
ನವದೆಹಲಿ, ಅಕ್ಟೋಬರ್ 16: ಈ ಬಾರಿಯ ರಾಮಲೀಲಾ ಮೈದಾನದಲ್ಲಿ ರಾವಣನ ಜತೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ ದಹನ ಮಾಡಲಾಗುತ್ತಿದೆ. ಸಾಂಪ್ರದಾಯಿಕವಾಗಿ ರಾವಣನ ಪ್ರತಿಕೃತಿ ದಹನ ಮಾಡುವುದರ ಜೊತೆಗೆ, ಬರೋಬ್ಬರಿ 30 ಅಡಿ ಎತ್ತರದ ದೈತ್ಯ ‘ಜಿರಳೆ’ಯ ಪ್ರತಿಕೃತಿಯನ್ನು ಸುಡಲು ಶ್ರೀ ಕೇಶವ ರಾಮಲೀಲಾ ಸಮಿತಿ ನಿರ್ಧರಿಸಿದೆ. ಪಿತಾಂಪುರದ ಶ್ರೀ ಕೇಶವ ರಾಮಲೀಲಾ ಮೈದಾನದಲ್ಲಿ ಕೈಗೊಂಡಿರುವ ಈ ವಿನೂತನ ಪ್ರಯೋಗವು ರಾಷ್ಟ್ರ ರಾಜಧಾನಿಯಾದ್ಯಂತ ಸಾರ್ವಜನಿಕರು ಮತ್ತು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
ಶ್ರೀ ಕೇಶವ ರಾಮಲೀಲಾ ಸಮಿತಿಯ ಅಧ್ಯಕ್ಷರೂ ಹಾಗೂ ಬಿಜೆಪಿ ಶಾಸಕರೂ ಆಗಿರುವ ಅಶೋಕ್ ಗೋಯಲ್ ಈ ಬಗ್ಗೆ ಮಾತನಾಡಿ, “ಜಿರಳೆಯು ಕೊಳಕು, ಅನೈರ್ಮಲ್ಯ ಮತ್ತು ರೋಗರುಜಿನಗಳ ಸಂಕೇತವಾಗಿದೆ. ರಾವಣನ ದಹನದ ಮೂಲಕ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನದ ವಿಜಯವನ್ನು ಸಾರುವಂತೆ, ಜಿರಳೆ ದಹನದ ಮೂಲಕ ‘ಸ್ವಚ್ಛ ಭಾರತ ಮತ್ತು ಸ್ವಚ್ಛ ದೆಹಲಿ’ ಅಭಿಯಾನದ ಮಹತ್ವವನ್ನು ಸಮಾಜಕ್ಕೆ ಸಾರುವುದು ನಮ್ಮ ಮೂಲ ಉದ್ದೇಶ” ಎಂದು ತಿಳಿಸಿದ್ದಾರೆ.
“ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಅಥವಾ ಯಾರನ್ನೂ ಗುರಿಯಾಗಿಸುವ ಇರಾದೆ ಇಲ್ಲ. ರಾವಣನ ಅಸುರೀ ಸೈನ್ಯದಲ್ಲಿ ಜಿರಳೆಗಳನ್ನು ಒಂದು ಬಗೆಯ ಕ್ರಿಮಿ-ರಾಕ್ಷಸರಂತೆ ಬಿಂಬಿಸಲಾಗುತ್ತಿದ್ದು, ನಕಾರಾತ್ಮಕತೆಯನ್ನು ಸುಟ್ಟು ಸಕಾರಾತ್ಮಕತೆಯನ್ನು ಸ್ವಾಗತಿಸುವ ಸಂಕೇತವಷ್ಟೇ ಇದು” ಎಂದು ಗೋಯಲ್ ಸಮರ್ಥಿಸಿಕೊಂಡಿದ್ದಾರೆ.
ಮತ್ತಷ್ಟು ಓದಿ:ಪ್ರತಿಭಟನೆ ಮಾಡೋಕೂ ಲಕ್ಷ ಲಕ್ಷ ಹಣ ಕೊಡ್ಬೇಕು, ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಈ ವರ್ಷ 3 ದಿನ ಮಾತ್ರ ಅವಕಾಶ
ಕ್ರೋಚ್ ಜನತಾ ಪಕ್ಷ’ದ (CJP) ಪ್ರತಿಭಟನೆಗಳ ಹಿನ್ನೆಲೆ ಮತ್ತು ವಿವಾದ
ಸಮಿತಿಯು ಇದನ್ನು ಸ್ವಚ್ಛತೆಯ ಅಭಿಯಾನ ಎಂದು ಕರೆದಿದ್ದರೂ, ದೆಹಲಿ ರಾಜಕೀಯದಲ್ಲಿ ಇದು ನೇರ ರಾಜಕೀಯ ತಿವಿತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್, ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳೊಂದಿಗೆ (AISA) ಸೇರಿ ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದೆ.
ಇದೇ ಸಿಜೆಪಿ ಸಂಘಟನೆಯು ಈ ಹಿಂದೆ ನೀಟ್ ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ ಅವರ ಸಚಿವ ಸ್ಥಾನದ ನಿರ್ಗಮನಕ್ಕೆ ಕಾರಣವಾಗಿತ್ತು.
ಸಿಜೆಪಿ ನಾಯಕರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಜೈಲುಪಾಲಾಗಿರುವ ಹೊತ್ತಲ್ಲೇ, ಬಿಜೆಪಿ ಶಾಸಕರ ನೇತೃತ್ವದ ಸಮಿತಿಯು ರಾಮಲೀಲಾದಲ್ಲಿ ‘ಜಿರಳೆ’ಯನ್ನೇ ಸುಡಲು ಮುಂದಾಗಿರುವುದು ಆಡಳಿತ ಪಕ್ಷವು ಪ್ರತಿಭಟನಾ ನಿರತ ಸಂಘಟನೆಗೆ ನೀಡುತ್ತಿರುವ ಪರೋಕ್ಷ ರಾಜಕೀಯ ಟಾಂಗ್ ಎಂದೇ ವಿಶ್ಲೇಷಿಸಲಾಗುತ್ತಿದೆ.
ದೆಹಲಿಯ ಪ್ರಮುಖ ರಾಮಲೀಲಾ ಸಮಿತಿಗಳು ಪ್ರತಿವರ್ಷ ರಾವಣನ ಪ್ರತಿಕೃತಿಯ ಜೊತೆಗೆ ಸಮಾಜದಲ್ಲಿನ ಪ್ರಚಲಿತ ಕೆಡುಕುಗಳಾದ ಭ್ರಷ್ಟಾಚಾರ, ಮಾದಕವಸ್ತು ಜಾಲ, ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಮಾಲಿನ್ಯವನ್ನು ಸಂಕೇತಿಸುವ ಹೆಚ್ಚುವರಿ ಪ್ರತಿಕೃತಿಗಳನ್ನು ದಹನ ಮಾಡುವುದು ವಾಡಿಕೆ.
ಪಿತಾಂಪುರದ ಮೈದಾನದಲ್ಲಿ 30 ಅಡಿ ಎತ್ತರದ ಈ ಜಿರಳೆಯ ಪ್ರತಿಕೃತಿಯನ್ನು ಬಿದಿರು, ಕಾಗದ ಮತ್ತು ಪಟಾಕಿಗಳನ್ನು ಬಳಸಿ ವಿಶೇಷವಾಗಿ ತಯಾರಿಸಲಾಗುತ್ತಿದ್ದು, ದಸರಾ ದಿನದಂದು ರಾವಣ ದಹನಕ್ಕಿಂತ ಮುಂಚಿತವಾಗಿ ಈ ಪ್ರತಿಕೃತಿಯನ್ನು ದಹಿಸಲು ಸಿದ್ಧತೆಗಳು ಪೂರ್ಣಗೊಂಡಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ