ಜಿ20 ಆತಿಥ್ಯ ಇಷ್ಟು ಕಷ್ಟ ಅಂತ ಗೊತ್ತಿದ್ದರೆ ಓಡಿ ಹೋಗುತ್ತಿದ್ದೆ: ಪ್ರಧಾನಿ ಮೋದಿಗೆ ತಮಾಷೆ ಮಾಡಿದ ಸೌತ್ ಆಫ್ರಿಕಾ ಅಧ್ಯಕ್ಷ
South Africa president Cyril Ramaphosa speaks to Narendra Modi during G20 summit: ಜಿ20 ಶೃಂಗಸಭೆ ಆಯೋಜನೆಗೆ ಭಾರತದ ನೆರವು ಸಾಕಷ್ಟು ಸಿಕ್ಕಿದೆ ಎಂದು ಸೌತ್ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸಾ ಹೇಳಿದ್ಧಾರೆ. ಈ ಬಾರಿಯ 20ನೇ ಜಿ20 ಶೃಂಗಸಭೆ ಸೌತ್ ಆಫ್ರಿಕಾ ಅಧ್ಯಕ್ಷತೆಯಲ್ಲೇ ನಡೆದಿದೆ. ಜಿ20 ಸಭೆ ಆಯೋಜನೆ ಇಷ್ಟು ಕಷ್ಟ ಎಂದಿದ್ದರೆ ಓಡಿ ಹೋಗುತ್ತಿದ್ದೆವು ಎಂದು ರಮಫೋಸಾ ತಮಾಷೆ ಮಾಡಿದ್ದಾರೆ.

ಜೋಹಾನ್ಸ್ಬರ್ಗ್, ನವೆಂಬರ್ 24: ಜಿ20 ಶೃಂಗಸಭೆ (G20 summit) ಆಯೋಜಿಸುವ ಕಾರ್ಯದಲ್ಲಿ ಭಾರತ ನೀಡಿರುವ ಬೆಂಬಲಕ್ಕೆ ಸೌತ್ ಆಫ್ರಿಕಾ ಧನ್ಯವಾದ ಹೇಳಿದೆ. ಈ ಬಾರಿಯ ಜಿ20 ನಾಯಕರ ಶೃಂಗಸಭೆಯನ್ನು (G20 Leaders Summit) ದಕ್ಷಿಣ ಆಫ್ರಿಕಾ ಆಯೋಜಿಸಿದೆ. ಆಫ್ರಿಕಾ ಖಂಡದಲ್ಲಿ ನಡೆಯುತ್ತಿರುವ ಮೊದಲ ಜಿ20 ಸಭೆಯೂ ಇದಾಗಿದೆ. ಈ ವೇಳೆ, ಜಿ20 ಸಭೆ ಆಯೋಜಿಸುವುದು ಇಷ್ಟು ಕಷ್ಟ ಎಂದು ತನಗೆ ಗೊತ್ತಿರಲಿಲ್ಲ ಎಂದು ಸೌತ್ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ (Cyril Ramaphosa) ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವ ವೇಳೆ ದಕ್ಷಿಣ ಆಫ್ರಿಕಾ ಅಧ್ಯಕ್ಷರು, ಜಿ20 ಆಯೋಜನೆ ವಿಚಾರದಲ್ಲಿ ಹಾಸ್ಯ ಮಾಡಿದ್ದಾರೆ. ‘ಜಿ20 ಸಮಿಟ್ ಆಯೋಜಿಸಲು ಸೌತ್ ಆಫ್ರಿಕಾಗೆ ಭಾರತ ಸಹಾಯ ಮಾಡಿದೆ. ಇದಕ್ಕೆ ನಾವು ಧನ್ಯವಾದ ಹೇಳುತ್ತೇವೆ. ಆದರೆ, ಇದನ್ನು ಆಯೋಜಿಸುವುದು ಇಷ್ಟು ಕಷ್ಟದ ಕೆಲಸ ಎಂದು ನೀವು ಮೊದಲೇ ಹೇಳಿದ್ದರೆ, ನಾವು ಓಡಿ ಹೋಗುತ್ತಿದ್ದೆವು’ ಎಂದು ಸಿರಿಲ್ ರಮಫೋಸ ಅವರು ನರೇಂದ್ರ ಮೋದಿಗೆ ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: ನ್ಯಾ| ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕಾರ
ಸೌತ್ ಆಫ್ರಿಕಾ ಅಧ್ಯಕ್ಷರ ಈ ಮಾತಿಗೆ ಸಭೆಯಲ್ಲಿದ್ದವರ ಮೊಗದಲ್ಲಿ ನಗೆಯುಕ್ಕಿಸಿತು. ಜಿ20 ಸಭೆ ಆಯೋಜಿಸುವ ವಿಚಾರದಲ್ಲಿ ಭಾರತದಿಂದ ಸೌತ್ ಆಫ್ರಿಕಾ ಸಾಕಷ್ಟು ಕಲಿತಿದೆ ಎಂದೂ ರಮಫೋಸಾ ಹೇಳಿದ್ದಾರೆ.
‘ನೀವು ಜಿ20 ಆಯೋಜಿಸಿದ್ದು ನೋಡಿ ಸಾಕಷ್ಟು ಕಲಿತಿದ್ದೇವೆ. ನೀವು ಸಭೆ ಆಯೋಜಿಸಿದ ಕಟ್ಟಡ ಬಹಳ ಭವ್ಯವಾಗಿತ್ತು. ನಮ್ಮದು ಬಹಳ ಚಿಕ್ಕದಾಯಿತು’ ಎಂದು ಸಿರಿಲ್ ರಮಫೋಸ ಹೇಳಿದಾಗ ಕೂಡಲೇ ಪ್ರತಿಕ್ರಿಯಿಸಿದ ನರೇಂದ್ರ ಮೋದಿ, ‘ಚಿಕ್ಕದು ಯಾವತ್ತೂ ಸುಂದರವೇ’ ಎಂದು ಸಮಾಧಾನ ಮಾಡಿದ್ದಾರೆ.
ಇದನ್ನೂ ಓದಿ: ಸೌತ್ ಆಫ್ರಿಕಾಗೆ ಕಾಲಿಟ್ಟ ನರೇಂದ್ರ ಮೋದಿ; ಈ 3 ದಿನಗಳ ಭೇಟಿಯ ಅಜೆಂಡಾ ಏನು?
ಸೌತ್ ಆಫ್ರಿಕಾದಲ್ಲಿ ನಡೆದಿರುವುದು 20ನೇ ಜಿ20 ಶೃಂಗಸಭೆ. 18ನೇ ಶೃಂಗಸಭೆಯು ಭಾರತದ ಅಧ್ಯಕ್ಷತೆಯಲ್ಲಿ ನಡೆದಿತ್ತು. ನವದೆಹಲಿಯಲ್ಲಿ ಹೊಸದಾಗಿ ನಿರ್ಮಿತವಾದ ಭವ್ಯವಾದ ಭಾರತ್ ಮಂಡಪ್ನಲ್ಲಿ ಅದನ್ನು ಆಯೋಜಿಸಲಾಗಿತ್ತು. 2023ರಲ್ಲಿ ನಡೆದ ಆ ಸಮಿಟ್ನಲ್ಲೇ ಆಫ್ರಿಕನ್ ಯೂನಿಯನ್ ಅನ್ನು ಜಿ20 ಸಭೆಯ ಸದಸ್ಯನಾಗಿ ಸೇರಿಸಿಕೊಳ್ಳಲಾಯಿತು.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




