾರುಕಟ್ಟೆಯಾಗಿ ಮಾತ್ರವಲ್ಲದೆ, “ವಿಕಸಿ ಭಾರತ 2047” ಕಡೆಗೆ ಪ್ರಯಾಣದಲ್ಲಿ ವಿಶ್ವಾಸಾರ್ಹ ಉತ್ಪಾದನಾ ಮತ್ತು ಹೂಡಿಕೆ ಕೇಂದ್ರವಾಗಿ ಸ್ಥಾನ ಪಡೆದಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿಶ್ವ ಆರ್ಥಿಕ ವೇದಿಕೆ ಗಮನ ಸೆಳೆದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.