ದೆಹಲಿ: ಪಂಜಾಬ್ ರೈತರ ಚಳವಳಿ ಸತತ 23ನೇ ದಿನ ಪ್ರವೇಶಿಸಿದೆ. ಮೈ ಕೊರೆಯುವ ಚಳಿಯ ನಡುವೆಯೂ ರೈತರು ದೆಹಲಿ ಚಲೋವನ್ನು ಮುಂದುವರೆಸುವ ದೃಢ ನಿಲುವನ್ನು ಕೈಬಿಟ್ಟಿಲ್ಲ. ಜೊತೆಗೆ, ಚಳಿಯಿಂದ ಪಾರಾಗಲು ಇನ್ನಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳುವುದರತ್ತ ಗಮನಹರಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯವು ರೈತರ ಚಳವಳಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ತೀರ್ಪಿತ್ತ ನಂತರ ಪಂಜಾಬ್ ರೈತರ ಆತ್ಮಸ್ಥೈರ್ಯ ಇನ್ನಷ್ಟು ಬಲಗೊಂಡಿದೆ. ಸಾವಧಾನವಾಗಿ, ಪರಿಣಿತ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಮುಂದಿನ ನಡೆಗಳನ್ನು ನಿರ್ಧರಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಕಾನೂನು ತಜ್ಞರಾದ ಪ್ರಶಾಂತ್ ಭೂಷಣ್, ದುಷ್ಯಂತ್ ದವೆ, ಎಚ್.ಎಸ್.ಫೂಲ್ಕಾ ಮತ್ತು ಕೊಲಿನ್ ಗೋನ್ಸಾಲ್ವೆಸ್ ಸಲಹೆ ಪಡೆಯಲು ರಾಷ್ಟ್ರೀಯ ಕಿಸಾನ್ ಮಹಾ ಸಂಘರ್ಷ್ನ ಕೆ.ವಿ.ಬಿಜು ತಿಳಿಸಿದ್ದಾರೆ. ಅಡ್ವೊಕೇಟ್ ಜನರಲ್ ಕೆ ವಿ ವೆಣುಗೋಪಾಲ್, ದೆಹಲಿ ಚಲೋವಿನಿಂದ ಕೊರೋನಾ ಸೋಂಕು ಹೆಚ್ಚಳದ ಕಳವಳ ವ್ಯಕ್ತಪಡಿಸಿದ್ದರು.
ಬೆಂಬಲ ಘೋಷಿಸಿದ ಸುಂದರ್ಲಾಲ್ ಬಹುಗುಣ
ಚಿಪ್ಕೋ ಚಳವಳಿಯ ನೇತಾರ ಸುಂದರ್ಲಾಲ್ ಬಹುಗುಣ ದೆಹಲಿ ಚಲೋಗೆ ಬೆಂಬಲ ಘೋಷಿಸಿದ್ದಾರೆ. ಸರ್ಕಾರ ‘ಅನ್ನದಾತ’ರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.