ಚೆನ್ನೈ: ತಾಯ್ನಾಡಿಗೆ ತೆರಳಿರುವ ವಲಸೆ ಕಾರ್ಮಿಕರ (Migrant Workers) ವಾಪಸಾತಿ ವಿಳಂಬವಾಗುತ್ತಿರುವುದು ತಮಿಳುನಾಡಿನ ಕೈಗಾರಿಕೋದ್ಯಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾರ್ಮಿಕರು ಮುಖ್ಯವಾಗಿ ಹೋಳಿ ಹಬ್ಬದ ಕಾರಣ ತವರು ರಾಜ್ಯಗಳಿಗೆ ತೆರಳಿದ್ದರು. ಈ ಮಧ್ಯೆ, ಸ್ಥಳೀಯರ ದಾಳಿಗಳ ಕುರಿತಾದ ನಕಲಿ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವುದು ವಲಸೆ ಕಾರ್ಮಿಕರಲ್ಲಿ ಭಯಕ್ಕೆ ಕಾರಣವಾಗಿದೆ. ಹೀಗಾಗಿ ಅವರು ತಮಿಳುನಾಡಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದು ರಾಜ್ಯದ ರಾಜ್ಯದ ಕೈಗಾರಿಕಾ ವಲಯದಲ್ಲಿ ಆತಂಕ ಸೃಷ್ಟಿಸಿದ್ದು, ಉದ್ಯೋಗದಾತರು ಕೆಲಸ ಸ್ಥಗಿತವಾಗುವ ಮತ್ತು ಆದಾಯ ಕುಸಿಯುವ ಭಯದಲ್ಲಿದ್ದಾರೆ.
ಹೋಟೆಲ್ ಉದ್ಯಮವು ನೇರವಾಗಿ ಮತ್ತು ಪರೋಕ್ಷವಾಗಿ ಚೆನ್ನೈನಲ್ಲಿ 10 ಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ. ಈ ಪೈಕಿ 2.5 ಲಕ್ಷಕ್ಕೂ ಹೆಚ್ಚು ಜನರು ಹೋಟೆಲ್, ಬೇಕರಿ, ಟೀ ಅಂಗಡಿ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಿರುವ ಉತ್ತರ ರಾಜ್ಯಗಳ ವಲಸೆ ಕಾರ್ಮಿಕರಾಗಿದ್ದಾರೆ. ಸಾಮಾನ್ಯವಾಗಿ ಅವರು ವರ್ಷಕ್ಕೊಮ್ಮೆ ಒಂದು ತಿಂಗಳ ರಜೆ ಪಡೆದು ತವರಿಗೆ ಹೋಗುತ್ತಾರೆ. ಆದರೆ ಈಗ ಸ್ಥಳೀರು ವಲಸಿಗರ ಮೇಲೆ ಮಾಡುತ್ತಿರುವ ದಾಳಿಗಳಿಗೆ ಸಂಬಂಧಿಸಿದ ನಕಲಿ ವಿಡಿಯೋಗಳು ಸೃಷ್ಟಿಸಿರುವ ಭಯದಿಂದಾಗಿ ಅವರು ಹಿಂದಿರುಗುವ ಬಗ್ಗೆ ಅನುಮಾನಗಳು ಹೆಚ್ಚಾಗಿವೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಲ್ಲದೆ, ನಮ್ಮ ವ್ಯವಹಾರವು ನಷ್ಟಕ್ಕೆ ಸಿಲುಕಲಿದೆ ಎಂದು ಚೆನ್ನೈ ಹೋಟೆಲ್ ಸಂಘದ ಅಧ್ಯಕ್ಷ ಎಂ. ರವಿ ತಿಳಿಸಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ. ಸಂಘವು ಚೆನ್ನೈನಲ್ಲಿ ಸುಮಾರು 10,000 ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸದಸ್ಯತ್ವ ಹೊಂದಿದೆ.
ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Tamil Nadu: ತಮಿಳುನಾಡು; ಡಿಎಂಕೆ ಕೌನ್ಸಿಲರ್ ನೇತೃತ್ವದ ಗುಂಪಿನಿಂದ ಹಲ್ಲೆ, ಯೋಧ ಸಾವು
ತಮಿಳುನಾಡು ಸುರಕ್ಷಿತವಾಗಿಲ್ಲ ಎಂದು ವಲಸೆ ಕಾರ್ಮಿಕರಿಗೆ ಅನಿಸಿದರೆ ಅವರು ತಮಿಳುನಾಡಿಗೆ ಬರುವುದರ ಬದಲು ಕರ್ನಾಟಕದಂತಹ ನೆರೆಯ ರಾಜ್ಯಗಳಿಗೆ ಹೋಗಬಹುದು. ಆದ್ದರಿಂದ ಸರ್ಕಾರ ವಲಸೆ ಕಾರ್ಮಿಕರ ಸುರಕ್ಷತೆಯನ್ನು ಖಾತರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಲಸೆ ಕಾರ್ಮಿಕರು ತಮಿಳುನಾಡಿನಾದ್ಯಂತ ಕೆಲಸ ಮಾಡುತ್ತಿದ್ದರೂ ಕೊಯಮತ್ತೂರು ಮತ್ತು ತಿರುಪ್ಪೂರ್ ಜಿಲ್ಲೆಗಳು ಕ್ರಮವಾಗಿ ಉತ್ಪಾದನೆ ಮತ್ತು ಗಾರ್ಮೆಂಟ್ ಉದ್ಯಮಗಳಿಗೆ ಹೆಸರುವಾಸಿಯಾಗಿದ್ದು, ವಲಸೆ ಕಾರ್ಮಿಕರನ್ನು ಹೆಚ್ಚು ಅವಲಂಬಿಸಿವೆ.
ಕಾರ್ಮಿಕರ ಕೊರತೆಯಿಂದಾಗಿ ಅನೇಕ ಕೈಗಾರಿಕಾ ಘಟಕಗಳಲ್ಲಿ ಉತ್ಪಾದನೆಯು ತೀವ್ರವಾಗಿ ಕುಸಿದಿದೆ ಎಂದು ಕೊಯಮತ್ತೂರು ಕೈಗಾರಿಕಾ ಸಂಸ್ಥೆಗಳ ಒಕ್ಕೂಟದ ಸಂಚಾಲಕ ಜೇಮ್ಸ್ ಎಂ ತಿಳಿಸಿದ್ದಾರೆ.
ಪ್ರಮುಖ ಕಂಪನಿಗಳಲ್ಲಿ, ಕಾರ್ಮಿಕರ ಕೊರತೆಯಿಂದ ಉತ್ಪಾದನೆಯು ಶೇ 10-15ರಷ್ಟು ಕುಂಠಿತವಾಗಿದೆ. ಇರುವ ಕಾರ್ಮಿಕರನ್ನೇ ಹೆಚ್ಚುವರಿ ದುಡಿಸಿಕೊಂಡು ಉತ್ಪಾದನೆ ಮಾಡುವ ಸವಾಲುಗಳನ್ನು ಉದ್ಯಮಗಳು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಸುಮಾರು 1ರಿಂದ 1.5 ಲಕ್ಷ ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ತೆರಳಿದವರು ವಾಪಸಾಗಿಲ್ಲ ಎಂಬುದು ಕೈಗಾರಿಕಾ ಸಂಸ್ಥೆಗಳ ಒಕ್ಕೂಟದ ಲೆಕ್ಕಾಚಾರಗಳಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Tue, 21 March 23