ದೆಹಲಿ ಪ್ರತಿಭಟನೆಯಲ್ಲಿ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಪರ ಪೋಸ್ಟರ್

ದೆಹಲಿಯ ವಾಯು ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಪರ ಘೋಷಣೆಗಳು ಮತ್ತು ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಪ್ರತಿಭಟನೆ ಹಿಂಸಚಾರಕ್ಕೆ ಮಾರ್ಪಟ್ಟು, ಇದರಿಂದ ಪೊಲೀಸರಿಗೆ ಗಾಯಗಳಾಗಿವೆ.

ದೆಹಲಿ ಪ್ರತಿಭಟನೆಯಲ್ಲಿ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಪರ ಪೋಸ್ಟರ್
ದೆಹಲಿಯಲ್ಲಿ ಪ್ರತಿಭಟನೆ

Updated on: Nov 24, 2025 | 10:59 AM

ದೆಹಲಿ, ನ.24: ದೆಹಲಿಯಲ್ಲಿ ಭಾನುವಾರದಂದು (ನ.23) ವಾಯು ಮಾಲಿನ್ಯದ ವಿರುದ್ಧ ಇಂಡಿಯಾ ಗೇಟ್‌ ಬಳಿ ನಡೆದ ಪ್ರತಿಭಟನೆಯಲ್ಲಿ (Delhi protest) ಆಂಧ್ರಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಅವರನ್ನು ಬೆಂಬಲಿಸುವ ಪೋಸ್ಟರ್‌ಗಳು ಮತ್ತು ಘೋಷಣೆಗಳು ಕಾಣಿಸಿಕೊಂಡಿತ್ತು. ಪ್ರತಿಭಟನಾಕಾರರ ಗುಂಪೊಂದು ಮಾದ್ವಿ ಹಿಡ್ಮಾ ಚಿರಾಯುವಾಗಲಿ ಎಂಬ ಪೋಷಣೆಗಳನ್ನು ಪ್ರತಿಭಟನೆ ವೇಳೆ ಕೂಗಿದ್ದು, ಇದೀಗ ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಭಟನಾಕಾರರು “ಬಿರ್ಸಾ ಮುಂಡಾದಿಂದ ಮದ್ವಿ ಹಿಡ್ಮಾವರೆಗೆ, ನಮ್ಮ ಕಾಡುಗಳು ಮತ್ತು ಪರಿಸರದ ಹೋರಾಟ ಮುಂದುವರಿಯುತ್ತದೆ” ಎಂಬ ಪೋಸ್ಟರ್​​​ಗಳನ್ನು ಹಿಡಿದುಕೊಂಡಿದ್ದರು.

ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಎಎನ್​​ಐ ವಿಡಿಯೋವೊಂದನ್ನು ಎಕ್ಸ್​​ನಲ್ಲಿ ಹಂಚಿಕೊಂಡಿದೆ. ಇದೀಗ ದೆಹಲಿ ಪೋಲಿಸರು ಈ ಪೋಸ್ಟರ್​ ಹಾಗೂ ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘೋಷಣೆಗಳನ್ನು ಕೂಗಿದವರನ್ನು ಗುರುತಿಸಲಾಗುವುದು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಮಾದ್ವಿ ಹಿಡ್ಮಾ ಹಿನ್ನಲೆ:

ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ 26 ಸಶಸ್ತ್ರ ದಾಳಿಗಳಿಗೆ ಕಾರಣನಾಗಿದ್ದ ಹಿಡ್ಮಾ, ನವೆಂಬರ್ 18ರಂದು ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. 1981ರಲ್ಲಿ ಸುಕ್ಮಾದಲ್ಲಿ ಜನಿಸಿದ ಹಿಡ್ಮಾ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್​​​ ನಾಯಕರಾಗಿದ್ದರು. ಅಲ್ಲಿಂದ ಸಿಪಿಐ ಮಾವೋವಾದಿಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಕೇಂದ್ರ ಸಮಿತಿಯ ಕಿರಿಯ ಸದಸ್ಯರಾದರು. ಕೇಂದ್ರ ಸಮಿತಿಯಲ್ಲಿ ನೇಮಕಗೊಂಡ ಮೊದಲ ಬಸ್ತಾರ್ ಪ್ರದೇಶದ ಏಕೈಕ ಬುಡಕಟ್ಟು ಸದಸ್ಯರಾಗಿದ್ದರು. 2010ರಲ್ಲಿ ದಾಂತೇವಾಡದಲ್ಲಿ ನಡೆದ ದಾಳಿಯಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. 2013ರಲ್ಲಿ ಜಿರಾಮ್ ಘಾಟಿಯಲ್ಲಿ ನಡೆದ ದಾಳಿಯಲ್ಲಿ ಕಾಂಗ್ರೆಸ್‌ನ ನಾಯಕರು ಸೇರಿದಂತೆ 27 ಜನರನ್ನು ಬಲಿ ತೆಗೆದುಕೊಂಡಿದ್ದರು. 2021 ರಲ್ಲಿ ಸುಕ್ಮಾ-ಬಿಜಾಪುರದಲ್ಲಿ ನಡೆದ ದಾಳಿಯಲ್ಲಿಯೂ ಹಿಡ್ಮಾ ಪ್ರಮುಖ ಪಾತ್ರವಹಿಸಿದ್ದು, ಇದರಲ್ಲಿ 22 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಎಲ್ಲ ಕೃತ್ಯಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡು ಮಾದ್ವಿ ಹಿಡ್ಮಾ ಅವರನ್ನು ಎನ್‌ಕೌಂಟರ್‌ ಮಾಡಲು ಸರ್ಕಾರ ಆದೇಶ ನೀಡಿತ್ತು​​​ ಹಾಗೂ ಅವರ ತಂಡವನ್ನು ಪತ್ತೆ ಮಾಡಿದವರಿಗೆ 50 ಲಕ್ಷ ಬಹುಮಾನ ನೀಡಲಾಗುವುದು ಎಂದು ಸರ್ಕಾರ ಘೋಷಣೆಯನ್ನು ಕೂಡ ಮಾಡಿತ್ತು.

ಇದನ್ನೂ ಓದಿ: ನರರಕ್ಷಕರೋ, ನರಹಂತಕರೋ..! ರಕ್ಕಸ ಕಾರ್ಯಕ್ಕೆ ಉಗ್ರ ವೈದ್ಯರ ಜಾಲ ನಿರ್ಮಾಣಗೊಂಡ ಕಥೆ

ದೆಹಲಿ ವಾಯು ಮಾಲಿನ್ಯ ವಿರೋಧಿಸಿ ಪ್ರತಿಭಟನೆ

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ವಿರುದ್ಧ ಭಾನುವಾರ ಸಂಜೆ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ನಾಗರಿಕರು ಪ್ರತಿಭಟನೆಯನ್ನು ನಡೆಸಿದ್ದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ದೊಡ್ಡ ಗಲಭೆಯೇ ಉಂಟಾಗಿತ್ತು. ಕೆಲವು ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದು,ಮೂರರಿಂದ ನಾಲ್ಕು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ, ಇದೀಗ ಅವರು ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ