ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಮತ್ತೆ ಆಘಾತ; ಇನ್ನಿಬ್ಬರು ಪ್ರಭಾವಿ ನಾಯಕರ ರಾಜೀನಾಮೆ
ಕಳೆದ ಎರಡು ದಿನಗಳಲ್ಲಿ ಟಿಎಂಸಿಯ ಒಟ್ಟು ನಾಲ್ವರು ಪ್ರಮುಖ ನಾಯಕರು ರಾಜೀನಾಮೆ ನೀಡುವ ಮೂಲಕ ತಮ್ಮ ನಾಯಕಿ ಮಮತಾ ಬ್ಯಾನರ್ಜಿಗೆ ಆಘಾತ ನೀಡಿದ್ದಾರೆ.
ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಒಂದರ ಬೆನ್ನಿಗೆ ಒಂದರಂತೆ ಶಾಕ್ ಎದುರಾಗುತ್ತಿದೆ. ಪಕ್ಷದಿಂದ ಪ್ರಮುಖ ನಾಯಕರು ಹೊರನಡೆಯುತ್ತಿದ್ದು, ಇಂದು ಬೆಳಗ್ಗೆ ಬರಾಕ್ಪುರ ಶಾಸಕ ಶೀಲ್ಭದ್ರ ದತ್ತಾ ಮತ್ತು ಪಕ್ಷದ ಸಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕಬಿರುಲ್ ಇಸ್ಲಾಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಲ್ಭದ್ರ ದತ್ತಾ ಪ್ರಾಥಮಿಕ ಸದಸ್ಯತ್ವವನ್ನೇ ತೊರೆದಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಟಿಎಂಸಿಯ ಒಟ್ಟು ನಾಲ್ವರು ಪ್ರಮುಖ ನಾಯಕರು ರಾಜೀನಾಮೆ ನೀಡುವ ಮೂಲಕ ತಮ್ಮ ನಾಯಕಿ ಮಮತಾ ಬ್ಯಾನರ್ಜಿಗೆ ಆಘಾತ ನೀಡಿದ್ದಾರೆ. ಈ ಸರಣಿ ರಾಜೀನಾಮೆ ಮುಂದಿನ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಯೂ ಇದ್ದು, ಇಂದು ದೀದಿ ತುರ್ತು ಸಭೆ ಕರೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನವೆಂಬರ್ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಎರಡು ದಿನಗಳ ಹಿಂದೆ ಮೊದಲು ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೇಂದು ಅಧಿಕಾರಿ ನಿನ್ನೆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ತೊರೆದಿದ್ದಾರೆ. ಅದರ ಬೆನ್ನಲ್ಲೇ ಮತ್ತೋರ್ವ ಪ್ರಭಾವಿ ಶಾಸಕ ಜಿತೇಂದ್ರ ತಿವಾರಿ ನಿನ್ನೆ ಅಸಾನ್ಸೋಲ್ ಮಹಾನಗರ ಪಾಲಿಕೆ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಮುಖ ನಾಯಕರ ಸಾಲುಸಾಲು ರಾಜೀನಾಮೆಯಿಂದಾಗಿ, ಟಿಎಂಸಿ ಪಕ್ಷದೊಳಗೆ ಏನಾಗುತ್ತಿದೆ? ಆಂತರಿಕವಾಗಿ ಏನೂ ಸರಿಯಿಲ್ಲವಾ ಎಂಬ ಪ್ರಶ್ನೆ ಏಳುತ್ತಿದೆ.
ಪಶ್ಚಿಮ ಬಂಗಾಳವನ್ನು ತೆಕ್ಕೆಗೆ ತೆಗೆದುಕೊಳ್ಳಲು ‘ರೋಡ್ ಶೋ’ ನಡೆಸಲಿದ್ದಾರೆ ಅಮಿತ್ ಶಾ