AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಏರ್ಪೋರ್ಟ್​ನಲ್ಲಿ ಒಂದೇ ವಾರದಲ್ಲಿ ಎರಡನೇ ಬಾರಿ ಹುಸಿ ಬಾಂಬ್ ಬೆದರಿಕೆ

Hyderabad airport receives hoax bomb threat: ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಏರ್ಪೋರ್ಟ್​ನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿ ಇಮೇಲ್​ವೊಂದು ಬಂದಿದೆ. ಆದರೆ, ಪೊಲೀಸರು ಇಡೀ ಏರ್​ಪೋರ್ಟ್ ಜಾಲಾಡಿದರೂ ಸ್ಫೋಟಕ ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಬೆದರಿಕೆಯಾಗಿದ್ದಿರಬಹುದು. ಕಳೆದ ವಾರವೂ ಕೂಡ ಇಂಥದ್ದೇ ರೀತಿಯ ಹುಸಿ ಬಾಂಬ್ ಬೆದರಿಕೆ ಬಂದಿತ್ತು.

ಹೈದರಾಬಾದ್ ಏರ್ಪೋರ್ಟ್​ನಲ್ಲಿ ಒಂದೇ ವಾರದಲ್ಲಿ ಎರಡನೇ ಬಾರಿ ಹುಸಿ ಬಾಂಬ್ ಬೆದರಿಕೆ
ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಏರ್​ಪೋರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2025 | 6:52 PM

Share

ಹೈದರಾಬಾದ್, ನವೆಂಬರ್ 23: ಇಲ್ಲಿಯ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Hyderabad’s Rajiv Gandhi International Airport) ಬಾಂಬ್ ಇಡಲಾಗಿದೆ ಎನ್ನುವ ಹುಸಿ ಬೆದರಿಕೆಯೊಂದು ಬಂದ ಘಟನೆ ನಡೆದಿದೆ. ಹೈದರಾಬಾದ್ ಏರ್​ಪೋರ್ಟ್​ನ ವಿಮಾನ ಆಗಮನ ಪ್ರದೇಶದಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಇಮೇಲ್ ಶುಕ್ರವಾರ (ನ. 21) ಕಸ್ಟಮರ್ ಸರ್ವಿಸ್ ಡಿಪಾರ್ಟ್ಮೆಂಟ್​ನ ಐಡಿಗೆ ಬಂದಿತ್ತು. ಅದು ಹುಸಿ (hoax bomb threat) ಮಾಹಿತಿ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬಾಂಬ್ ಬೆದರಿಕೆಯ ಇಮೇಲ್ ತಂದ ಕೂಡಲೇ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳಗಳನ್ನು ಕೂಡಲೇ ಕಳುಹಿಸಿ ತಪಾಸಣೆ ಮಾಡಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರು ಹಾಗು ಸಿಬ್ಬಂದಿ ವರ್ಗದವರನ್ನು ಕಡ್ಡಾಯವಾಗಿ ಸೆಕ್ಯೂರಿಟಿ ಚೆಕಿಂಗ್​ಗೆ ಒಳಪಡಿಸಲಾಯಿತು. ಪ್ರದೇಶದಲ್ಲಿ ಹಾಗೂ ಸುತ್ತಮುತ್ತ ಬಾಂಬ್ ಪತ್ತೆಗೆ ಶೋಧ ಮಾಡಲಾಯಿತು. ಆದರೆ, ಯಾವುದೇ ಸ್ಫೋಟಕಗಳು ಪತ್ತೆಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನರರಕ್ಷಕರೋ, ನರಹಂತಕರೋ..! ರಕ್ಕಸ ಕಾರ್ಯಕ್ಕೆ ಉಗ್ರ ವೈದ್ಯರ ಜಾಲ ನಿರ್ಮಾಣಗೊಂಡ ಕಥೆ

ಅದು ಹುಸಿ ಇಮೇಲಾ ಎಂಬುದರ ಪರಿಶೀಲನೆ

ಬಾಂಬ್ ಇಟ್ಟಿರುವುದಾಗಿ ತಿಳಿಸಿ ಕಳುಹಿಸಲಾದ ಇಮೇಲ್ ಅನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಎಲ್ಲಿಂದ ಬಂದಿದ್ದು ಎಂಬಿತ್ಯಾದಿ ಸಂಗತಿಯನ್ನು ಶೋಧಿಸಲಾಗುತ್ತಿದೆ. ನಿಜವಾಗಿಯೂ ಬಾಂಬ್ ಇಡುವ ಪ್ರಯತ್ನವಾಗಿತ್ತಾ, ಅಥವಾ ಸುಮ್ಮನೆ ಸುಳ್ಳೇ ಮಾಹಿತಿ ನೀಡಿ ಇಮೇಲ್ ಕಳುಹಿಸಲಾಗಿತ್ತಾ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಳ್ಳಬೇಕಿದೆ.

ಕೆಲ ದಿನಗಳ ಹಿಂದೆಯೂ ಬಂದಿತ್ತು ಬೆದರಿಕೆ ಇಮೇಲ್

ಕೆಲ ದಿನಗಳ ಹಿಂದಷ್ಟೇ ಇದೇ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಏರ್​ಪೋರ್ಟ್​ಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು. ಆಗಲೂ ಕೂಡ ಪೊಲೀಸರು ಸಂಪೂರ್ಣ ತಪಾಸಣೆ ಮಾಡಿದ್ದರು. ಯಾವ ಬಾಂಬ್ ಕೂಡ ಪತ್ತೆಯಾಗಲಿಲ್ಲ. ಅದೊಂದು ಹುಸಿ ಬೆದರಿಕೆ ಎಂದು ಘೋಷಿಸಿದ್ದರು. ಒಂದೇ ವಾರದ ಅಂತರದಲ್ಲಿ ಅದೇ ಏರ್​ಪೋರ್ಟ್​ಗೆ ಎರಡನೇ ಬಾರಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ.

ಇದನ್ನೂ ಓದಿ: ಇನ್ನೂ ಅಂತಿಮ ನಿರ್ಧಾರ ಇಲ್ಲ: ಚಂಡೀಗಡಕ್ಕೆ ಆರ್ಟಿಕಲ್ 240 ಪ್ರಸ್ತಾಪದ ಬಗ್ಗೆ ಕೇಂದ್ರದ ಸ್ಪಷ್ಟನೆ

ಹುಸಿ ಬಾಂಬ್ ಬೆದರಿಕೆಯ ಕರೆ ಮತ್ತು ಇಮೇಲ್​ಗಳು ಸಾಮಾನ್ಯವಾಗಿವೆ. ಇಂಥ ಹೆಚ್ಚಿನ ಬೆದರಿಕೆಗಳು ಸುಳ್ಳೇ ಆಗಿದ್ದು, ಕಿಡಿಗೇಡಿಗಳ ಕೃತ್ಯವಾಗಿರುತ್ತದೆ. ಆದರೆ, ದೆಹಲಿ ಬಾಂಬ್ ಸ್ಫೋಟದ ಬಳಿಕ ಯಾವ ಮಾಹಿತಿಯನ್ನೂ, ಬೆದರಿಕೆಯನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಎಂಥದ್ದೇ ಬೆದರಿಕೆ ಬಂದರೂ ಪೊಲೀಸರು ಪೂರ್ಣ ಭದ್ರತಾ ತಪಾಸಣೆ ನಡೆಸುವುದು ಅನಿವಾರ್ಯ ಎಂಬಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ