ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

ಲೋಕಸಭೆ ಅಂಗೀಕರಿಸಿದ ಬೆನ್ನಲ್ಲೇ ಇಂದು ರಾಜ್ಯಸಭೆಯು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ಅಂಗೀಕರಿಸಿದೆ. ಈ ವಿಧೇಯಕವು ಕಾನೂನಾಗಿ ಜಾರಿಗೆ ಬರುವ ಮುನ್ನ ಅಂತಿಮ ಅಂಕಿತಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನೆಯಾಗಲಿದೆ. ಸಾರ್ವಜನಿಕರ ಹೆಚ್ಚುತ್ತಿರುವ ಒತ್ತಡದ ನಡುವೆ ಕೇಂದ್ರ ಸರ್ಕಾರವು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ಸಂಸತ್ತಿನಲ್ಲಿ ಮಂಡಿಸಿತು.

ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ
Parliament Monsoon Session
Image Credit source: PTI

Updated on: Jul 30, 2026 | 10:03 PM

ನವದೆಹಲಿ, ಜುಲೈ 30: ಲೋಕಸಭೆಯಲ್ಲಿ ಅಂಗೀಕಾರಗೊಂಡ ಮರುದಿನವೇ ಅಂದರೆ ಇಂದು (ಗುರುವಾರ) ವಿರೋಧ ಪಕ್ಷಗಳ ಗದ್ದಲ ಮತ್ತು ಸಭಾತ್ಯಾಗದ ನಡುವೆಯೂ ರಾಜ್ಯಸಭೆಯು ‘ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕ’ವನ್ನು (Anti-Paper Leak Bill) ಅಂಗೀಕರಿಸಿದೆ. ಈ ವಿಧೇಯಕವನ್ನು ಈಗ ಅಂತಿಮ ಅಂಕಿತಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಲಾಗುತ್ತದೆ. ಇದಕ್ಕೂ ಮುನ್ನ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಇದು ದೇಶದ ವಿದ್ಯಾರ್ಥಿಗಳು ಮತ್ತು ಯುವಜನರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸರ್ಕಾರದ ಅತ್ಯುನ್ನತ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದರು.

ಈ ವಿಧೇಯಕವನ್ನು ಮಂಡಿಸುತ್ತಾ ಮಾತನಾಡಿದ ಜಿತೇಂದ್ರ ಸಿಂಗ್, “ಪ್ರತಿಯೊಬ್ಬರಿಗೂ ತಿಳಿದಿರುವಂತೆ ಈ ವಿಧೇಯಕವು ಕೆಳಮನೆಯಲ್ಲಿ ಅಂಗೀಕಾರಗೊಂಡಿದೆ. ಅಲ್ಲಿ ಸುಮಾರು 10 ಗಂಟೆಗಳ ಕಾಲ ಚರ್ಚೆಗೆ ಸಮಯ ಮೀಸಲಿಡಲಾಗಿತ್ತು. ಗದ್ದಲದ ನಡುವೆಯೂ ಅಲ್ಲಿ ಚರ್ಚೆ ನಡೆದಿದೆ. ಈಗ ಈ ವಿಧೇಯಕವು ಮೇಲ್ಮನೆಗೆ ಅಂದರೆ ಹಿರಿಯರ, ಜ್ಞಾನಿಗಳ ಮತ್ತು ಪರಿಣತರ ಮನೆಗೆ ಬಂದಿದೆ” ಎಂದು ಹೇಳಿದರು.

ಇದನ್ನೂ ಓದಿ: ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ದೆಹಲಿ ಸರ್ಕಾರ; ಪ್ರತಿಭಟನಾಕಾರರ ಮೇಲಿನ ಕೇಸ್ ಕೈಬಿಡಲು ನಿರ್ಧಾರ

ಪರೀಕ್ಷಾ ಅಕ್ರಮ ತಡೆ ಕಾಯ್ದೆಗೆ ತಿದ್ದುಪಡಿ ತಂದಿದ್ದೇಕೆ?:

ನೀಟ್ (NEET-UG 2024) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ಭಾರಿ ಜನಾಕ್ರೋಶ ವ್ಯಕ್ತವಾದ ನಂತರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024’ ಅನ್ನು ಜಾರಿಗೆ ತರಲಾಗಿತ್ತು. ಈ ಕಾನೂನು ಪರೀಕ್ಷಾ ವಂಚನೆಗಳನ್ನು ಅಪರಾಧ ಎಂದು ಘೋಷಿಸಿತ್ತಾದರೂ, ಕಾಯ್ದೆ ಜಾರಿಯಲ್ಲಿದ್ದರೂ ಈ ವರ್ಷ ಕೂಡ ನೀಟ್ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ವ್ಯಾಪಕ ಪ್ರತಿಭಟನೆಯ ನಂತರ ಈ ವಿಷಯವು 2026ರಲ್ಲಿ ಮತ್ತಷ್ಟು ತೀವ್ರರೂಪಕ್ಕೆ ತಿರುಗಿತು.

ಇದನ್ನೂ ಓದಿ: ‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

ಪದೇಪದೆ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಯು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಿದೆ ಹಾಗೂ ಹಲವರನ್ನು ಆತ್ಮಹತ್ಯೆಗೆ ತಳ್ಳಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ವಿದ್ಯಾರ್ಥಿಗಳು ವ್ಯವಸ್ಥಿತ ಸುಧಾರಣೆಗಳು, ಹೊಣೆಗಾರಿಕೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಸಂಸತ್ತಿನ ಮುಂಗಾರು ಅಧಿವೇಶನದ ವೇಳೆಯಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳೊಂದಿಗೆ ಈ ಚಳವಳಿಯು ತೀವ್ರಗೊಂಡಿತ್ತು. ಸಾರ್ವಜನಿಕರ ಹೆಚ್ಚುತ್ತಿರುವ ಒತ್ತಡದ ನಡುವೆ ಕೇಂದ್ರ ಸರ್ಕಾರವು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ಸಂಸತ್ತಿನಲ್ಲಿ ಮಂಡಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us