AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾ| ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕಾರ

Justice Surya Kant takes oath as 53rd CJI: ಹರ್ಯಾಣ ಮೂಲದ 63 ವರ್ಷದ ನ್ಯಾ| ಸೂರ್ಯಕಾಂತ್ ಅವರು ಭಾರತದ ಮುಖ್ಯನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನ. 24ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಬೇಗ ವಿಲೇವಾರಿ ಮಾಡುವುದು ನೂತನ ಮುಖ್ಯನ್ಯಾಯಮೂರ್ತಿಗಳ ಮೊದಲ ಆದ್ಯತೆಯಾಗಿದೆ.

ನ್ಯಾ| ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕಾರ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2025 | 11:20 AM

Share

ನವದೆಹಲಿ, ನವೆಂಬರ್ 24: ನ್ಯಾಯಮೂರ್ತಿ ಸೂರ್ಯಕಾಂತ್ (Justice Surya Kant) ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (Supreme Court Chief Justice) ಇಂದು ಸೋಮವಾರ ಪ್ರಮಾಣ ಸ್ವೀಕರಿಸಿದ್ದಾರೆ. ಹಿಂದಿನ ಸಿಜೆಐ ಬಿಆರ್ ಗವಾಯ್ (CJI BR Gavai) ಅವರು ನಿನ್ನೆ ಭಾನುವಾರ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ 63 ವರ್ಷದ ನ್ಯಾ| ಸೂರ್ಯ ಕಾಂತ್ ಅವರು ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐಗೆ ಪ್ರಮಾಣ ವಚನ ಬೋಧಿಸಿದರು.

ಹರ್ಯಾಣ ಮೂಲದ ನ್ಯಾ| ಸೂರ್ಯಕಾಂತ್

1962ರ ಫೆಬ್ರುವರಿ 10ರಂದು ಜನಿಸಿದ ಹರ್ಯಾಣ ಮೂಲದ ನ್ಯಾ| ಸೂರ್ಯಕಾಂತ್ ಅವರು 1984ರಲ್ಲಿ ಕಾನೂನು ವೃತ್ತಿ ಆರಂಭಿಸಿದರು. 2000ರಲ್ಲಿ ಅವರು ಹರ್ಯಾಣದ ಅತಿಕಿರಿಯ ಅಡ್ವೊಕೇಟ್ ಜನರಲ್ ಎನ್ನುವ ದಾಖಲೆ ನಿರ್ಮಿಸಿದರು. 2001ರಲ್ಲಿ ಹಿರಿಯ ಅಡ್ವೊಕೇಟ್ ಆದರು. 2004ರಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್​ನ ಜಡ್ಜ್ ಆಗಿ ಬಡ್ತಿ ಪಡೆದರು.

ಇದನ್ನೂ ಓದಿ: ಇನ್ನೂ ಅಂತಿಮ ನಿರ್ಧಾರ ಇಲ್ಲ: ಚಂಡೀಗಡಕ್ಕೆ ಆರ್ಟಿಕಲ್ 240 ಪ್ರಸ್ತಾಪದ ಬಗ್ಗೆ ಕೇಂದ್ರದ ಸ್ಪಷ್ಟನೆ

ನಂತರ, ಹಿಮಾಚಲಪ್ರದೇಶ ಹೈಕೋರ್ಟ್​ನ ಮುಖ್ಯನ್ಯಾಯಧೀಶರಾದರು. ಅದಾದ ಬಳಿಕ 2019ರಲ್ಲಿ ಸುಪ್ರೀಂಕೋರ್ಟ್​ಗೆ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. 2024ರಿಂದ ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು.

ಸಿಜೆಐ ಆಗಿ ನ್ಯಾ| ಸೂರ್ಯಕಾಂತ್ ಅವರ ಗುರಿಗಳು

ಸಾಕಷ್ಟು ದಿನಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಸಿಜೆಐ ಸೂರ್ಯಕಾಂತ್ ಅವರ ಮೊದಲ ಆದ್ಯತೆ. ಪ್ರಮಾಣ ವಚನ ಸ್ವೀಕರಿಸುವ ಮುನ್ನ ಅವರು ಈ ವಿಚಾರವನ್ನು ತಿಳಿಸಿದರು. ಜಿಲ್ಲಾ ಹಾಗು ಕೆಳಗಿನ ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ತೊಡಕುಗಳೇನಿವೆ ಎಂದು ಗುರುತಿಸಲು ಎಲ್ಲಾ ಹೈಕೋರ್ಟ್​ಗಳೊಂದಿಗೆ ಸಮಾಲೋಚನೆ ನಡೆಸುವಾಗಿ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಪ್ರತಿಭಟನೆಯಲ್ಲಿ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಪರ ಪೋಸ್ಟರ್

ದೀರ್ಘಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಂವಿಧಾನಿಕ ಪೀಠಗಳನ್ನು ಸದ್ಯದಲ್ಲೇ ಅವರು ರಚಿಸಲಿದ್ದಾರೆ. ಐದು ಸದಸ್ಯರ ಪೀಠ, ಏಳು ಮತ್ತು ಒಂಬತ್ತು ಸದಸ್ಯರ ಸಾಂವಿಧಾನಿಕ ಪೀಠಗಳನ್ನು ಮುಂದಿನ ಕೆಲ ವಾರಗಳಲ್ಲಿ ರಚಿಸುವುದಾಗಿ ನೂತನ ಸಿಜೆಐ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ