Mughal Garden: ದೆಹಲಿಯ ಮೊಘಲ್ ಗಾರ್ಡನ್‌ ಇನ್ನು ಅಮೃತ ಉದ್ಯಾನ; ಹೆಸರು ಬದಲಾಯಿಸಿದ ಕೇಂದ್ರ

|

Updated on: Jan 28, 2023 | 6:01 PM

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಮೊಘಲ್ ಗಾರ್ಡನ್‌ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು, ಅಮೃತ ಉದ್ಯಾನವೆಂದು ಹೊಸದಾಗಿ ನಾಮಕರಣ ಮಾಡಿದೆ.

Mughal Garden: ದೆಹಲಿಯ ಮೊಘಲ್ ಗಾರ್ಡನ್‌ ಇನ್ನು ಅಮೃತ ಉದ್ಯಾನ; ಹೆಸರು ಬದಲಾಯಿಸಿದ ಕೇಂದ್ರ
ಮೊಘಲ್ ಗಾರ್ಡನ್‌ (ಚಿತ್ರ ಕೃಪೆ; ಟ್ವಿಟರ್)
Image Credit source: Twitter
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಐತಿಹಾಸಿಕ ಮೊಘಲ್ ಗಾರ್ಡನ್‌ (Mughal Garden) ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು, ಅಮೃತ ಉದ್ಯಾನವೆಂದು (Amrit Udyan) ಹೊಸದಾಗಿ ನಾಮಕರಣ ಮಾಡಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ (Azadi Ka Amrit Mahotsav)’ ಅಂಗವಾಗಿ ಹೆಸರು ಬದಲಾವಣೆ ಮಾಡಲಾಗಿದೆ. ಗಾರ್ಡನ್ ಹೆಸರು ಬದಲಾವಣೆ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ ಎಂದು ರಾಷ್ಟ್ರಪತಿಗಳ ಮಾಧ್ಯಮ ಉಪ ಕಾರ್ಯದರ್ಶಿ ನವಿಕಾ ಗುಪ್ತಾ ಶನಿವಾರ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿ ಭವನದ ಆವರಣದಲ್ಲಿರುವ ನವೀಕೃತ ಗಾರ್ಡನ್​​ ಅನ್ನು ರಾಷ್ಟ್ರ ಪತಿಗಳು ಭಾನುವಾರ ಉದ್ಘಾಟಿಸಲಿದ್ದು ಜನವರಿ 31ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ದೊರೆಯಲಿದೆ. ಮಾರ್ಚ್ 31ರ ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಲಿದೆ.

ಸುಮಾರು 15 ಎಕರೆ ವಿಸ್ತಾರವಾಗಿರುವ ಈ ಉದ್ಯಾನವನ್ನು ರಾಷ್ಟ್ರಪತಿ ಭವನದ ಆತ್ಮ ಎಂದೂ ಕರೆಯಲಾಗುತ್ತದೆ. ಈ ಉದ್ಯಾನವನದ ಒಂದು ಪ್ರದೇಶವು ವಿಶೇಷ ಬಗೆಯ ಗುಲಾಬಿಗಳಿಗೆ ಹೆಸರುವಾಸಿಯಾಗಿದೆ. ರಾಷ್ಟ್ರಪತಿ ಭವನ ಮತ್ತು ಮೊಘಲ್ ಉದ್ಯಾನಗಳನ್ನು ಇಂಗ್ಲಿಷ್ ವಾಸ್ತುಶಿಲ್ಪಿ ಸರ್ ಎಡ್ವರ್ಡ್ ಲುಟಿಯೆನ್ಸ್ ವಿನ್ಯಾಸಗೊಳಿಸಿದ್ದಾರೆ. ಮೊಘಲ್ ಉದ್ಯಾನವನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಉದ್ಯಾನವು ರೋಸ್ ಗಾರ್ಡನ್ ಜೊತೆಗೆ ಬಯೋ ಡೈವರ್ಸಿಟಿ ಪಾರ್ಕ್, ಹರ್ಬಲ್ ಗಾರ್ಡನ್, ಬಟರ್‌ಫ್ಲೈ, ಮ್ಯೂಸಿಕಲ್ ಫೌಂಟೇನ್, ಸನ್ಕನ್ ಗಾರ್ಡನ್, ಕ್ಯಾಕ್ಟಸ್ ಗಾರ್ಡನ್, ನ್ಯೂಟ್ರಿಷನಲ್ ಗಾರ್ಡನ್ ಮತ್ತು ಬಯೋ ಫ್ಯುಯೆಲ್ ಪಾರ್ಕ್ ಒಳಗೊಂಡಿದೆ.

ಇದನ್ನೂ ಓದಿ: India Republic Day 2023: ಈ ಬಾರಿಯ ಗಣರಾಜ್ಯೋತ್ಸವ ಪ್ರತಿ ವರ್ಷಕ್ಕಿಂತ ಭಿನ್ನ ಹೇಗೆ? ಇಲ್ಲಿದೆ ಮಾಹಿತಿ

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ, ದೆಹಲಿಯ ಅತ್ಯಂತ ಜನಪ್ರಿಯ ಸಾರ್ವಜನಿಕ ಸ್ಥಳ ರಾಜಪಥವನ್ನು 2022ರ ಸೆಪ್ಟೆಂಬರ್​​ನಲ್ಲಿ ಕೇಂದ್ರ ಸರ್ಕಾರ ಕರ್ತವ್ಯಪಥ ಎಂದು ಮರುನಾಮಕರಣ ಮಾಡಿತ್ತು. ಆ ಬಳಿಕ ಇದೀಗ ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್​ಗೆ ಅಮೃತ ಉದ್ಯಾನವೆಂದು ಮರುನಾಮಕರಣ ಮಾಡಿದೆ. ಕರ್ತವ್ಯಪಥ ಸುಮಾರು 1.1 ಲಕ್ಷ ಚದರ ಮೀಟರ್‌ಗಳ ಸುತ್ತಲೂ ಹಸಿರು ಹೊಂದಿರುವ ಕೆಂಪು ಗ್ರಾನೈಟ್ ನಡಿಗೆ ಮಾರ್ಗಗಳನ್ನು ಹೊಂದಿದೆ. ಕರ್ತವ್ಯ ಪಥದ ಉದ್ದಕ್ಕೂ 133ಕ್ಕೂ ಹೆಚ್ಚು ಲೈಟ್ ಕಂಬಗಳು, 4,087 ಮರಗಳು, 114 ಆಧುನಿಕ ಚಿಹ್ನೆಗಳು ಮತ್ತು ಮೆಟ್ಟಿಲುಗಳ ತೋಟಗಳಿವೆ. ಕರ್ತವ್ಯಪಥದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪುತ್ಥಳಿಯನ್ನೂ ಅನಾವರಣಗೊಳಿಸಲಾಗಿತ್ತು.

ಈ ಹಿಂದೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಅಲಹಾಬಾದ್ ಅನ್ನು ಪ್ರಯಾಗ್​ರಾಜ್ ಎಂದೂ, ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲ ಎಂದೂ ಮುಘಲ್​ಸರಾಯ್ ಅನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ನಗರ ಎಂದೂ, ಫಿರೋಜಾಬಾದ್ ಅನ್ನು ಚಂದ್ರ ನಗರ ಎಂದೂ ಮರುನಾಮಕರಣ ಮಾಡಿತ್ತು. ಇದು ರಾಜಕೀಯವಾಗಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಪ್ರಮುಖ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Sat, 28 January 23