ದೆಹಲಿ: ದೆಹಲಿ ಮದ್ಯದ ಹಗರಣಕ್ಕೆ (Delhi liquor scam) ಸಂಬಂಧಿಸಿದಂತೆ ಫೆಬ್ರವರಿಯಿಂದ ಜೈಲಿನಲ್ಲಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗುವುದಕ್ಕೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಆಟೋಇಮ್ಯೂನ್ ಡಿಸಾರ್ಡರ್, ಮಲ್ಟಿಪಲ್ ಸ್ಕ್ಲೆರೋಸಿಸ್ ನಿಂದ ಬಳಲುತ್ತಿರುವ ಪತ್ನಿಯನ್ನು ಶನಿವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಭೇಟಿಯಾಗಲು ದೆಹಲಿ ಹೈಕೋರ್ಟ್ (Delhi High Court) ಆಮ್ ಆದ್ಮಿ ಪಕ್ಷದ ನಾಯಕ ಸಿಸೋಡಿಯಾ ಅವರಿಗೆ ಅನುಮತಿ ನೀಡಿದೆ. ಯಾವುದೇ ಗ್ಯಾಜೆಟ್‌ಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಮಾಧ್ಯಮದೊಂದಿಗೆ ಯಾವುದೇ ಸಂವಾದ ನಡೆಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ,
ಎಎಪಿ ನಾಯಕ, ತಮ್ಮ ಪತ್ನಿಯ ಆರೋಗ್ಯವನ್ನು ಉಲ್ಲೇಖಿಸಿ ಮಧ್ಯಂತರ ಜಾಮೀನು ಕೋರಿದ್ದರು.. ಆರ್ಥಿಕ ಅಪರಾಧಗಳ ತನಿಖೆ ನಡೆಸುವ ಸಂಸ್ಥೆಯಾದ ಜಾರಿ ನಿರ್ದೇಶನಾಲಯಕ್ಕೆ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಕೇಳಿದೆ.
ಏತನ್ಮಧ್ಯೆ, ಎಎಪಿ ನಾಯಕನ ಸಾಮಾನ್ಯ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಇಂದು ಕಾಯ್ದಿರಿಸಿದೆ.
ಈ ತಿಂಗಳ ಆರಂಭದಲ್ಲಿ, ಮನೀಶ್ ಸಿಸೋಡಿಯಾ ಮತ್ತು ಅವರ ಅನಾರೋಗ್ಯದ ಪತ್ನಿ ನಡುವೆ ಪ್ರತಿ ಪರ್ಯಾಯ ದಿನದಲ್ಲಿ ಒಂದು ಗಂಟೆಗಳ ಕಾಲ ವಿಡಿಯೊ ಕರೆಗಳನ್ನು ಅನುಮತಿಸುವಂತೆ ತಿಹಾರ್ ಜೈಲು ಅಧೀಕ್ಷಕರಿಗೆ ಹೈಕೋರ್ಟ್ ನಿರ್ದೇಶನ ನೀಡಿತು.
ಸೋಮವಾರ, ದೆಹಲಿ ಹೈಕೋರ್ಟ್ ಮನೀಶ್ ಸಿಸೋಡಿಯಾಗೆ ಜಾಮೀನು ತಿರಸ್ಕರಿದ್ದು, ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಹೇಳಿದರು. ಈ ವಿಷಯದಲ್ಲಿ ಎಫ್‌ಐಆರ್ ದಾಖಲಾದ ಆರು ತಿಂಗಳ ನಂತರ ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮೊದಲು ಬಂಧಿಸಿತು. ಮಾರ್ಚ್ 9 ರಂದು ತಿಹಾರ್ ಜೈಲಿನಲ್ಲಿ ಗಂಟೆಗಳ ವಿಚಾರಣೆಯ ನಂತರ ಇಡಿ ಇದೇ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತು.
ದೆಹಲಿ ಸರ್ಕಾರವು ನವೆಂಬರ್ 17, 2021 ರಂದು ಮದ್ಯ ನೀತಿಯನ್ನು ಜಾರಿಗೆ ತಂದಿತ್ತು.ಭ್ರಷ್ಟಾಚಾರದ ಆರೋಪಗಳ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತು. ಮನೀಶ್ ಸಿಸೋಡಿಯಾ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡೂ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ