ಹೈದರಾಬಾದ್ನಲ್ಲಿ ವೈದ್ಯೆ ಆತ್ಮಹತ್ಯೆ; ಅಮೆರಿಕದ ವೀಸಾ ಸಿಗಲಿಲ್ಲವೆಂದು ಪ್ರಾಣಬಿಟ್ಟಳಾ ಆ ಯುವತಿ?
Andhra doctor commits suicide over US visa rejection: ಗುಂಟೂರು ಮೂಲದ 38 ವರ್ಷದ ವೈದ್ಯೆ ಡಾ. ರೋಹಿಣಿ ಅವರು ಹೈದರಾಬಾದ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ನಿದ್ರೆಯ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿರುವ ಶಂಕೆ ಇದೆ. ಅಮೆರಿಕದಲ್ಲಿ ಕೆಲಸ ಮಾಡಬೇಕೆಂದು ಹಂಬಲಿಸಿದ್ದ ಆಕೆ ಸಲ್ಲಿಸಿದ್ದ ವೀಸಾ ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು.

ಹೈದರಾಬಾದ್, ನವೆಂಬರ್ 24: ಗುಂಟೂರು ಮೂಲದ 38 ವರ್ಷದ ಯುವತಿಯೊಬ್ಬಳು ನವೆಂಬರ್ 22, ಶನಿವಾರ ಬೆಳಗ್ಗೆ ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ವೈದ್ಯೆಯಾಗಿದ್ದ ರೋಹಿಣಿ (Hyderabad doctor suicide) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪದ್ಮರಾವ್ ನಗರ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಆಕೆಯ ಶವ ಪತ್ತೆಯಾಗಿದೆ. ಪೊಲೀಸರ ಆರಂಭಿಕ ವಿಚಾರಣೆಯಲ್ಲಿ, ಡಾ. ರೋಹಿಣಿ ಅವರು ನವೆಂಬರ್ 21ರ ರಾತ್ರಿ ಸಾಕಷ್ಟು ನಿದ್ರೆಯ ಮಾತ್ರೆಗಳನ್ನು ಸೇವಿಸಿದ್ದು ತಿಳಿದುಬಂದಿದೆ.
ವೈದ್ಯೆಯ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಸ್ಲೀಪಿಂಗ್ ಪಿಲ್ ಸೇವಿಸಿ ಸತ್ತಿದ್ದಾ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಮನೆಗೆಲಸದವರು ಬೆಳಗ್ಗೆ ಅಪಾರ್ಟ್ಮೆಂಟ್ಗೆ ಹೋಗಿ ಬಾಗಿಲು ಬಡಿದರೂ ತೆರೆದಿರಲಿಲ್ಲ. ಸಮೀಪದಲ್ಲೇ ವೈದ್ಯೆಯ ಕುಟುಂಬದವರು ಇದ್ದು ಅವರಿಗೆ ಈ ವಿಚಾರ ತಿಳಿಸಲಾಗಿತ್ತು. ಅವರು ಬಂದು ಬಾಗಿಲು ಬಡಿದರೂ ತೆರೆಯಲಿಲ್ಲ. ನಂತರ, ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ರೋಹಿಣಿ ಮೃತಪಟ್ಟಿರುವುದು ತಿಳಿದಿದೆ.
ಇದನ್ನೂ ಓದಿ: ನ್ಯಾ| ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕಾರ
ರೋಹಿಣಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಬಹುದು. ಇದೇ ವೇಳೆ, ಅಪಾರ್ಟ್ಮೆಂಟ್ನಲ್ಲಿ ಸೂಸೈಡ್ ನೋಟ್ ಕೂಡ ಸಿಕ್ಕಿದೆ. ಈಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದುದು ಗೊತ್ತಾಗಿದೆ.
ಅಮೆರಿಕದ ವೀಸಾ ಸಿಗಲಿಲ್ಲವೆಂಬ ಹತಾಶೆ…
ಡಾ. ರೋಹಿಣಿ ಅವರು ಅಮೆರಿಕದಲ್ಲಿ ವೈದ್ಯ ವೃತ್ತಿ ಮಾಡಬೇಕೆಂದು ಅದಮ್ಯ ಆಸೆ ಇಟ್ಟುಕೊಂಡವರು. ಕಿರ್ಗಿಸ್ತಾನ್ನಲ್ಲಿ 2005ರಿಂದ 2010ರವರೆಗೆ ಎಂಬಿಬಿಎಸ್ ಮಾಡಿರುವ ಅವರು, ಇಂಟರ್ನಲ್ ಮೆಡಿಸಿನ್ನಲ್ಲಿ ಸ್ಪೆಷಲೈಸೇಶನ್ ಮಾಡಿದ್ದಾರೆ. ಓದಿನಲ್ಲಿ ಬಹಳ ಚುರುಕಾಗಿದ್ದ ಅವರಿಗೆ ಅಮೆರಿಕದಲ್ಲಿ ಕೆಲಸ ಮಾಡುವ ಹಂಬಲ ಇತ್ತು ಎಂದು ಆಕೆಯ ಪೋಷಕರು ಹೇಳುತ್ತಾರೆ.
ಇದನ್ನೂ ಓದಿ: ಇನ್ನೂ ಅಂತಿಮ ನಿರ್ಧಾರ ಇಲ್ಲ: ಚಂಡೀಗಡಕ್ಕೆ ಆರ್ಟಿಕಲ್ 240 ಪ್ರಸ್ತಾಪದ ಬಗ್ಗೆ ಕೇಂದ್ರದ ಸ್ಪಷ್ಟನೆ
ಅಮೆರಿಕದ ವೀಸಾಗೆ ಸಾಕಷ್ಟು ಹಿಂದೆಯೇ ಅರ್ಜಿ ಹಾಕಿದ್ದರು. ಬಹಳ ದಿನಗಳಾದರೂ ಅದು ಸಿಗದೆ ಹತಾಶೆಗೊಂಡಿದ್ದರು. ಇತ್ತೀಚೆಗೆ ಅವರ ವೀಸಾ ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ ಡಾ. ರೋಹಿಣಿ ವಿಪರೀತ ಹತಾಶೆಯ ಸ್ಥಿತಿಯಲ್ಲಿದ್ದರು. ಮಾನಸಿಕವಾಗಿ ನೊಂದಿದ್ದರು, ಎಲ್ಲರಿಂದ ದೂರವಾಗಿ ಏಕಾಂತವಾಗಿ ಇದ್ದರು ಎಂದು ಹೇಳಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




