ಗುವಾಹಟಿ: ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತಿದ್ದು ಮಿಜೋರಾಂ ಮುಖ್ಯಮಂತ್ರಿ ಜೊರಮ್ತಂಗಾ ಅವರು ಜುಲೈ 26 ಘರ್ಷಣೆಗೆ ಸಂಬಂಧಿಸಿದಂತೆ ಅಸ್ಸಾಂ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಹಿಂಪಡೆಯುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆಯ ನಂತರ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಇಬ್ಬರೂ ಮುಖ್ಯಮಂತ್ರಿಗಳು ಪ್ರಯತ್ನಿಸಿದ ಒಂದು ದಿನದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾನುವಾರ ಮಿಜೋರಾಂ ಸರ್ಕಾರವು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೆಸರನ್ನು ಜುಲೈ 26 ರಂದು ಎಫ್‌ಐಆರ್‌ನಿಂದ ಕೈಬಿಡುವುದಾಗಿ ಹೇಳಿತ್ತು. ಅದರ ನಂತರ ಮಿಜೋರಾಂನ ರಾಜ್ಯಸಭಾ ಸಂಸದ ಕೆ ವನ್ಲಾಲ್ವೇನಾ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾಗಿ ಶರ್ಮಾ ಘೋಷಿಸಿದರು. ಮಾಧ್ಯಮ ಸಂದರ್ಶನಕ್ಕೆ ಸಂಬಂಧಿಸಿದಂತೆ ವನ್ಲಾಲ್ವೇನಾ ವಿರುದ್ಧ ಪ್ರಕರಣ ದಾಖಲಾಗಿತ್ತು.
“ಸೌಹಾರ್ದಯುತ ಪರಿಹಾರಕ್ಕಾಗಿ ಅನುಕೂಲಕರ ವಾತಾವರಣವನ್ನು ನಿರ್ಮಿಸುವ ಸಲುವಾಗಿ” ಎಫ್ಐಆರ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜೊರಮ್ತಂಗಾ ಸೋಮವಾರ ಹೇಳಿದ್ದಾರೆ.
In order to build a conducive atmosphere for amicable solution to the #MizoramAssamBorder dispute & to reduce the plight of suffering citizens,I have directed @mizorampolice to withdraw FIR dt. 26.07.2021 filed at Vairengte,Kolasib District,Mizoram against all the accused persons pic.twitter.com/IlQ65jssIL
— Zoramthanga (@ZoramthangaCM) August 2, 2021
ಸೋಮವಾರ ಸಂಜೆ ಟ್ವೀಟ್ ಮಾಡಿದ ಅವರು ಮಿಜೋರಾಂ- ಅಸ್ಸಾಂ ಗಡಿ ವಿವಾದಕ್ಕೆ ಸೌಹಾರ್ದಯುತ ಪರಿಹಾರಕ್ಕಾಗಿ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಮತ್ತು ನಾಗರಿಕರ ಸಂಕಷ್ಟವನ್ನು ಕಡಿಮೆ ಮಾಡಲು, ನಾನು 26.07.2021ರಂದು ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗ್ಟೆಯಲ್ಲಿ ದಾಖಲಾಗಿರುವ ಎಲ್ಲಾ ಆರೋಪಿಗಳ ವಿರುದ್ಧದ ಎಫ್ಐಆರ್ ಹಿಂಪಡೆಯುವಂತೆ ಮಿಜೋರಾಂ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಮಿಜೊರಾಂ ಅಧಿಕಾರಿಗಳ ವಿರುದ್ಧದ ಪ್ರಕರಣಗಳನ್ನು ಕೈಬಿಡುವ ಮೂಲಕ ಜೊರಮ್ತಂಗಾ ಅವರ “ಧನಾತ್ಮಕ ಗೌರವಕ್ಕೆ ಮನ್ನಣೆ ನೀಡುವುದಾಗಿ ಹೇಳಿದ್ದಾರೆ.
ಕಳೆದ ಸೋಮವಾರ ಗಡಿ ಘರ್ಷಣೆಯಲ್ಲಿ ಆರು ಅಸ್ಸಾಂ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರಿಂದ, ಬಿಕ್ಕಟ್ಟು ಉಂಟಾಗಿತ್ತು. ಎರಡೂ ರಾಜ್ಯಗಳು ಸಿಎಪಿಎಫ್ ಜೊತೆಗೆ ಗಡಿಯಲ್ಲಿ ತಮ್ಮ ಪಡೆಗಳನ್ನು ನಿಯೋಜಿಸಿವೆ. ಯಾವುದೇ ರಾಜ್ಯವು ಹಿಂದೆ ಸರಿಯಲು ಸಿದ್ಧವಿರಲಿಲ್ಲ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳು ಆಯಾ ಪೊಲೀಸ್ ಠಾಣೆಗಳಲ್ಲಿ (ಅಸ್ಸಾಂನ ಧೋಲೈ ಮತ್ತು ಮಿಜೋರಾಂನ ವೈರೆಂಗ್ಟೆ) ಪರಸ್ಪರ ಆರೋಪಗಳನ್ನು ಸಲ್ಲಿಸಿವೆ. ಸೋಮವಾರದ ಹೊತ್ತಿಗೆ, ಮಿಜೋರಾಂ ಎಲ್ಲಾ ಆರೋಪಗಳನ್ನು ಕೈಬಿಟ್ಟರೆ, ಮಿಜೋರಾಂನ ವೈರೆಂಗ್ಟೆ ಜಿಲ್ಲೆಯ ಆರು ಪೊಲೀಸ್ ಅಧಿಕಾರಿಗಳ ವಿರುದ್ಧ ಅಸ್ಸಾಂ ಸರ್ಕಾರದ ಪ್ರಕರಣ ಇನ್ನೂ ಉಳಿದಿದೆ.
ಇದನ್ನೂ ಓದಿ: ಗಡಿ ಸಂಘರ್ಷವನ್ನು ಅಸ್ಸಾಂ ಸಿಎಂ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ: ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್ ಸಂಸದ
ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ಗಡಿ ವಿವಾದ; ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಎಫ್ಐಆರ್ ದಾಖಲು