ಬಿಜೆಪಿಗೆ ಸೇರದಿದ್ದರೆ ಇಡಿ ನನ್ನನ್ನು ಮತ್ತು ಇತರ 3 ಎಎಪಿ ನಾಯಕರನ್ನು ಬಂಧಿಸಲಿದೆ: ಅತಿಶಿ

|

Updated on: Apr 02, 2024 | 1:25 PM

ಪ್ರತಿಯೊಬ್ಬ ಎಎಪಿ ನಾಯಕನನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ನನಗೆ ತುಂಬಾ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರಿಂದ ಆರಂಭಿಸಿ ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ ಎಂದು ದೆಹಲಿ ಸಚಿವೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ

ಬಿಜೆಪಿಗೆ ಸೇರದಿದ್ದರೆ ಇಡಿ ನನ್ನನ್ನು ಮತ್ತು ಇತರ 3 ಎಎಪಿ ನಾಯಕರನ್ನು ಬಂಧಿಸಲಿದೆ: ಅತಿಶಿ
ಅತಿಶಿ ಸುದ್ದಿಗೋಷ್ಠಿ
Follow us on

ದೆಹಲಿ ಏಪ್ರಿಲ್ 02: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಬಂಧಿಸಿದ ನಂತರ ಇದೀಗ ಜಾರಿ ನಿರ್ದೇಶನಾಲಯವು (Enforcement Directorate )ನನ್ನ ಜತೆ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರನ್ನು ಬಂಧಿಸಲಿದೆ ಎಂದು ದೆಹಲಿ ಸಚಿವ ಅತಿಶಿ (Atishi)ಮಂಗಳವಾರ ಹೇಳಿದ್ದಾರೆ. “ಶೀಘ್ರದಲ್ಲೇ ನಮ್ಮ ನಿವಾಸದ ಮೇಲೆ ಇಡಿ ದಾಳಿ ನಡೆಯಲಿದೆ. ನಂತರ ನಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಲಾಗಿದೆ. ಬಿಜೆಪಿ ಈಗ ಆಮ್ ಆದ್ಮಿ ಪಕ್ಷದ ಮುಂಚೂಣಿಯ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅತಿಶಿ ಹೇಳಿದ್ದಾರೆ.

“ವೈಯಕ್ತಿಕ ಸಂಪರ್ಕದ ಮೂಲಕ ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಲಾಗಿದೆ. ನಾನು ಬಿಜೆಪಿಗೆ ಸೇರುವ ಮೂಲಕ ನನ್ನ ರಾಜಕೀಯ ಜೀವನವನ್ನು ಉಳಿಸಿಕೊಳ್ಳಬಹುದು. ಇಲ್ಲವೇ ಮುಂದಿನ ಒಂದು ತಿಂಗಳಲ್ಲಿ ಬಂಧಿಸಬಹುದು ಎಂದು ನನಗೆ ತಿಳಿಸಲಾಗಿದೆ. ಪ್ರತಿಯೊಬ್ಬ ಎಎಪಿ ನಾಯಕನನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ನನಗೆ ತುಂಬಾ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರಿಂದ ಆರಂಭಿಸಿ ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಆದರೆ ಈಗ ಅವರು ಇನ್ನೂ ನಾಲ್ವರು ಉನ್ನತ ನಾಯಕರನ್ನು ಬಂಧಿಸಲು ಬಯಸಿದ್ದಾರೆ. ಅದರಲ್ಲಿ ನಾನು, ರಾಘವ್ ಚಡ್ಡಾ, ದುರ್ಗೇಶ್ ಪಾಠಕ್ ಮತ್ತು ಸೌರಭ್ ಭಾರದ್ವಾಜ್ ಇದ್ದೀವಿ ಎಂದಿದ್ದಾರೆ ಅತಿಶಿ.

ಅತಿಶಿ ಸುದ್ದಿಗೋಷ್ಠಿ

ಅರವಿಂದ್ ಕೇಜ್ರಿವಾಲ್ ಅವರ ಬಂಧನದ ನಂತರ ಎಎಪಿ ಕುಸಿಯುತ್ತದೆ ಎಂದು ಬಿಜೆಪಿ ನಿರೀಕ್ಷಿಸಿತ್ತು. ಆದರೆ ಭಾನುವಾರ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ಒಗ್ಗೂಡುವುದನ್ನು ನೋಡಿ ಅವರು ಭಯಗೊಂಡಿದ್ದಾರೆ.ಆದ್ದರಿಂದ ಈಗ ಅವರು ಮುಂದಿನ ನಾಯಕತ್ವವನ್ನು ಗುರಿಯಾಗಿಸಲು ಬಯಸುತ್ತಾರೆ” ಎಂದು ಅತಿಶಿ ಹೇಳಿದರು.

ವಿಷಯಗಳು ಹೇಗೆ ಒಂದೊಂದೇ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ ಎಂಬುದನ್ನು ವಿವರಿಸಿದ ಅತಿಶಿ, ತನ್ನ ಮೇಲೆ ಮತ್ತು ನನ್ನ ಸಂಬಂಧಿಕರ ಮೇಲೆ ದಾಳಿ ನಡೆಸಲಾಗುವುದು. ಆಗ ನಮಗೆ ಸಮನ್ಸ್ ಜಾರಿ ಮಾಡಿ ನಂತರ ಜೈಲಿಗೆ ಹಾಕಲಾಗುತ್ತದೆ. ಆದರೆ ನಾವು ಬಿಜೆಪಿಗೆ ಹೆದರುವುದಿಲ್ಲ ಎಂದು ಹೇಳಲು ಬಯಸುತ್ತೇನೆ. ನಮ್ಮನ್ನೆಲ್ಲ ಜೈಲಿಗೆ ಹಾಕಿ, ಕೊನೆಯುಸಿರು ಇರುವವರೆಗೂ ಅರವಿಂದ್ ಕೇಜ್ರಿವಾಲ್ ಜೊತೆ ನಿಲ್ಲುತ್ತೇವೆ. ಎಲ್ಲರನ್ನೂ ಜೈಲಿಗೆ ಹಾಕಿ.ಇತರ 10 ಜನರು ಆ ಜಾಗಕ್ಕೆ ಬರುತ್ತಾರೆ, ಅವರು ಅರವಿಂದ್ ಕೇಜ್ರಿವಾಲ್ ಅವರ ಹೋರಾಟದಲ್ಲಿ ಸೇರುತ್ತಾರೆ” ಎಂದು ಅತಿಶಿ ಹೇಳಿದರು.

ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರನ್ನು ಇಡಿ ನ್ಯಾಯಾಲಯದಲ್ಲಿ ಹೇಳಿದ ಒಂದು ದಿನದ ನಂತರ ಅತಿಶಿ ಅವರ ಈ ಸ್ಫೋಟಕ ಹೇಳಿಕೆ ಬಂದಿವೆ. ಆಪಾದಿತ ಮದ್ಯ ಹಗರಣದ ಪ್ರಮುಖ ಆರೋಪಿ ವಿಜಯ್ ನಾಯರ್ – ಅತಿಶಿ ಮತ್ತು ಸೌರಭ್ ಅವರಿಗೆ ವರದಿ ಮಾಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಏಜೆನ್ಸಿಗೆ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅತಿಶಿ, ಇದು ಹೊಸ ಮಾಹಿತಿಯಲ್ಲ . ಇಡಿಗೆ ಈ ಹಿಂದೆಯೂ ಈ ರೀತಿ ಹೇಳಿತ್ತು ಎಂದಿದ್ದಾರೆ. ಆದಾಗ್ಯೂ ಇಡಿ ಅದನ್ನು ನ್ಯಾಯಾಲಯಕ್ಕೆ ತಿಳಿಸಿರುವುದರಿಂದ ಅತಿಶಿ ಮತ್ತು ಸೌರಭ್ ವಿರುದ್ಧ ಸಂಭವನೀಯ ಕ್ರಮ ಸಾಧ್ಯತೆ ಇದೆ.

ಇದನ್ನೂ ಓದಿ: ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಸುಪ್ರೀಂಕೋರ್ಟ್‌ ಮುಂದೆ ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್

ಮದ್ಯ ನೀತಿ ತನಿಖೆಗೆ ಸಂಬಂಧಿಸಿದಂತೆ ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು, ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಎಎಪಿ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಮತ್ತು ತಿಹಾರ್ ಜೈಲಿನಿಂದ ಸರ್ಕಾರವನ್ನು ನಡೆಸುತ್ತಾರೆ ಎಂದು ಹೇಳಿದೆ.

ಇಡಿ ಸೋಮವಾರ ನ್ಯಾಯಾಲಯದಲ್ಲಿ ಕೇಜ್ರಿವಾಲ್ ಅತಿಶಿ ಮತ್ತು ಸೌರಭ್ ಎಂದು ಹೇಳಿದ್ದಾರೆ ಎಂದು ಹೇಳಿದ ನಂತರ ಸೌರಭ್ ಭಾರದ್ವಾಜ್ ಕೇಜ್ರಿವಾಲ್ ಎಕ್ಸ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ ಈ ರೀತಿ ಏನೂ ಆಗಿಲ್ಲ ಎಂದು ದೆಹಲಿ ಸಚಿವರು ಸ್ಪಷ್ಟಪಡಿಸಿದ್ದಾರೆ. “ನಕಲಿ ಸುದ್ದಿಗಳನ್ನು ಹರಡುವ ಎಲ್ಲರಿಗೂ ಹೇಳಿತ್ತಿದ್ದೇನೆ. ನಾನು ಮತ್ತು ಅರವಿಂದ್ ಕೇಜ್ರಿವಾಲ್ ಜಿ ಇಬ್ಬರೂ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದೇವೆ. ನಿನ್ನೆಯ ರಾಮಲೀಲಾ ಮೈದಾನದ ರ‍್ಯಾಲಿ ಸೂಪರ್ ಹಿಟ್ ಆಗಿತ್ತು. ದೆಹಲಿ ಜನರು ಕೇಜ್ರಿವಾಲ್ ಜೊತೆಗಿದ್ದಾರೆ” ಎಂದು ಸೌರಭ್ ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ