ಮುಂಬೈ: ಭಾರತದಲ್ಲಿ ಕೊರೊನಾ ಹಾವಳಿ ಆರಂಭವಾದಾಗ ಹೆಚ್ಚೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಸಾಕ್ಷಿಯಾಗಿ ದೇಶದ ನಿದ್ದೆಗೆಡಿಸಿದ್ದ ಧಾರಾವಿ ಕೊಳಗೇರಿ ಇದೀಗ ಅಚ್ಚರಿಗೆ ಕಾರಣವಾಗಿದೆ. ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆಯವರೆಗಿನ 24 ತಾಸು ಅವಧಿಯಲ್ಲಿ ಒಂದೇ ಒಂದು ಕೊವಿಡ್ ಪ್ರಕರಣ ಧಾರಾವಿಯಲ್ಲಿ ದಾಖಲಾಗಿಲ್ಲ.
ಏಪ್ರಿಲ್ 1 ರಂದು ಧಾರಾವಿಯಲ್ಲಿ ಮೊದಲ ಕೊವಿಡ್ ಪ್ರಕರಣ ಪತ್ತೆಯಾಗಿತ್ತು. ಕೇವಲ 2.5 ಚದರ ಕಿ.ಮೀ ಪ್ರದೇಶದಲ್ಲಿ ಬರೋಬ್ಬರಿ 6.5 ಲಕ್ಷ ಜನರು ವಾಸಿಸುವುದರಿಂದ ಇಲ್ಲಿ ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವುದು ಸುಲಭವಾಗಿತ್ತು. ಇದೇ ಕಾರಣಕ್ಕೆ ತಲೆಕೆಡಿಸಿಕೊಂಡ ಮುಂಬೈ ಮಹಾನಗರ ಪಾಲಿಕೆ ಧಾರಾವಿಯಲ್ಲಿ ಕೊರೊನಾ ನಿಯಂತ್ರಿಸಲು ಹರಸಾಹಸಪಡಬೇಕಾಯಿತು.
ಆದರೆ, ಮುಂಬೈ ಮಹಾನಗರ ಪಾಲಿಕೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಫಲವಾಗಿ ಅಚ್ಚರಿಯ ರೀತಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು. ಜುಲೈ ತಿಂಗಳಲ್ಲಿ ಈ ಕುರಿತು ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ನಿಯಂತ್ರಣಕ್ಕೆ ಧಾರಾವಿಯನ್ನು ಉದಾಹರಣೆಯಾಗಿ ತೆಗೆದುಕೊಂಡಿತ್ತು.
ಇದೀಗ ಧಾರಾವಿಯಲ್ಲಿ 24 ಗಂಟೆ ಅವಧಿಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಧಾರಾವಿ ಪ್ರದೇಶದಲ್ಲಿ ಇದುವರೆಗೆ 3,788 ಜನ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆ ಪೈಕಿ 3,464 ಜನ ಗುಣಮುಖರಾಗಿದ್ದಾರೆ. ಪ್ರಸ್ತುತ ಧಾರಾವಿಯಲ್ಲಿ 12 ಸಕ್ರಿಯ ಪ್ರಕರಣಗಳಿದ್ದು ಅದರಲ್ಲಿ 8 ಜನ ಹೋಮ್ ಐಸೋಲೇಶನ್ನಲ್ಲಿ ಹಾಗೂ ನಾಲ್ವರು ಕೊವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
A ‘zero’ that will be remembered as the best score ever! #Dharavi reported ZERO positive cases for the first time since
outbreak of the pandemic. #COVID19 @mybmcWardGN @DighavkarKiran— माझी Mumbai, आपली BMC (@mybmc) December 25, 2020