ದೆಹಲಿ ಸೆಪ್ಟೆಂಬರ್ 13: ಮೂವರು ಐಎಎಸ್ ಆಕಾಂಕ್ಷಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಓಲ್ಡ್ ರಾಜಿಂದರ್ ನಗರದ ಕೋಚಿಂಗ್ ಸೆಂಟರ್ ಬೇಸ್‌ಮೆಂಟ್‌ನ ನಾಲ್ವರು ಸಹ ಮಾಲೀಕರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರ ಪೀಠವು ಸಹ ಮಾಲೀಕರಿಗೆ ₹ 5 ಕೋಟಿ ಮೊತ್ತವನ್ನು ರೆಡ್‌ಕ್ರಾಸ್‌ಗೆ ಠೇವಣಿ ಮಾಡುವಂತೆ ಸೂಚಿಸಿದೆ. ಅವರು ನೆಲಮಾಳಿಗೆಯನ್ನು ಬಿಟ್ಟುಕೊಟ್ಟು ದುರಾಸೆಯ ಕೃತ್ಯ ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ಕೋಚಿಂಗ್ ಸೆಂಟರ್ ಮಂಜೂರಾತಿ ಇಲ್ಲದೆ ನಡೆಯದಂತೆ ನೋಡಿಕೊಳ್ಳಲು ಹಾಗೂ ಕೇಂದ್ರಗಳು ನಡೆಯಬೇಕಾದ ಸ್ಥಳವನ್ನು ಗುರುತಿಸಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೈಕೋರ್ಟ್ ಸೂಚಿಸಿದೆ.
ಜುಲೈ 27 ರಂದು ಮಧ್ಯ ದೆಹಲಿಯ ಓಲ್ಡ್ ರಾಜಿಂದರ್ ನಗರದಲ್ಲಿ ಭಾರೀ ಮಳೆಯಿಂದಾಗಿ ರಾವೂಸ್ ಐಎಎಸ್ ಸ್ಟಡಿ ಸರ್ಕಲ್ ವಸತಿ ಕಟ್ಟಡದ ನೆಲಮಾಳಿಗೆಯಲ್ಲಿ ನೀರು ತುಂಬಿದ್ದರಿಂದ ಉತ್ತರ ಪ್ರದೇಶದ ಶ್ರೇಯಾ ಯಾದವ್ (25), ತೆಲಂಗಾಣದ ತಾನ್ಯಾ ಸೋನಿ (25) ಮತ್ತು ಕೇರಳದ ನೆವಿನ್ ಡೆಲ್ವಿನ್ (24) ಸಾವಿಗೀಡಾಗಿದ್ದರು.
ಬೇಸ್‌ಮೆಂಟ್‌ನ ಸಹ-ಮಾಲೀಕರಾದ ಪರ್ವಿಂದರ್ ಸಿಂಗ್, ತಜೀಂದರ್ ಸಿಂಗ್, ಹರ್ವಿಂದರ್ ಸಿಂಗ್ ಮತ್ತು ಸರಬ್ಜಿತ್ ಸಿಂಗ್ ಅವರು ಕೇವಲ ಬೇಸ್‌ಮೆಂಟ್‌ನ ಭೂಮಾಲೀಕರು ಮತ್ತು ಕೋಚಿಂಗ್ ಸೆಂಟರ್‌ಗೆ ಬಾಡಿಗೆ ಆಧಾರದ ಮೇಲೆ ಬಿಡಲಾಗಿದೆ ಎಂಬ ಆಧಾರದ ಮೇಲೆ ಜಾಮೀನು ಕೋರಿದರು. ಈ ಘಟನೆಯಲ್ಲಿ ಅವರು ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆರೋಪಿಗಳ ಜಾಮೀನು ಅರ್ಜಿಯನ್ನು ಸಿಬಿಐ ವಿರೋಧಿಸಿತ್ತು. ತನಿಖೆಯು ಆರಂಭಿಕ ಹಂತದಲ್ಲಿದೆ ಮತ್ತು ಸ್ವತಂತ್ರ ಸಾಕ್ಷಿಗಳನ್ನು ಪರೀಕ್ಷಿಸುವವರೆಗೆ ನಾಲ್ವರಿಗೆ ಜಾಮೀನುನೀಡಬಾರದು ಎಂದು ವಾದಿಸಿತ್ತು. ಘಟನೆ ನಡೆದ ಜುಲೈ 27ರಂದು ನೀರು ಹರಿಯಲು ಕಾರಣ ತಿಳಿಸುವಂತೆ ಗುರುವಾರ ಹೈಕೋರ್ಟ್ ಸಿಬಿಐಗೆ ಸೂಚಿಸಿತ್ತು.
ಇದನ್ನೂ ಓದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರಲ್ಲಿ ಕ್ಷಮೆಯಾಚಿಸಿದ ತಮಿಳುನಾಡಿನ ಹೋಟೆಲ್ ಮಾಲೀಕ, ಏನಿದು ಪ್ರಕರಣ?
ದೆಹಲಿಯಲ್ಲಿ ಮಳೆಯಾಗಿದೆ, ಆ ದಿನವೇಕೆ ಇಷ್ಟು ನೀರು? ಇದು ಮಳೆಯೇ ಅಥವಾ ಇನ್ನೇನಾದರೂ ಇದೆಯೇ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ನಾಲ್ವರು ಸಹ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ