ಕ್ರೆಡಿಟ್ ನೀವೇ ಇಟ್ಟುಕೊಳ್ಳಿ.. ರೈತರ ಜೀವನ ಚೆನ್ನಾಗಿರಲು ಬಿಡಿ: ಪ್ರತಿಪಕ್ಷಗಳಿಗೆ ಕೈ ಮುಗಿದ ಪ್ರಧಾನಿ
ರೈತ ಸಂಘಟನೆಗಳು ಮತ್ತು ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿಯೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿ: ರೈತ ಸಂಘಟನೆಗಳು ಮತ್ತು ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿಯೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಮಧ್ಯ ಪ್ರದೇಶದ ಬೆಳೆ ಹಾನಿಗೊಳಗಾದ 35 ಲಕ್ಷ ರೈತ ಕುಟುಂಬಗಳಿಗೆ 1,600 ಕೋಟಿ ರೂ ಮೊತ್ತದ ಪರಿಹಾರ ವಿತರಿಸಿ ವರ್ಚುವಲ್ ಗೋಷ್ಠಿಯಲ್ಲಿ ಮಾತನಾಡಿದರು.
ಈ ವೇಳೆ ಕೃಷಿ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡ ಮೋದಿ, ಕೃಷಿ ಕಾಯ್ದೆಗಳು ಜಾರಿಗೆ ಬಂದು 6-7 ತಿಂಗಳೇ ಕಳೆದಿದೆ. ಈಗ ಇದ್ದಕ್ಕಿದ್ದಂತೆ ಸುಳ್ಳುಗಳ ಜಾಲವೇ ಹಬ್ಬುತ್ತಿದೆ. ಇನ್ನಾದರೂ ರಾಜಕೀಯ ಪಕ್ಷಗಳು ರೈತರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಈಗ ರೈತರ ಪ್ರತಿಭಟನೆಯ ಹಿಂದೆ ನಿಂತ ಪ್ರತಿಪಕ್ಷಗಳು ತಾವು ಅಧಿಕಾರದಲ್ಲಿದ್ದಾಗ ಕೃಷಿಕರ ಸಮಸ್ಯೆ ದೂರ ಮಾಡಲು ಏಕೆ ಪ್ರಯತ್ನಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಕನಿಷ್ಠ ಬೆಂಬಲ ಬೆಲೆಯನ್ನು ನಿಲ್ಲಿಸುವುದಾಗಿದ್ದರೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುತ್ತಿರಲಿಲ್ಲ. MSP ಹಿಂತೆಗೆತದ ಕುರಿತು ಯಾರಿಗೂ ಅನಗತ್ಯ ಅನುಮಾನ ಬೇಡ ಎಂದರು.
ಈ ಕಾನೂನುಗಳನ್ನು ರಾತ್ರೋರಾತ್ರಿ ಜಾರಿಗೆ ತಂದಿಲ್ಲ. ಕಳೆದ 22 ವರ್ಷಗಳಲ್ಲಿ ಪ್ರತಿ ಸರ್ಕಾರಗಳೂ, ರಾಜ್ಯಗಳು ಈ ಬಗ್ಗೆ ಪರಿಣಿತರೊಂದಿಗೆ ವಿಸ್ತೃತ ಚರ್ಚೆ ನಡೆಸಿವೆ. ರೈತರ ಗುಂಪುಗಳು, ಕೃಷಿ ತಜ್ಞರು, ಆರ್ಥಿಕ ತಜ್ಞರು, ವಿಜ್ಞಾನಿಗಳು ಮತ್ತು ಪ್ರಗತಿಪರರು ಕೃಷಿ ಸುಧಾರಣೆಗೆ ಕರೆ ನೀಡಿದ್ದಾರೆ. ಈಗ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ಪಕ್ಷಗಳೂ ಸಹ ಒಂದು ಕಾಲದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಸುಧಾರಣಾ ಕಾಯ್ದೆ ಜಾರಿಯ ಭರವಸೆ ನೀಡಿದ್ದವು ಎಂದರು.
ಪ್ರತಿಪಕ್ಷಗಳಿಗೆ ಕೈಮುಗಿದ ಮೋದಿ ನಾನು ಎಲ್ಲ ಪ್ರತಿಪಕ್ಷಗಳ ಎದುರು ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ.ಎಲ್ಲ ಮನ್ನಣೆಯನ್ನೂ ನೀವೇ ಇಟ್ಟುಕೊಳ್ಳಿ. ನಾನು ರೈತರ ಜೀವನ ಚೆನ್ನಾಗಿರಲಿ ಎಂದು ಬಯಸುತ್ತೇನೆ..ಹಾಗೇ ಕೃಷಿಯಲ್ಲಿ ಆಧುನಿಕತೆಯನ್ನು ತರಲು ಇಚ್ಛಿಸುತ್ತೇನೆ ಎಂದೂ ಹೇಳಿದರು.
ಹಾಗೇ ಕೃಷಿ ಕಾಯ್ದೆಯಲ್ಲಿರುವ ಸಮಸ್ಯೆಗಳ ಕುರಿತು ಮುಕ್ತ ಚರ್ಚೆಗೆ ನಮ್ಮ ಸರ್ಕಾರ ಸಿದ್ಧವಿದೆ. ದೇಶದ ಕೃಷಿ ಸಮುದಾಯ ನಮ್ಮ ಮೊದಲ ಆದ್ಯತೆಯಾಗಿದೆ. ಹೊಸ ಕೃಷಿ ಕಾಯ್ದೆಗಳಲ್ಲಿ ರೈತರಿಗೆ ಯಾವುದೇ ಅನುಮಾನವಿದ್ದರೂ ನಾವದನ್ನು ಪರಿಹರಿಸುತ್ತೇವೆ. ಆದರೆ ಕೃಷಿ ಸಮುದಾಯ ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ವಿನಂತಿಸಿದರು. ಡಿ. 25ರಂದು ಮತ್ತೊಮ್ಮೆ ರೈತರನ್ನು ಉದ್ದೇಶಿಸಿ, ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ಮಾತನಾಡುವೆ ಎಂದರು.