ಹೋಟೆಲ್ನಲ್ಲಿ ಬಿಜೆಪಿ ಕಾರ್ಯಕ್ರಮ: ರೈತ ಪ್ರತಿಭಟನಾಕಾರರನ್ನು ನೋಡಿ ಹಿಂಬಾಗಿಲಿನಿಂದ ಪರಾರಿಯಾದ ನಾಯಕರು!
ಪ್ರತಿಭಟನಾನಿರತ ರೈತರು ಹೋಟೆಲ್ಗೆ ಮುತ್ತಿಗೆ ಹಾಕಲು ಪ್ರಯತನ್ನಿಸಿದ್ದು, ಬಿಜೆಪಿ ನಾಯಕರು ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ!
ಅಮೃತಸರ: ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ವಿಶೇಷ ದಿನವನ್ನು ಆಚರಣೆ ಮಾಡಲು ಪಂಜಾಬ್ ಬಿಜೆಪಿ ನಾಯಕರು ಹೋಟೆಲ್ ಒಂದರಲ್ಲಿ ಸೇರಿದ್ದರು. ಈ ವೇಳೆ ಪ್ರತಿಭಟನಾನಿರತ ರೈತರು ಹೋಟೆಲ್ಗೆ ಮುತ್ತಿಗೆ ಹಾಕಲು ಪ್ರಯತನ್ನಿಸಿದ್ದು, ಬಿಜೆಪಿ ನಾಯಕರು ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ!
ಫಾಗ್ವಾರದ ಹೋಟೆಲ್ ಒಂದರಲ್ಲಿ ಬಿಜೆಪಿ ನಾಯಕರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಬಿಜೆಪಿ ನಾಯಕರಿಗೆ ಪೊಲೀಸ್ ಭದ್ರತೆ ಕೂಡ ಇತ್ತು. ಇದನ್ನು ಅರಿತ ಭಾರ್ತಿ ಕಿಸಾನ್ ಯೂನಿಯನ್ ಹೋಟೆಲ್ ಹೊರ ಭಾಗದಲ್ಲಿ ಪ್ರತಿಭಟೆ ನಡೆಸಿದ್ದಾರೆ.
ಕೆಲವರು ಒಳಗೆ ಸೇರಿದ್ದರೆ, ಇನ್ನೂ ಕೆಲವರು ಕಾರ್ಯಕ್ರಮಕ್ಕೆ ಆಗಮಿಸುವವರಿದ್ದರು. ಕೆಲ ಬಿಜೆಪಿ ನಾಯಕರನ್ನು ಒಳಗೆ ಬಿಡಲು ರೈತ ಪ್ರತಿಭಟನಾಕಾರರು ತಡೆವೊಡ್ಡಿದ್ದಾರೆ. ಕೆಲವರು ಹೋಟೆಲ್ ಒಳ ನುಗ್ಗಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಬಿಜೆಪಿ ನಾಯಕರು ಹೋಟೆಲ್ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೇಳಿ ಬಂದಿದೆ.
ಈ ಹೋಟೆಲ್ ಬಿಜೆಪಿ ಕಾರ್ಯಕರ್ತನೋರ್ವನಿಗೆ ಸೇರಿದ್ದಾಗಿದೆ. ಇವರು ಚಿಕನ್ ಉತ್ಪನ್ನ ತಯಾರಿಸುವ ಉದ್ಯಮ ಕೂಡ ನಡೆಸುತ್ತಿದ್ದಾರೆ.ಈ ಉತ್ಪನ್ನಗಳನ್ನು ಈಗ ಬ್ಯಾನ್ ಮಾಡುವ ಬೆದರಿಕೆಯನ್ನು ರೈತರು ಒಡ್ಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಪೂರೈಸಿದೆ. ಸರ್ಕಾರ ಈಗಾಗಲೇ ಕೆಲ ಸುತ್ತಿನ ಮಾತುಕತೆ ನಡೆಸಿದರೂ ಅದು ಫಲ ಕೊಡಲಿಲ್ಲ. ಈ ಬೆನ್ನಲ್ಲೇ ಪ್ರತಿಭಟನಾ ರೈತರು, ಸರ್ಕಾರ ಮುಕ್ತ ಮನಸ್ಸಿನಿಂದ ಬಂದರೆ ನಾವು ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ರವಾನೆ ಮಾಡಿದ್ದರು.
ಸರ್ಕಾರ ಮುಕ್ತ ಮನಸ್ಸಿನಿಂದ ಬಂದರೆ ನಾವು ಮಾತುಕತೆಗೆ ಸಿದ್ಧ: ಪ್ರತಿಭಟನಾ ರೈತರ ಸಂದೇಶ