ಹೈದರಾಬಾದ್: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (Enforcement Directorate – ED) ಅಧಿಕಾರಿಗಳು ವೈಎಸ್‌ಆರ್ ಕಾಂಗ್ರೆಸ್‌ನ ಒಂಗೋಲ್ ಕ್ಷೇತ್ರದ ಸಂಸದ (Ongole MP) ಶ್ರೀನಿವಾಸುಲು ರೆಡ್ಡಿ ಅವರ ಮಗ ರಾಘವ ರೆಡ್ಡಿಯನ್ನು ಬಂಧಿಸಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ ಅವರೊಂದಿಗೆ ಇವರೂ ಸಹ ‘ಇಂಡೊಸ್ಪಿರಿಟ್’ ಕಂಪನಿಯ ಮಾಲೀಕರಾಗಿದ್ದಾರೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ. ಮದ್ಯದ ವ್ಯಾಪಾರಿ ಅರುಣ್ ರಾಮಚಂದ್ರ ಪಿಳ್ಳೈ ಅವರೊಂದಿಗೆ ಕವಿತಾ ವ್ಯವಹಾರ ನಡೆಸುತ್ತಿದ್ದಾರೆ. ಈ ವ್ಯಕ್ತಿ ಕವಿತಾ ಅವರ ಬೇನಾಮಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ವ್ಯಾಪಾರಿಗಳಾದ ವಿಜಯ್ ನಾಯರ್, ಅಭಿಷೇಕ್ ಬೈಯಾನ್‌ಪಲ್ಲಿ, ಊತಾ ಗೌತಮ್ ಮತ್ತು ಸಮೀರ್ ಮಹೇಂದ್ರು ಅವರ ಮೇಲೆ ಸಿಬಿಐ ಕಳೆದ ವರ್ಷ ಚಾರ್ಜ್ ಶೀಟ್ ಹಾಕಿತ್ತು.
ಎರಡನೇ ಚಾರ್ಜ್‌ಶೀಟ್‌ನಲ್ಲಿ ಇಂಡೊಸ್ಪಿರಿಟ್ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಕಂಪನಿಯ ಮೂಲಕ ನಡೆದಿರುವ ಹಣದ ವಹಿವಾಟಿನ ಬಗ್ಗೆಯೂ ಇಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಮೀರ್ ಮಹೇಂದ್ರು ಇಂಡೊಸ್ಪಿರಿಟ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ. ಈ ಕಂಪನಿಯು ಮದ್ಯಸಾರ ಇರುವ ಪಾನೀಯಗಳ ಉತ್ಪಾದನೆ, ವಿತರಣೆ, ಆಮದು, ಮಾರ್ಕೆಟಿಂಗ್ ಮತ್ತು ಸರಬರಾಜು ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ.
‘ಕವಿತಾ ಮತ್ತು ಅರವಿಂದ ಕೇಜ್ರಿವಾಲ್ ನಡುವೆ 100 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಒಪ್ಪಂದವಾಗಿದೆ. ಅದರಂತೆ ದೆಹಲಿಯ ಲಿಕ್ಕರ್ ವ್ಯಾಪಾರದಲ್ಲಿ ಇಂಡೊಸ್ಟಿರಿಟ್‌ಗೆ ಪ್ರವೇಶ ಸಿಗಲಿದೆ. ಇದರಿಂದ ಅರುಣ್ ಪಿಳ್ಳೈ ಅವರಿಗೆ, ತನ್ಮೂಲಕ ಕವಿತಾ ಅವರಿಗೆ ಅನುಕೂಲವಾಗಲಿದೆ’ ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.
ಇದನ್ನೂ ಓದಿ: Narendra Modi: ಇಂದಿನಿಂದ ಎರಡು ದಿನ ತ್ರಿಪುರಾದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ
ತನ್ನ 2ನೇ ಆರೋಪಪಟ್ಟಿಯಲ್ಲಿ ಇಂಡೊಸ್ಪಿರಿಟ್ ಕಂಪನಿಯನ್ನು ಉಲ್ಲೇಖಿಸಿದ ಬಳಿಕ ಇಡಿ ಹಣಕಾಸು ವ್ಯವಹಾರದ ಬೆನ್ನುಹತ್ತಿದೆ. ಇಂಡೊಸ್ಪಿರಿಟ್‌ನ ಮಾಲೀಕ ಎಂದು ಶಂಕಿಸಲಾಗಿರುವ ಸಮೀರ್ ಮಹೇಂದ್ರು ಅವರೊಂದಿಗೆ ಆಮ್ ಆದ್ಮಿ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ವಿಜಯ್ ನಾಯರ್, ಅರಬಿಂದೋ ಫಾರ್ಮಾದ ಪಿ.ಶರತ್ ಚಂದ್ರ ರೆಡ್ಡಿ, ಪರ್‌ನಾಡ್ ರಿಚರ್ಡ್ಸ್ ಕಂಪನಿಯ ಬಿನಾಯ್ ಬಾಬು ಮತ್ತು ಬಡ್ಡಿ ರಿಟೇಲ್ ಲಿಮಿಟೆಡ್‌ನ ಅಮಿತ್ ಅರೋರ ಅವರ ಮೇಲೆ ಆರೋಪ ಹೊರಿಸಿದೆ.
ಈ ವಾರದ ಆರಂಭದಲ್ಲಿ ಹೈದರಾಬಾದ್ ಮೂಲಕ ಚಾರ್ಟೆಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಅವರನ್ನು ಸಿಬಿಐ ಬಂಧಿಸಿತ್ತು. ಇವರು ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಹಣಕಾಸು ಲೆಕ್ಕಪತ್ರಗಳನ್ನು ನಿರ್ವಹಿಸುತ್ತಿದ್ದರು. ‘ದೆಹಲಿ ಅಬಕಾರಿ ನೀತಿ 2021-22’ರ ಮೂಲಕ ಹೈದರಾಬಾದ್ ಮೂಲಕ ಹೈದರಾಬಾದ್ ಮೂಲದ ಕಂಪನಿಗಳಿಗೆ ಸಾವಿರಾರು ಕೋಟಿ ಲಾಭವಾಗಿದೆ ಎಂದು ಸಿಬಿಐ ದೂರಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ