AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ದೆಹಲಿ ಸರ್ಕಾರ; ಪ್ರತಿಭಟನಾಕಾರರ ಮೇಲಿನ ಕೇಸ್ ಕೈಬಿಡಲು ನಿರ್ಧಾರ

ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ದೆಹಲಿ ಸರ್ಕಾರ ಇಂದು ತಿಳಿಸಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ವಿರುದ್ಧದ ಕೇಸುಗಳನ್ನು ಹಿಂಪಡೆಯುವುದಿಲ್ಲ ಎಂದು ಕೂಡ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಸಿಜೆಪಿಯ ಬೇಡಿಕೆ ಈಡೇರಿದಂತಾಗಿದೆ.

ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ದೆಹಲಿ ಸರ್ಕಾರ; ಪ್ರತಿಭಟನಾಕಾರರ ಮೇಲಿನ ಕೇಸ್ ಕೈಬಿಡಲು ನಿರ್ಧಾರ
Delhi ProtestersImage Credit source: PTI
ಸುಷ್ಮಾ ಚಕ್ರೆ
|

Updated on: Jul 30, 2026 | 7:58 PM

Share

ನವದೆಹಲಿ, ಜುಲೈ 30: ದೆಹಲಿಯ ಜಂತರ್ ಮಂತರ್‌ನಲ್ಲಿ (Delhi Protest) ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾಮಾನ್ಯ ಜನರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದರೂ, ಪ್ರತಿಭಟನಾಕಾರರ ಮೇಲಿನ 13 ಎಫ್‌ಐಆರ್‌ಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಗೃಹ ಸಚಿವಾಲಯ ದೆಹಲಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ದೆಹಲಿಯ ಗೃಹ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ಚಳವಳಿಯ ಸಮಯದಲ್ಲಿ ಯಾರನ್ನಾದರೂ ವಶಕ್ಕೆ ಪಡೆಯಲಾಗಿದ್ದರೆ ಅಥವಾ ಬಂಧಿಸಿದ್ದರೆ ಅಂತಹವರನ್ನು ಪರಿಶೀಲನೆಯ ನಂತರ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಬಂಧಿತರನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಎಕ್ಸ್​ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್

ನೀಟ್ – ಯುಜಿ ಪರೀಕ್ಷೆಯ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ಸಿಜೆಪಿ ತನ್ನ ಹೋರಾಟವನ್ನು ಹಿಂತೆಗೆದುಕೊಂಡಿತ್ತು. ಆದರೆ, ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆಯ ವೇಳೆ ಪ್ರಮುಖ ಬೇಡಿಕೆಗಳನ್ನು ಇಟ್ಟಿತ್ತು. ಅವುಗಳಲ್ಲಿ ಪ್ರತಿಭಟನಾಕಾರರ ಮೇಲೆ ಯಾವುದೇ ಕೇಸ್ ದಾಖಲಿಸಬಾರದು ಎಂಬುದು ಕೂಡ ಒಂದಾಗಿತ್ತು. ಇದರ ಬೆನ್ನಲ್ಲೇ ಬಿಹಾರ ಮತ್ತು ಅಸ್ಸಾಂನಂತಹ ರಾಜ್ಯಗಳು ಪ್ರತಿಭಟನಾಕಾರರ ಮೇಲಿನ ಎಫ್​ಐಆರ್ ಹಿಂಪಡೆದಿದ್ದವು. ಆದರೆ, ದೆಹಲಿಯಲ್ಲಿ ಕೇಸ್ ಹಿಂಪಡೆದಿರಲಿಲ್ಲ.

ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳುವಾಗ, ದೆಹಲಿ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಿಜೆಪಿ ಹೇಳಿತ್ತು. ಆದರೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಇನ್ನೂ ಸಂಪೂರ್ಣವಾಗಿ ಹಿಂಪಡೆದಿಲ್ಲ ಎಂದು ಸಿಜೆಪಿ ಪದೇ ಪದೇ ಆರೋಪಿಸುತ್ತಿತ್ತು. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾದರೆ ಮತ್ತೆ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಸಿಜೆಪಿ ಎಚ್ಚರಿಸಿತ್ತು. ಇದೀಗ ದೆಹಲಿಯಲ್ಲೂ ಕೇಸ್ ಹಿಂಪಡೆಯಲಾಗಿದೆ.

ಇದನ್ನೂ ಓದಿ: ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ

2,873 ಕ್ರಿಮಿನಲ್ ಹಿನ್ನೆಲೆಯುಳ್ಳವರ ಗುರುತು:

ಪ್ರತಿಭಟನಾ ಸ್ಥಳದಲ್ಲಿದ್ದ ಅಪಾರ ಸಂಖ್ಯೆಯ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ದೆಹಲಿ ಪೊಲೀಸರು ಗುರುತಿಸಿದ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ. ಪೊಲೀಸ್ ಮೂಲಗಳ ಪ್ರಕಾರ, ಮುಖ ಗುರುತಿಸುವ ತಂತ್ರಜ್ಞಾನ (Facial Recognition System – FRS) ಮತ್ತು ಇತರ ಡಿಜಿಟಲ್ ಉಪಕರಣಗಳನ್ನು ಬಳಸಿ ಜುಲೈ 20ರಿಂದ 25ರ ನಡುವೆ ಜಂತರ್ ಮಂತರ್‌ನಲ್ಲಿ 2,873 ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಇದ್ದುದನ್ನು ಪತ್ತೆಹಚ್ಚಲಾಗಿದೆ. ಈ ಅಪರಾಧಿಗಳು ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ದೆಹಲಿ ಪೊಲೀಸರು ಪ್ರತ್ಯೇಕ ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us