
ನವದೆಹಲಿ, (ನವೆಂಬರ್ 11): ರಾಷ್ಟ್ರರಾಜಧಾನಿ ನವದೆಹಲಿ ಕೆಂಪು ಕೋಟೆ ಬಳಿ ಐ20 ಕಾರು ಸ್ಫೋಟಗೊಂಡಿದ್ದು, (Delhi Car Blast) ಘಟನೆಯಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಯಾಗಿದೆ. ಇನ್ನು ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿತು? ಕಾರಿನ ಹಿಂದುಗಡೆ ಅಳವಡಿಸಿದ್ದ ಸಿಎನ್‌ಜಿಯಿಂದ ಸ್ಫೋಟ ಸಂಭವಿಸಿತ್ತಾ? ಹೀಗೆ ನಾನಾ ರೀತಿಯ ವರದಿಗಳು ಆರಂಭದಲ್ಲಿ ಪ್ರಕಟವಾಗಿದ್ದವು. ಆದರೆ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಯಾವ ಕಾರಿನಿಂದ ಈ ಕೃತ್ಯ ಸಂಭವಿಸಿದೆ ಎನ್ನುವುದನ್ನು ಪೊಲೀಸರು ನಿಖರವಾಗಿ ಪತ್ತೆ ಹೆಚ್ಚಿದ್ದಾರೆ.
ಸ್ಫೋಟ ನಡೆದ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು (Delhi Police) ಮೊದಲು ರಸ್ತೆಯಲ್ಲಿರುವ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಐ20 (i20)ನಿಂದ ಈ ಕೃತ್ಯ ನಡೆದಿದೆ ಎನ್ನುವುದು ಗೊತ್ತಾಗಿದೆ. ಐ20 ಕಾರಿನಿಂದ ಸ್ಫೋಟ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆ ಇಡೀ ದಿನ ಈ ಕಾರು ಎಲ್ಲೆಲ್ಲಿ ಓಡಾಡಿದೆ. ದೆಹಲಿಗೆ ಎಲ್ಲಿಂದ ಪ್ರವೇಶಿಸಿದೆ ಎಂಬ ಮಾಹಿತಿಯನ್ನು ಕಲೆಹಾಕಲು ಮತ್ತಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದ್ದಾರೆ. ಆಗ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ.
ಸ್ಫೋಟಗೊಂಡ ದಿನ ಅಂದರೆ ಸೋಮವಾರ(ನವೆಂಬರ್ 10) ಬೆಳ್ಳಗ್ಗೆಯಿಂದ ಸಂಜೆಯವರಗೆ ಕಾರಿನ ಸಂಚಾರದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ. ಪೊಲೀಸರು, ಸುಮಾರು 11 ಗಂಟೆಗಳ ಹಿಂದೆ ಫರಿದಾಬಾದ್‌ನಿಂದ ದೆಹಲಿಯ ಕೆಂಪು ಕೋಟೆಗೆ ಹೊರಟು ದಾರಿಯುದ್ದಕ್ಕೂ ಹಲವಾರು ಸ್ಥಳಗಳನ್ನು ಪರಿಶೀಲಿಸಿದ್ದಾರೆ.
ಇನ್ನು ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಶಂಕಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಮುಜಮ್ಮಿಲ್, ಇತರೆ ವೈದ್ಯರು ಸೇರಿದಂತೆ 8 ಶಂಕಿತರನ್ನ ಬಂಧಿಸಿದ್ದಾರೆ. ಜೈಶ್ ಎ ಮೊಹಮ್ಮದ್, ಅನ್ಸರ್ ಘಜ್ವಲ್ ಹಿಂದ್ ಜೊತೆ ಸಂಪರ್ಕ ಹೊಂದಿರುವ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ಚುರುಕುಗೊಂಡಿದೆ.
ಮೂರು ಗಂಟೆಗಳ ಕಾಲ ಸುನೆಹ್ರಿ ಮಸೀದಿ ಪಾರ್ಕಿಂಗ್ ಜಾಗದಲ್ಲಿ ಆತ ಕಾರನ್ನು ಪಾರ್ಕ್ ಮಾಡಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆ. ಉದ್ದೇಶಪೂರ್ವಕವಾಗಿಯೇ ಕಾರನ್ನು ಪಾರ್ಕ್ ಮಾಡಿದ್ದಾನೋ ಅಥವಾ ಬೇರೆ ಕಡೆ ಸ್ಫೋಟ ಮಾಡಲುಆ ಜಾಗದಲ್ಲಿ ಕಾರು ನಿಲ್ಲಿಸಿದ್ದಾನೋ? ಅಥವಾ ಸ್ನೇಹಿತರು ಸಿಕ್ಕಿಬಿದ್ದಿದ್ದಕ್ಕೆ ಸಿಟ್ಟಾಗಿ ಈಗಲೇ ಸ್ಪೋಟ ಮಾಡಲು ನಿರ್ಧಾರ ತೆಗೆದುಕೊಂಡನೇ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.