AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Crystal Fortress: 262 ಕೋಟಿ ರೂ. ಮೌಲ್ಯದ ಮೆಥಾಂಫೆಟಮೈನ್ ವಶಪಡಿಸಿಕೊಂಡ NCB, ದೆಹಲಿ ಪೊಲೀಸರು

ದೆಹಲಿಯಲ್ಲಿ ಎನ್‌ಸಿಬಿ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ 262 ಕೋಟಿ ರೂ. ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ನೋಯ್ಡಾ, ಗ್ರೇಟರ್ ನೋಯ್ಡಾ, ಛತ್ತರ್‌ಪುರ ಸೇರಿ ಹಲವೆಡೆ ದಾಳಿ ನಡೆಸಿ, ಎಸ್ತರ್ ಕಿನಿಮಿ ಎಂಬ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಗೆ 'ಕ್ರಿಸ್ಟಲ್ ಫೋರ್ಟ್ರೆಸ್' ಎಂದು ಹೆಸರಿಸಲಾಗಿದ್ದು, ಮಾದಕ ವಸ್ತು ಮುಕ್ತ ಭಾರತದ ಗುರಿಯತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಗೃಹಸಚಿವ ಅಮಿತ್​​ ಶಾ ಹೇಳಿದ್ದಾರೆ.

Operation Crystal Fortress: 262 ಕೋಟಿ ರೂ. ಮೌಲ್ಯದ ಮೆಥಾಂಫೆಟಮೈನ್ ವಶಪಡಿಸಿಕೊಂಡ NCB, ದೆಹಲಿ ಪೊಲೀಸರು
ದೆಹಲಿಯಲ್ಲಿ ಡ್ರಗ್ಸ್ ಜಪ್ತಿ
ಅಕ್ಷಯ್​ ಪಲ್ಲಮಜಲು​​
|

Updated on: Nov 24, 2025 | 11:59 AM

Share

ದೆಹಲಿ, ನ.24: ರಾಷ್ಟ್ರ ರಾಜಧಾನಿಯಲ್ಲಿ  ಅತಿದೊಡ್ಡ ಮಟ್ಟದ ಮಾದಕ ವಸ್ತುಗಳನ್ನು (Delhi Drug Bust)  NCB (ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ) ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಳ್ಳಲಾಗಿತ್ತು. ದಾಳಿಯಲ್ಲಿ 262 ಕೋಟಿ ರೂ. ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ (ಮೆಥ್ / ಐಸ್) ಜಪ್ತಿ ಮಾಡಲಾಗಿತ್ತು. NCB ಹಾಗೂ ದೆಹಲಿ ಪೊಲೀಸರು, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ದೆಹಲಿಯ ತೋಟದ ಮನೆಯೊಂದಕ್ಕೆ ಕೂಡ ದಾಳಿಯನ್ನು ಮಾಡಲಾಗಿತ್ತು. ಈ ವೇಳೆ ಭಾರೀ ಮೌಲ್ಯದ ಡ್ರಗ್ಸ್​​​ಗಳು ಸಿಕ್ಕಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾಲ್ಯಾಂಡ್ ಮೂಲದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಇನ್ನು ಈ ಕಾರ್ಯಚರಣೆಯಲ್ಲಿ ಉತ್ತರ ಪ್ರದೇಶದ ಅಮ್ರೋಹಾದ ಮಂಗ್ರೌಲಿ ಗ್ರಾಮದ ನೋಯ್ಡಾ ಸೆಕ್ಟರ್ -5ರ ನಿವಾಸಿ 25 ವರ್ಷದ ಶೇನ್ ವಾರಿಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇದೀಗ ಈ ಕಾರ್ಯಚರಣೆ ವೇಗ ಸಿಕ್ಕಿದೆ. ಮಾರಾಟ ವ್ಯವಸ್ಥಾಪಕ ಎಂದು ವಾರಿಸ್, ನಕಲಿ ಸಿಮ್ ಕಾರ್ಡ್‌ಗಳು, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ, ಇದರ ಜತೆಗೆ ವಿದೇಶಿ ಮೂಲದ ಕಿಂಗ್‌ಪಿನ್‌ನೊಂದಿಗೆ ಸಂಪರ್ಕವನ್ನು ಕೂಡ ಹೊಂದಿದ್ದ ಎಂದು ಹೇಳಲಾಗಿದೆ. ನ.20ರಂದು ಶೇನ್ ವಾರಿಸ್​​​ನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಇನ್ನು ಪೋರ್ಟರ್ ಡೆಲಿವರಿ ರೈಡರ್ ಮೂಲಕ ಎಸ್ತರ್ ಕಿನಿಮಿ ಎಂಬ ಮಹಿಳೆ ಈ ಮಾದಕ ವಸ್ತುಗಳನ್ನು ಸಾಗಿಸಿದ್ದಾಳೆ ಎಂದು ಹೇಳಲಾಗಿದೆ. ಈ ಮಹಿಳೆಗೆ ವಾರಿಸ್ ತನ್ನ ಸಂಪರ್ಕ ಸಂಖ್ಯೆಗಳು, ವಿಳಾಸ ಮತ್ತು ಇತರ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದ್ದ ಎಂದು ಹೇಳಲಾಗಿದೆ. ಇಬ್ಬರು ಸೇರಿ ವಿದೇಶಕ್ಕೆ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಛತ್ತರ್ಪುರದ ದಾಳಿಯಲ್ಲಿ 328 ಕೆಜಿ ಮೆಥ್ ಪತ್ತೆ:

ವಾರಿಸ್ ನೀಡಿದ ಮಾಹಿತಿಯ ಮೇರೆಗೆ ಎನ್‌ಸಿಬಿ ತಂಡ ನವೆಂಬರ್ 20ರ ರಾತ್ರಿ ಛತ್ತರ್‌ಪುರ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್​​​ವೊಂದರ ಮೇಲೆ ದಾಳಿ ಮಾಡಿದ್ದರು. ಈ ವೇಳೆ 328.54 ಕೆಜಿ ಉತ್ತಮ ಗುಣಮಟ್ಟದ ಮೆಥಾಂಫೆಟಮೈನ್ ಪತ್ತೆಯಾಗಿದೆ. ವಾರಿಸ್ ವಿದೇಶಕ್ಕೆ ಈ ಮಾದಕ ವಸ್ತುಗಳನ್ನು ಸಾಗಿಸುವ ಜಾಲದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದ ಎಂದು ಹೇಳಲಾಗಿದೆ. ಯಾವೆಲ್ಲ ದೇಶಕ್ಕೆ ಈ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಹಾಗೂ ಅದಕ್ಕೆ ಬಳಸುತ್ತಿದ್ದ ಕೆಲವೊಂದು ವಸ್ತುಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೀಗ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್

ಇನ್ನು ಈ ಕಾರ್ಯಚರಣೆಗೆ ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್ ಎಂದು ಹೆಸರಿಡಲಾಗಿದೆ. ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್ ಮೂಲಕ ಮಾದಕ ವಸ್ತುಗಳ ಅಕ್ರಮ ಸಾಗಣೆ, ಅದರ ಉತ್ಪಾದನೆಯನ್ನು ತಡೆಯಲು ದೇಶಾದ್ಯಂತ ಕಾರ್ಯಚರಣೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎನ್‌ಸಿಬಿ ಪ್ರಕಾರ ಈ ಜಾಲಕ್ಕಾಗಿ, ಸುರಕ್ಷಿತ ಸ್ಥಳಗಳನ್ನು, ಲೇಯರ್ಡ್ ಹ್ಯಾಂಡ್ಲರ್‌ಗಳು, ಕೊರಿಯರ್‌ಗಳು ಹಾಗೂ ದೊಡ್ಡ ದೊಡ್ಡ ಮನೆಗಳನ್ನು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ದೆಹಲಿ ಪ್ರತಿಭಟನೆಯಲ್ಲಿ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಪರ ಪೋಸ್ಟರ್

ಈ ಜಾಲವನ್ನು ಭೇದಿಸದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್‌ಸಿಬಿ ಮತ್ತು ದೆಹಲಿ ಪೊಲೀಸ್ ತಂಡವನ್ನು ಅಭಿನಂದಿಸಿದರು. ಮಾದಕ ವಸ್ತುಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರವು ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ದೆಹಲಿಯಲ್ಲಿ 262 ಕೋಟಿ ರೂ. ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸುವ ಮೂಲಕ ಈ ಕಾರ್ಯಚರಣೆಗೆ ವೇಗ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಮಾದಕ ವಸ್ತು ಮುಕ್ತ ಭಾರತ ಎಂಬ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಇನ್ನು ನಾಗರಿಕರು ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಾನಸ್ ರಾಷ್ಟ್ರೀಯ ಮಾದಕ ದ್ರವ್ಯ ಸಹಾಯವಾಣಿ – 1933 ರಲ್ಲಿ ವರದಿ ಮಾಡುವಂತೆ ಎನ್‌ಸಿಬಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ