Assam Assembly Elections 2021: ಅಸ್ಸಾಂನ ಗೌರವ ಕುಗ್ಗಿಸುವವರಿಗೆ ಮತ ಹಾಕುವಿರೇ?; ಪ್ರಧಾನಿ ಮೋದಿ ಪ್ರಶ್ನೆ
ಕಳೆದ 5 ವರ್ಷಗಳಲ್ಲಿ ಅಸ್ಸಾಂನ ಎಲ್ಲಾ ಭಾಗಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿಕೊಳ್ಳಲಾಗಿದೆ. ಅಸ್ಸಾಂನ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ಭರವಸೆ ನೀಡಿದರು.
ಗುಹಾಹಟಿ: ಕಾಂಗ್ರೆಸ್ ಆಡಳಿತ ನಡೆಸಿದ 50-55 ವರ್ಷಗಳ ಕಾಲವೂ ಅಸ್ಸಾಂ, ಚಹಾದ ಗೌರವ ಕುಂದಿಸುವ ಶಕ್ತಿಗಳಿಗೆ ಬೆಂಬಲ ನೀಡಿತ್ತು. ಅಂತಹ ಪಕ್ಷಕ್ಕೆ ನೀವು ಮತ್ತೆ ಮತ ಹಾಕುವಿರೇ? ಅಸ್ಸಾಂ ಮತ್ತು ಭಾರತದ ಗೌರವ ಕುಗ್ಗಿಸಿದವರಿಗೆ ಶಿಕ್ಷೆಯಾಗುವುದು ಬೇಡವೇ ಎಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಚಬುವಾದಲ್ಲಿ ಇಂದು (ಮಾರ್ಚ್ 20) ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಶ್ನಿಸಿದರು.
ಅಸ್ಸಾಂ ಚಹಾದ ಗೌರವ ಕುಂದಿಸುವಂತಹ ‘ಟೂಲ್ಕಿಟ್‘ನ್ನು ಸೃಷ್ಟಿಸಲಾಗಿತ್ತು. ಆ ‘ಟೂಲ್ಕಿಟ್’ ಸೃಷ್ಟಿಸಿದ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದೆ. ಗೌರವಕ್ಕೆ ಧಕ್ಕೆ ತಂದವರನ್ನು ನೀವು ಕ್ಷಮಿಸುತ್ತೀರಾ? ಎಂದು ಅವರು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಸ್ಸಾಂನಿಂದ ಬಹುದೂರ ಸಾಗಿದೆ. ಕೆಲ ದಿನಗಳ ಹಿಂದೆ ಶ್ರೀಲಂಕಾದ ಫೋಟೊ ಹಂಚಿಕೊಂಡು ಅದು ಅಸ್ಸಾಂ ಎಂದಿದ್ದರು. ಅದಕ್ಕೂ ಕೆಲ ದಿನ ಮೊದಲು ತೈವಾನ್ನ ಫೋಟೊಕ್ಕೆ ಅಸ್ಸಾಂ ಎಂದು ಕರೆದಿದ್ದರು. ಕಾಂಗ್ರೆಸ್ಸಿನವರು ಅಸ್ಸಾಂನ ಪರಿಚಯವನ್ನೇ ಮರೆತಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಬಿಜೆಪಿ ಅಸ್ಸಾಂನ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ. ಕಳೆದ 5 ವರ್ಷಗಳಲ್ಲಿ ಅಸ್ಸಾಂನ ಎಲ್ಲಾ ಭಾಗಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿಕೊಳ್ಳಲಾಗಿದೆ. ಅಸ್ಸಾಂನ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ಭರವಸೆ ನೀಡಿದರು.
ಕಾಂಗ್ರೆಸ್ ಸಹ ಸುಮ್ಮನೆ ಕುಳಿತಿಲ್ಲ ಕಾಂಗ್ರೆಸ್ ಸಹ ಅಸ್ಸಾಂ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಇಂದು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಅಸ್ಸಾಂನಲ್ಲಿ ಸ್ಥಳೀಯ ಸಂಸ್ಕೃತಿಯ ಜತೆ ಬೆರೆತು ಪ್ರಚಾರ ಕೈಗೊಂಡಿದ್ದರು.
ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂನ ಸ್ಥಳೀಯ ಸಂಸ್ಕೃತಿ- ಸಂಪ್ರದಾಯಗಳನ್ನು ಅರಿಯುತ್ತಲೇ ಪ್ರಚಾರದಲ್ಲಿ ನಿರತರಾಗಿದ್ದರು. ಅಸ್ಸಾಂನ ಚಹಾ ತೋಟದ ಕಾರ್ಮಿಕರ ಸಾಂಪ್ರದಾಯಿಕ ನೃತ್ಯ ಝುಮುರ್ಗೆ ಹೆಜ್ಜೆ ಹಾಕಿದ್ದಾರೆ ಕಾಂಗ್ರೆಸ್ ನಾಯಕಿ. ಚುನಾವಣಾ ಪ್ರಚಾರದ ಹೆಸರಲ್ಲಿ ಸಾಂಪ್ರದಾಯಿಕ ನೃತ್ಯವೊಂದು ಜಗತ್ತಿನ ಗಮನ ಸೆಳೆದಿತ್ತು.
ಝುಮುರ್ ನೃತ್ಯಕ್ಕೆ ಅಸ್ಸಾಂನ ಟೀ ತೋಟದ ಕಾರ್ಮಿಕರ ಬದುಕಲ್ಲಿ ಇರುವ ಮಹತ್ವ ಅಪಾರ. ಟೀ ತೋಟಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಹೆಚ್ಚಾಗಿ ಶರತ್ಕಾಲದ ತಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಝುಮುರ್ ನೃತ್ಯ ಮಾಡುತ್ತಾರೆ. ಅಸ್ಸಾಂ ಪ್ರವಾಸದಲ್ಲಿರುವ 49 ವರ್ಷದ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಟೀ ಕಾರ್ಮಿಕ ಜತೆ ಹೆಜ್ಜೆಹಾಕಿದ್ದರು. ಕೆಂಪು-ಬಿಳಿ ಬಣ್ಣದ ಸೀರೆ ಧರಿಸಿದ್ದ ಟೀ ತೋಟದ ಸ್ಥಳೀಯ ಕಾರ್ಮಿಕ ಹೆಣ್ಣುಮಕ್ಕಳು ಪ್ರಿಯಾಂಕಾ ಗಾಂಧಿ ವಾದ್ರಾ ಜತೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆಹಾಕಿದ್ದರು. ಝುಮುರ್ ನೃತ್ಯ ಪ್ರಕಾರ ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲೂ ಕಂಡುಬರುತ್ತದೆ.
ಇದನ್ನೂ ಓದಿ: ಅಸ್ಸಾಂ ರಾಜಕಾರಣದಲ್ಲಿ ಅಭಿವೃದ್ಧಿ ಮಾತ್ರವಲ್ಲ, ಅಸ್ಮಿತೆಯೂ ನಿರ್ಣಾಯಕ ಪಾತ್ರ ವಹಿಸುತ್ತೆ: ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ
Assam Assembly Elections 2021: ಅಸ್ಸಾಂನಲ್ಲಿ ‘5 ಗ್ಯಾರಂಟಿ’ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್
Published On - 6:07 pm, Sat, 20 March 21