ದೆಹಲಿಯಾದ್ಯಂತ ಹಲವು ಸಣ್ಣಸಣ್ಣ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವ ಉಂಟಾಗಿದೆ. ಇಂದು ಮಧ್ಯಾಹ್ನ ಸರೋಜ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹೈಕೋರ್ಟ್ ಮೆಟ್ಟಿಲೇರಿ, ಆಕ್ಸಿಜನ್ ತುರ್ತಾಗಿ ಬೇಕು.. ಸಹಾಯ ಮಾಡಿ ಎಂದು ಮನವಿ ಮಾಡಿದೆ. ಈ ಮಧ್ಯೆ ಆಮ್ಲಜನಕ ಸಮಸ್ಯೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಶಾಂತಿ ಮುಕುಂದ್ ಆಸ್ಪತ್ರೆಯ ಸಿಇಒ ದುಃಖ ತಡೆಯಲಾಗದೆ ಅತ್ತುಬಿಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಇನ್ನು 2 ತಾಸುಗಳಿಗಾಗುವಷ್ಟು ಮಾತ್ರ ಆಕ್ಸಿಜನ್ ಲಭ್ಯವಿದೆ. ಅದಾದ ಮೇಲೆ ರೋಗಿಗಳು ಸಾಯುತ್ತಾರೆ.. ಎನ್ನುತ್ತ ಕಣ್ಣಲ್ಲಿ ನೀರು ಹಾಕಿದ್ದಾರೆ.
ಎಎನ್ಐ ಜತೆ ಮಾತನಾಡಿದ ಸಿಇಒ ಸುನೀಲ್ ಸಗ್ಗರ್, ಇನ್ನು 2 ತಾಸುಗಳ ನಂತರ ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವುದಿಲ್ಲ. ಹಾಗಾಗಿ ನಾವು ರೋಗಿಗಳನ್ನು ಡಿಸ್ಚಾರ್ಜ್ ಮಾಡಿಸಿಬಿಡಿ. ಬೇರೆ ಆಸ್ಪತ್ರೆಗೆ ಆದರೂ ಹೋಗಲಿ ಎಂದು ವೈದ್ಯರಿಗೆ ಹೇಳುತ್ತಿದ್ದೇವೆ. ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಕೊಡುತ್ತಿದ್ದೆವೋ, ಅದರಲ್ಲಿ ಸ್ವಲ್ಪ ಕಡಿಮೆ ಮಾಡಲಾಗಿದೆ. ಆದರೂ ತುಂಬ ಕಾಲ ಉಳಿಯುವುದಿಲ್ಲ. ರೋಗಿಗಳನ್ನು ಹಾಗೇ ಇಟ್ಟುಕೊಂಡರೆ ಖಂಡಿತ ಅವರ ಜೀವ ಹೋಗುತ್ತದೆ ಎಂದಿದ್ದಾರೆ. ಹೀಗೆ ಹೇಳುತ್ತ ಹೇಳುತ್ತ ತುಂಬ ಭಾವುಕರಾಗಿದ್ದಾರೆ.
ನಮ್ಮ ಆಸ್ಪತ್ರೆಯಲ್ಲಿ ಸದ್ಯಕ್ಕೆ 110 ರೋಗಿಗಳು ಆಕ್ಸಿಜನ್ ಸಪೋರ್ಟ್ನಲ್ಲಿ ಇದ್ದಾರೆ. ಅದರಲ್ಲಿ 12 ಮಂದಿ ವೆಂಟಿಲೇಟರ್ನಲ್ಲಿದ್ದಾರೆ. 85 ಜನರಿಗೆ ನಿಮಿಷಕ್ಕೆ 5 ಲೀಟರ್ಗೂ ಹೆಚ್ಚು ಆಕ್ಸಿಜನ್ ನೀಡಲಾಗುತ್ತಿದೆ. ಕ್ಯಾನ್ಸರ್ ರೋಗಿಗಳು, ಹೃದಯ ಸಂಬಂಧಿ ಕಾಯಿಲೆಗಳು ಸೇರಿ ಹಲವು ರೋಗಗಳಿಂದ ಬಳಲುತ್ತಿರುವವರು ಇದ್ದಾರೆ. ನಾವು ವೈದ್ಯರಾಗಿ ಜೀವ ಉಳಿಸುವ ಕೆಲಸ ಮಾಡಬೇಕು. ಆದರೆ ಆಮ್ಲಜನಕವೇ ಇಲ್ಲದಿದ್ದರೆ ಅವರೆಲ್ಲ ಖಂಡಿತ ಸಾಯುತ್ತಾರೆ ಎಂದು ಆಸ್ಪತ್ರೆಯಲ್ಲಿರುವ ದುಸ್ಥಿತಿಯನ್ನು ವಿವರಿಸಿದ್ದಾರೆ.
ದೆಹಲಿಯ ಅನೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬಿಕ್ಕಟ್ಟು ಇದೆ. ಈ ಮಧ್ಯೆ ಪ್ರಮುಖ ಆಸ್ಪತ್ರೆಗಳಿಗೆ ಬುಧವಾರ ಮುಂಜಾನೆ ಆಕ್ಸಿಜನ್ ಪೂರೈಕೆ ಆಗಿದೆ. ಆದರೂ ಕೆಲವು ಮಧ್ಯಮ ಮತ್ತು ಸಣ್ಣಸಣ್ಣ ಆಸ್ಪತ್ರೆಗಳಿಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ಬಂದಿಲ್ಲ. ಇದರಿಂದ ಅಲ್ಲಿನ ರೋಗಿಗಳ ಬಗ್ಗೆ, ವೈದ್ಯಕೀಯ ಸಿಬ್ಬಂದಿ ಸಹಜವಾಗಿಯೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ಆಕ್ಸಿಜನ್ ತೀವ್ರ ಕೊರತೆ; ಹೈಕೋರ್ಟ್ ಮೆಟ್ಟಿಲೇರಿದ ದೆಹಲಿ ಆಸ್ಪತ್ರೆ
ಮಂಜು-ಅರವಿಂದ್ ಸ್ಟ್ರಾಂಗ್ ಎಂದು ಒಪ್ಪಿಕೊಂಡ ಬಿಗ್ಬಾಸ್ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ
(Delhi Shanti Mukand Hospital CEO breaks down as he speaks about Oxygen crisis)
Published On - 5:20 pm, Thu, 22 April 21