ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಷನ್​​ಗಳನ್ನು ವಿಲೀನಗೊಳಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ

| Updated By: ರಶ್ಮಿ ಕಲ್ಲಕಟ್ಟ

Updated on: Mar 25, 2022 | 3:07 PM

Delhi Municipal Corporation Amendment Bill ಮಸೂದೆಯ ಪ್ರಕಾರ, ದೆಹಲಿಯ ಏಕೀಕೃತ ಮುನ್ಸಿಪಲ್ ಕಾರ್ಪೊರೇಶನ್ (MCD) "ಏಕೈಕ, ಸಮಗ್ರ ಮತ್ತು ಸುಸಜ್ಜಿತ ಘಟಕ" ಆಗಿರುತ್ತದೆ. ಇದು 250 ಕ್ಕಿಂತ ಹೆಚ್ಚು ವಾರ್ಡ್‌ಗಳನ್ನು ಹೊಂದಿರುವುದಿಲ್ಲ.

ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಷನ್​​ಗಳನ್ನು ವಿಲೀನಗೊಳಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ
ನಿತ್ಯಾನಂದ ರಾಯ್
Follow us on

ದೆಹಲಿ: ದೆಹಲಿಯಲ್ಲಿನ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು (Municipal Corporation) ವಿಲೀನಗೊಳಿಸಲು ಪ್ರಯತ್ನಿಸುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ, 2022 (Delhi Municipal Corporation (Amendment) Bill, 2022) ಅನ್ನು ವಿರೋಧ ಪಕ್ಷಗಳ ಆಕ್ಷೇಪಗಳ ನಡುವೆ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಯಿತು. ಮಸೂದೆಯ ಪ್ರಕಾರ, ದೆಹಲಿಯ ಏಕೀಕೃತ ಮುನ್ಸಿಪಲ್ ಕಾರ್ಪೊರೇಶನ್ (MCD) “ಏಕೈಕ, ಸಮಗ್ರ ಮತ್ತು ಸುಸಜ್ಜಿತ ಘಟಕ” ಆಗಿರುತ್ತದೆ. ಇದು 250 ಕ್ಕಿಂತ ಹೆಚ್ಚು ವಾರ್ಡ್‌ಗಳನ್ನು ಹೊಂದಿರುವುದಿಲ್ಲ. ಪ್ರಸ್ತುತ, ದೆಹಲಿಯು ಉತ್ತರ, ದಕ್ಷಿಣ ಮತ್ತು ಪೂರ್ವ ಪುರಸಭೆಗಳ ಅಡಿಯಲ್ಲಿ 272 ವಾರ್ಡ್‌ಗಳನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶದಲ್ಲಿ ಇರುವ ಕಾರಣ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಮಸೂದೆಯನ್ನು ಮಂಡಿಸಿದರು. ಈ ಕ್ರಮವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ ಮತ್ತು ರೆವಲ್ಯೂಷನರಿ ಸೋಷ್ಯಲಿಸ್ಟ್ ಪಾರ್ಟಿ ವಿರೋಧಿಸಿದವು. ಇದು ಭಾರತದ ಒಕ್ಕೂಟ ರಚನೆಗೆ ವಿರುದ್ಧವಾಗಿರುವುದಲ್ಲದೆ, ಎಂಸಿಡಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಧಿಕಾರವು ಚುನಾಯಿತ ರಾಜ್ಯ ಸರ್ಕಾರಕ್ಕೆ ಇರುತ್ತದೆ ಎಂದು ಈ ಪಕ್ಷಗಳು ಹೇಳಿವೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆಕ್ಟ್ (DMC), 1957 ರಲ್ಲಿ “ಸರ್ಕಾರ” ಎಂಬ ಪದವನ್ನು ಎಲ್ಲೆಡೆ “ಕೇಂದ್ರ ಸರ್ಕಾರ” ಎಂದು ಬದಲಿಸಲಾಗುವುದು ಎಂದು ಉಲ್ಲೇಖಿಸಿರುವಂತೆ ಚುನಾಯಿತ ರಾಜ್ಯ ಸರ್ಕಾರದ ಬದಲಿಗೆ “ಕಾರ್ಪೊರೇಷನ್” ಮೇಲೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲು ಮಸೂದೆ ಉದ್ದೇಶಿಸಿದೆ.
ಪರಿವರ್ತನಾ ಹಂತದಲ್ಲಿ ವಿಶೇಷ ಅಧಿಕಾರಿಯನ್ನು ನೇಮಿಸುವುದರಿಂದ (ಮೂರು ಎಂಸಿಡಿಗಳಿಂದ ಒಂದಕ್ಕೆ) ಹೊಸ ವಾರ್ಡ್‌ಗಳ ಡಿಲಿಮಿಟೇಶನ್‌ವರೆಗೆ ಎಲ್ಲವನ್ನೂ ಗೆಜೆಟ್ ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರ ಮಾಡುತ್ತದೆ ಎಂದು ಮಸೂದೆ ಹೇಳುತ್ತದೆ.

ಸಂಸತ್ತಿನ ಎರಡೂ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಿದ ನಂತರ, ಪುನರೇಕೀಕರಣ ಕಾನೂನನ್ನು ಔಪಚಾರಿಕವಾಗಿ ಜಾರಿಗೆ ತರಲು ಗೃಹ ವ್ಯವಹಾರಗಳ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸುತ್ತದೆ. ಇದರರ್ಥ ಈ ವರ್ಷದ ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಎಂಸಿಡಿ ಚುನಾವಣೆ 6-12 ತಿಂಗಳು ವಿಳಂಬವಾಗಲಿದೆ, ಏಕೆಂದರೆ ಡಿಲಿಮಿಟೇಶನ್ ಪ್ರಕ್ರಿಯೆ ಮತ್ತು ಸಿಬ್ಬಂದಿ ಮತ್ತು ಇತರ ಆಡಳಿತಾತ್ಮಕ ಕೆಲಸಗಳ ವಿಲೀನವು ಒಂದು ಏಕೀಕೃತ ಸಂಸ್ಥೆಗೆ ಸಮಯ ತೆಗೆದುಕೊಳ್ಳುತ್ತದೆ.

ಪಂಜಾಬ್‌ನ ಆನಂದಪುರ ಸಾಹಿಬ್‌ನ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಲೋಕಸಭೆಗೆ ಈ ಮಸೂದೆಯನ್ನು ಜಾರಿಗೊಳಿಸುವ ಶಾಸಕಾಂಗ ಸಾಮರ್ಥ್ಯವಿಲ್ಲ ಎಂದು ಹೇಳಿದರು. ಈ ಮಸೂದೆಯ ವಸ್ತುಗಳು ಮತ್ತು ಕಾರಣಗಳ ಹೇಳಿಕೆಯು 2011 ರಲ್ಲಿ ಈ ಕಾಯಿದೆಯನ್ನು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಶಾಸಕಾಂಗ ಸಭೆಯು ಡಿಎಂಸಿ (ತಿದ್ದುಪಡಿ) ಕಾಯಿದೆ, 2011 ರ ಪ್ರಕಾರ ನಿಗಮವನ್ನು ತ್ರಿವಿಧೀಕರಣಕ್ಕೆ ಕಾರಣವಾಯಿತು ಎಂದು ಉಲ್ಲೇಖಿಸುತ್ತದೆ. ಜೂನ್ 1, 1993 ರಿಂದ ಜಾರಿಗೆ ಬರುವಂತೆ ಭಾರತದ ಸಂವಿಧಾನದಲ್ಲಿ ಭಾಗ 9(A) ಅನ್ನು ಸೇರಿಸಿದ ನಂತರ, ಭಾರತದ ಸಂವಿಧಾನದ 243 (P&R) ವಿಧಿಯ ಪ್ರಕಾರ ಪುರಸಭೆಗಳನ್ನು ರಚಿಸುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇರುತ್ತದೆ ಎಂದು ಅವರು ಹೇಳಿದ್ದಾರೆ
ಮೂಲಭೂತವಾಗಿ ನಾನು ಹೇಳಲು ಪ್ರಯತ್ನಿಸುತ್ತಿರುವುದು ಈ ಮೂರು ಪುರಸಭೆಗಳನ್ನು ಏಕೀಕರಿಸುವ ಶಾಸಕಾಂಗ ಸಾಮರ್ಥ್ಯವನ್ನು ಯಾವುದೇ ಸದನ ಹೊಂದಿದ್ದರೆ, ಅದು ದೆಹಲಿ ವಿಧಾನಸಭೆಯೇ ಹೊರತು ಈ ಸದನವಲ್ಲ. ಈ ಸದನವು ದೆಹಲಿ ಅಸೆಂಬ್ಲಿಗೆ ಬದಲಿಯಾಗಿ ಈ ಶಾಸನವನ್ನು ಕಾನೂನುಬಾಹಿರ ರೀತಿಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ. ಇದು ಅತ್ಯಂತ ಗಂಭೀರವಾದ ಸಾಂವಿಧಾನಿಕ ಸಮಸ್ಯೆಯಾಗಿದೆ. ಇದು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ತಿವಾರಿ ಹೇಳಿದರು.

ಪ್ರತಿಪಕ್ಷಗಳು ಎತ್ತಿರುವ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಸಚಿವ ರಾಯ್  ಅವರು ಮಸೂದೆಯು ಯಾವುದೇ ರೀತಿಯಲ್ಲಿ ಸಂವಿಧಾನದ ಆಶಯವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದರು. “ಅಲ್ಲದೆ, ಇದು ಯಾವುದೇ ಫೆಡರಲ್ ರಾಜ್ಯದ ಹಕ್ಕುಗಳನ್ನು ಅತಿಕ್ರಮಿಸುವುದಿಲ್ಲ. ಭಾರತದ ಸಂವಿಧಾನದ 239AA ವಿಧಿಯ ಪ್ರಕಾರ, ದೆಹಲಿ ಅಸೆಂಬ್ಲಿಯು ರೂಪಿಸಿದ ಯಾವುದೇ ವಿಷಯಕ್ಕೆ ತಿದ್ದುಪಡಿ ಮಾಡುವ ಅಥವಾ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಸಂಸತ್ತು ಹೊಂದಿದೆ. ಎಂಸಿಡಿಯನ್ನು ಮೂರಾಗಿ ವಿಭಜಿಸಿದ ಸಮಯದಲ್ಲಿ, ಇದು ದೆಹಲಿಯ ಪ್ರಗತಿಗೆ ಕಾರಣವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಎಂಸಿಡಿಗಳು ಒದಗಿಸುವ ಸೇವೆಗಳು ಸುಧಾರಿಸುತ್ತವೆ ಮತ್ತು ಅದರ ಕಾರ್ಮಿಕರ ಕಲ್ಯಾಣ ಇರುತ್ತದೆ ಎಂದು ಭಾವಿಸಲಾಗಿದೆ. ಆದರೆ ಕಳೆದ 10 ವರ್ಷಗಳಲ್ಲಿ ಇದ್ಯಾವುದೂ ಆಗಿಲ್ಲ. ದೆಹಲಿಯ ಜನರಿಗೆ ಹೆಚ್ಚಿನ ಪಾರದರ್ಶಕತೆ, ಸುಧಾರಿತ ಆಡಳಿತ ಮತ್ತು ನಾಗರಿಕ ಸೇವೆಯ ಹೆಚ್ಚು ಪರಿಣಾಮಕಾರಿ ವಿತರಣೆಗಾಗಿ ಮತ್ತು ಪ್ರಸ್ತುತ ಎಂಸಿಡಿಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಸರಾಗಗೊಳಿಸುವ ಸಲುವಾಗಿ ಮಸೂದೆಯನ್ನು ಪರಿಚಯಿಸಲಾಗಿದೆ ಎಂದಿದ್ದಾರೆ .

ದೆಹಲಿಯ ಮೂರು ಎಂಸಿಡಿಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ನಿಗದಿಯಾಗಿತ್ತು. ರಾಜ್ಯ ಚುನಾವಣಾ ಆಯೋಗವು ಮಾರ್ಚ್ 9 ರಂದು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲು ಯೋಜಿಸಿತ್ತು, ಆದರೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಸಂವಹನವನ್ನು ಉಲ್ಲೇಖಿಸಿ ಕೊನೆಯ ಕ್ಷಣದಲ್ಲಿ ಮುಂದೂಡಲಾಯಿತು, ಅದು ಮೂರು ನಿಗಮಗಳನ್ನು ಮರುಸೇರಿಸಲು ಕೇಂದ್ರವು ಯೋಜಿಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Pariksha Pe Charcha: ಏಪ್ರಿಲ್ 1ರಂದು ಪ್ರಧಾನಿ ಮೋದಿ ಜತೆ ‘ಪರೀಕ್ಷಾ ಪೇ ಚರ್ಚಾ’; 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

Published On - 2:31 pm, Fri, 25 March 22