ನವದೆಹಲಿ: ಈಗಾಗಲೇ ಮುಂಗಾರು (Monsoon) ಆಗಮನದಿಂದ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಮತ್ತು ಮಹಾರಾಷ್ಟ್ರ, ಅಸ್ಸಾಂ, ಮೇಘಾಲಯ ಮುಂತಾದ ರಾಜ್ಯಗಳಲ್ಲಿ ವರುಣನ ಆರ್ಭಟ (Heavy Rainfall) ಜೋರಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದೊಂದು ವಾರದಿಂದ ತುಂತುರು ಮಳೆಯಾಗುತ್ತಿದ್ದರೂ ಅಧಿಕೃತವಾಗಿ ಇನ್ನೂ ಮುಂಗಾರು (Rain Updates) ಪ್ರವೇಶವಾಗಿಲ್ಲ. ಈ ಬಾರಿ ತನ್ನ ಸಾಮಾನ್ಯ ಆಗಮನದ ದಿನಾಂಕಕ್ಕಿಂತ ಮೂರು ದಿನಗಳ ಬಳಿಕ ಅಂದರೆ ಜೂನ್ 30ರ ಸುಮಾರಿಗೆ ದೆಹಲಿಗೆ ನೈಋತ್ಯ ಮಾನ್ಸೂನ್ ಆಗಮಿಸುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ವರದಿ ತಿಳಿಸಿದೆ.
ಆದರೆ, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಗುಜರಾತ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಭಾನುವಾರ ಮಾನ್ಸೂನ್ ಸೂಚನೆ ಸಿಕ್ಕಿದೆ ಎಂದು ಹವಾಮಾನ ಬ್ಯೂರೋ ತಿಳಿಸಿದೆ. ಮುಂದಿನ 2ರಿಂದ 3 ದಿನಗಳಲ್ಲಿ ದೇಶದ ಹೆಚ್ಚಿನ ಭಾಗಗಳನ್ನು ಮುಂಗಾರು ಆವರಿಸಲಿದೆ ಎಂದು ಹವಾಮಾನ ಕಚೇರಿ ಭವಿಷ್ಯ ನುಡಿದಿದೆ.
“ನಾವು ದೆಹಲಿಯಲ್ಲಿ ಮಾನ್ಸೂನ್ ಆಗಮನದಲ್ಲಿ 2-3 ದಿನಗಳ ವಿಳಂಬವನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಖಾಸಗಿ ಮುನ್ಸೂಚಕರಾದ ಸ್ಕೈಮೆಟ್ ವೆದರ್ ಸರ್ವಿಸಸ್‌ನ ಹವಾಮಾನ ಬದಲಾವಣೆ ಮತ್ತು ಹವಾಮಾನಶಾಸ್ತ್ರದ ಉಪಾಧ್ಯಕ್ಷ ಮಹೇಶ್ ಪಲಾವತ್ ಹೇಳಿದ್ದಾರೆ. ದೆಹಲಿಯಲ್ಲಿ ಪ್ರತಿವರ್ಷ ಸಾಮಾನ್ಯವಾಗಿ ಜೂನ್ 27ರಂದು ಮುಂಗಾರು ಆಗಮನವಾಗುತ್ತದೆ. ಕೆಲವು ರಾಜ್ಯಗಳಲ್ಲಿ ಸುಮಾರು 4ರಿಂದ 5 ದಿನಗಳ ಮುಂಗಾರು ವಿಳಂಬ ಆಗಮನವನ್ನು ನಿರೀಕ್ಷಿಲಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಇದನ್ನೂ ಓದಿ: Karnataka Rain: ಬೆಂಗಳೂರು, ಕರಾವಳಿ, ಮಂಡ್ಯದಲ್ಲಿ 4 ದಿನ ಭಾರೀ ಮಳೆ; ಮಲೆನಾಡಿನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ
“ದೆಹಲಿ ಆರಂಭದ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ” ಎಂದು IMDಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಹಿರಿಯ ವಿಜ್ಞಾನಿ ಆರ್‌ಕೆ ಜೆನಮಣಿ ಹೇಳಿದ್ದಾರೆ. ಆದರೂ ಪೂರ್ವ ಮುಂಗಾರು ಮಳೆಯು ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಜೂನ್ 22ರವರೆಗೆ ಮುಂದುವರಿಯುತ್ತದೆ, ನಂತರ ಬಿಸಿ ಮತ್ತು ಶುಷ್ಕ ಗಾಳಿಯು ಬೀಸುತ್ತದೆ. ಇದು ದೆಹಲಿಯಲ್ಲಿ ತಾಪಮಾನದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮುಂದಿನ 2ರಿಂದ 3 ದಿನಗಳಲ್ಲಿ ಉತ್ತರ, ಮಧ್ಯ ಮತ್ತು ಪೂರ್ವ ಭಾರತದಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಜೂನ್ 24 ಮತ್ತು 30ರ ನಡುವೆ ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ. ಜೂನ್ 22ರಿಂದ ಪಶ್ಚಿಮ ರಾಜ್ಯಗಳಲ್ಲಿ ಬಿಸಿ ಗಾಳಿ ಬೀಸುತ್ತದೆ ಎನ್ನಲಾಗಿದೆ.
ಒಟ್ಟಾರೆ, ದೇಶದಾದ್ಯಂತ ಶೇ. 8ರಷ್ಟು ಮಾನ್ಸೂನ್ ಮಳೆ ಕಡಿಮೆಯಾಗಿದೆ. ವಾಯುವ್ಯ ಭಾರತದಲ್ಲಿ ಶೇ.33, ಮಧ್ಯ ಭಾರತದಲ್ಲಿ ಶೇ. 48, ದಕ್ಷಿಣ ಪರ್ಯಾಯ ದ್ವೀಪದಲ್ಲಿ ಶೇ. 22ರಷ್ಟು ಮಳೆಯ ಕೊರತೆ ಉಂಟಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ. 48ರಷ್ಟು ಮಳೆ ಅಧಿಕವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 am, Mon, 20 June 22