ರಾಷ್ಟ್ರಗೀತೆ ಬಗ್ಗೆ ಅಂಥಾ ಭಾವನೆಗಳನ್ನು ಹೊಂದಿರುವರು ದೇಶವನ್ನು ಹೇಗೆ ಗೌರವಿಸುತ್ತಾರೆ?: ಅಬು ಆಜ್ಮಿ ಹೇಳಿಕೆಗೆ ಧರ್ಮೇಂದ್ರ ಪ್ರಧಾನ್ ಖಂಡನೆ

|

Updated on: Jul 19, 2023 | 8:55 PM

ಹೊಸ ಹೆಸರು, ಕೆಲಸ ಹಳೇದು. ಕೇವಲ ಹೆಸರನ್ನು ಬದಲಾಯಿಸುವುದಕ್ಕಿಂತ ಹೆಚ್ಚಾಗಿ, ಹೊಂದಿಕೆಯಾಗದ ಮೈತ್ರಿಯು ಭಾರತ, ಭಾರತದ ಜನರು ಮತ್ತು ಭಾರತೀಯತೆಯ ಸಂಕೇತಗಳ ಬಗೆಗಿನ ವರ್ತನೆಗಳು ಮತ್ತು ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ. ರಾಷ್ಟ್ರಗೀತೆಯ ಬಗ್ಗೆ ಅಂತಹ ಭಾವನೆಗಳನ್ನು ಹೊಂದಿರುವ ಜನರು ದೇಶವನ್ನು ಹೇಗೆ ಗೌರವಿಸುತ್ತಾರೆ? ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಗೀತೆ ಬಗ್ಗೆ ಅಂಥಾ ಭಾವನೆಗಳನ್ನು ಹೊಂದಿರುವರು ದೇಶವನ್ನು ಹೇಗೆ ಗೌರವಿಸುತ್ತಾರೆ?: ಅಬು ಆಜ್ಮಿ ಹೇಳಿಕೆಗೆ ಧರ್ಮೇಂದ್ರ ಪ್ರಧಾನ್ ಖಂಡನೆ
ಧರ್ಮೇಂದ್ರ ಪ್ರಧಾನ್
Follow us on

ದೆಹಲಿ ಜುಲೈ 19: ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ(Abu Azmi ), ನಾನು ವಂದೇ ಮಾತರಂನ್ನು ಗೌರವಿಸುತ್ತೇನೆ. ಆದರೆ ನಾನು ಅದನ್ನು ಓದಲಾರೆ. ಏಕೆಂದರೆ ನನ್ನ ಧರ್ಮವು ‘ಅಲ್ಲಾ’ ಹೊರತುಪಡಿಸಿ ಯಾರಿಗೂ ನಮಸ್ಕರಿಸುವುದಿಲ್ಲ ಎಂದು ಹೇಳುತ್ತದೆ ಎಂದಿದ್ದಾರೆ. ಆಜ್ಮಿಯವರ ಈ ಹೇಳಿಕೆ ಬಗ್ಗೆ ಎಎನ್ಐ ಸುದ್ದಿಸಂಸ್ಥೆಯ ಟ್ವೀಟ್​​ನ್ನು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra pradhan), ಹೊಸ ಹೆಸರು, ಕೆಲಸ ಹಳೇದು. ಕೇವಲ ಹೆಸರನ್ನು ಬದಲಾಯಿಸುವುದಕ್ಕಿಂತ ಹೆಚ್ಚಾಗಿ, ಹೊಂದಿಕೆಯಾಗದ ಮೈತ್ರಿಯು ಭಾರತ, ಭಾರತದ ಜನರು ಮತ್ತು ಭಾರತೀಯತೆಯ ಸಂಕೇತಗಳ ಬಗೆಗಿನ ವರ್ತನೆಗಳು ಮತ್ತು ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ. ರಾಷ್ಟ್ರಗೀತೆಯ ಬಗ್ಗೆ ಅಂತಹ ಭಾವನೆಗಳನ್ನು ಹೊಂದಿರುವ ಜನರು ದೇಶವನ್ನು ಹೇಗೆ ಗೌರವಿಸುತ್ತಾರೆ? ರಾಹುಲ್ ಗಾಂಧಿ (Rahul Gandhi), ನಿತೀಶ್ ಕುಮಾರ್, ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಯ ಬಗ್ಗೆ ಅಂತಹ ಅಭಿಪ್ರಾಯಗಳನ್ನು ಬೆಂಬಲಿಸುತ್ತಾರೆಯೇ ಎಂದು ಕೇಳಿದ್ದಾರೆ.


ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಎಸ್‌ಪಿ ಶಾಸಕ ಅಬು ಆಜ್ಮಿ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸಮಾಜವಾದಿ ಪಕ್ಷವು I.N.D.I.A ಯ ಒಂದು ಭಾಗವಾಗಿದೆ.ಅದರ ಶಾಸಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾನು ವಂದೇ ಮಾತರಂ ಹೇಳುವುದಿಲ್ಲ ಅದು ನನ್ನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಹೇಳುತ್ತಾರೆ. ಅವರು ಹೋಗಿ ಔರಂಗಜೇಬನ ಮುಂದೆ ತಲೆಬಾಗುತ್ತಾರೆ. ಆದರೆ ವಂದೇ ಮಾತರಂ ಹೇಳಲು ಹಿಂಜರಿಯುತ್ತಾರೆ, ಇಂಡಿಯಾ ಎಂದು ತಮ್ಮ ಹೆಸರಿನಲ್ಲಿ ಇಟ್ಟುಕೊಂಡವರು, ಅವರ ಕೆಲಸ ಯಾವಾಗಲೂ ಭಾರತ ವಿರೋಧಿಯಾಗಿದೆ ಏಕೆ? ಎಂದು ಪೂನಾವಾಲಾ ಕೇಳಿದ್ದಾರೆ.

ಅಂದಹಾಗೆ ಆಜ್ಮಿ ತಮ್ಮ ಹೇಳಿಕೆಯಿಂದಾಗಿ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನಟ ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರು ಅದಕ್ಕೆ ರಾಜಕೀಯ ಟೋನ್ ನೀಡಿದ್ದರು. ನಿಮ್ಮ ಬರೀ ದೇಹವನ್ನು ಪ್ರದರ್ಶಿಸುವುದನ್ನು ಕಲೆ ಮತ್ತು ಸ್ವಾತಂತ್ರ್ಯ ಎಂದು ಕರೆಯುವುದಾದರೆ, ಮತ್ತೊಂದೆಡೆ, ಹೆಣ್ಣು ತನ್ನ ಸಂಸ್ಕೃತಿಯ ಪ್ರಕಾರ ಹಿಜಾಬ್‌ನಿಂದ ತನ್ನ ದೇಹವನ್ನು ಮುಚ್ಚಲು ಬಯಸಿದರೆ, ಅದನ್ನು ದಬ್ಬಾಳಿಕೆ ಮತ್ತು ಧಾರ್ಮಿಕ ತಾರತಮ್ಯ ಎಂದು ಕರೆಯಲಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

2017 ರಲ್ಲಿ, ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಕಿರುಕುಳದ ಆರೋಪದ ಬಗ್ಗ್ಗೆ ಆಜ್ಮಿ ಹೇಳಿಕೆಯೂ ವಿವಾದಕ್ಕೀಡಾಗಿತ್ತು.ಅರ್ಧ ಉಡುಗೆಯಲ್ಲಿ ಕೆಲವು ಮಹಿಳೆಯರು ತಮ್ಮ ಸ್ನೇಹಿತರೊಂದಿಗೆ ತಡರಾತ್ರಿ ಬೀದಿಗೆ ಬಂದಾಗ, ಅಂತಹ ಘಟನೆಗಳು ಸಂಭವಿಸುತ್ತವೆ” ಎಂದಿದ್ದರು ಆಜ್ಮಿ.

ಅದೇ ವರ್ಷ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದು ಸಿಂಗಲ್ ಪೇರೆಂಟ್ ಆದ ಚಿತ್ರನಿರ್ಮಾಪಕ ಕರಣ್ ಜೋಹರ್ ಅವರನ್ನೂ ಆಜ್ಮಿ ಕೆಣಕಿದ್ದರು. ಅವನಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೇ? ಅವನಿಗೆ ಅನಾರೋಗ್ಯವಿದೆಯೇ?ಎಂದು ಸ್ಪಷ್ಟಪಡಿಸಬೇಕು. ಬಡ ಮಗುವನ್ನು ದತ್ತು ತೆಗೆದುಕೊಳ್ಳಬಹುದಿತ್ತು. ಇದು ಬಡವರ ಮೇಲಿನ ತಮಾಷೆ ಎಂದು ಆಜ್ಮಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Wed, 19 July 23