ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 5ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ತಕ್ಷಣ ಮಾತನಾಡಿದ ಫಡ್ನವಿಸ್, ಒಗ್ಗಟ್ಟಿದ್ದರೆ ಸುರಕ್ಷಿತವಾಗಿರುತ್ತೀರಿ, ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದ್ದಾರೆ.
ತಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಬಿಜೆಪಿ ಶಾಸಕರಿಗೆ ಧನ್ಯವಾದ ಅರ್ಪಿಸಿದ ಫಡ್ನವೀಸ್, ನವೆಂಬರ್ 20 ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭರ್ಜರಿ ಜಯಕ್ಕೆ ಪ್ರಧಾನಿ ಮೋದಿಯವರ ಏಕ್ ಹೇ ತೋ ಸೇಫ್ ಹೇ ಎನ್ನುವ ನಂಬಿಕೆಯೇ ಕಾರಣ ಎಂದು ಹೇಳಿದರು.
ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಫಡ್ನವೀಸ್ ಹೆಸರನ್ನು ಅಂಗೀಕರಿಸಲಾಯಿತು. ಬಿಜೆಪಿಯ ಹಿರಿಯ ನಾಯಕರಾದ ಚಂದ್ರಕಾಂತ್ ಪಾಟೀಲ್ ಮತ್ತು ಸುಧೀರ್ ಮುಂಗಂತಿವಾರ್ ಅವರು ದೇವೇಂದ್ರ ಫಡ್ನವಿಸ್ ಹೆಸರನ್ನು ಪ್ರಸ್ತಾಪಿಸಿದರು. ಪಂಕಜಾ ಮುಂಡೆ ಮತ್ತು ಪ್ರವೀಣ್ ದಾರೆಕರ್ ಅನುಮೋದಿಸಿದರು.
ಮತ್ತಷ್ಟು ಓದಿ: Devendra Fadnavis: ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ವಿಜಯ್ ರೂಪಾನಿ ಅವರನ್ನು ವೀಕ್ಷಕರನ್ನಾಗಿ ನೇಮಿಸಿತ್ತು. ಫಡ್ನವೀಸ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಅಕ್ಟೋಬರ್ 2014 ರಿಂದ ಐದು ವರ್ಷಗಳ ಕಾಲ ಅವರು ಮೊದಲ ಬಾರಿಗೆ ಸಿಎಂ ಆಗಿದ್ದರು. ಅವರು 23 ನವೆಂಬರ್ 2019 ರಿಂದ 28 ನವೆಂಬರ್ 2019 ರವರೆಗೆ ಎರಡನೇ ಬಾರಿಗೆ ಸಿಎಂ ಆಗಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಮಾರು 2,000 ವಿವಿಐಪಿಗಳು ಮತ್ತು 40,000 ಬೆಂಬಲಿಗರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ.
2024 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟ ನಿರ್ಣಾಯಕ ವಿಜಯವನ್ನು ಕಂಡಿದೆ. 235 ಸ್ಥಾನಗಳೊಂದಿಗೆ ಪ್ರಚಂಡ ಗೆಲುವು ಸಾಧಿಸಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Wed, 4 December 24