ಪಬ್ ಜಿ ಲವ್ ಸ್ಟೋರಿ; ಪಾಕ್ ಪ್ರಜೆ ಸೀಮಾರಿಂದ 2 ವಿಡಿಯೋ ಕ್ಯಾಸೆಟ್, 4 ಫೋನ್, 6 ಪಾಸ್‌ಪೋರ್ಟ್ ವಶಕ್ಕೆ
ವಶಪಡಿಸಿಕೊಂಡ ವಸ್ತುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆಕೆ ಗಡಿಯಾಚೆಗಿನ ಗೂಢಚಾರಿಕೆಯೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಯಾವುದೇ ನಿಖರವಾದ ಪ್ರತಿಕ್ರಿಯೆ ನೀಡಿಲ್ಲ.
ಹೊಸದಿಲ್ಲಿ: ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ (Seema Haider) ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಮಧ್ಯೆ, ಆಕೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (Uttar Pradesh Anti Terrorism Squad) ಸೀಮಾ ಹೈದರ್ರಿಂದ ಎರಡು ವಿಡಿಯೋ ಕ್ಯಾಸೆಟ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು, ಐದು ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳು ಮತ್ತು ಒಂದು ಅಪೂರ್ಣ ಪಾಸ್‌ಪೋರ್ಟ್ (ಬಳಕೆಯಾಗದ ಮತ್ತು ಹೆಸರು/ವಿಳಾಸ ಇಲ್ಲದ) ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ತಿಳಿಸಿದೆ.
ವಶಪಡಿಸಿಕೊಂಡ ವಸ್ತುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆಕೆ ಗಡಿಯಾಚೆಗಿನ ಗೂಢಚಾರಿಕೆಯೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಯಾವುದೇ ನಿಖರವಾದ ಪ್ರತಿಕ್ರಿಯೆ ನೀಡಿಲ್ಲ. ‘ನಮ್ಮ ಬಳಿ ಸಾಕಷ್ಟು ಪುರಾವೆ ಇಲ್ಲದೇ ಆಕೆ ಗೂಢಚಾರಿಕೆಗೆ ಬಂದವಳು’ ಎಂದು ಹೇಳುವುದು ಸೂಕ್ತವಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಸೀಮಾ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ವಿಚಾರಣೆಗೆ ಒಳಪಡಿಸಿದೆ.
ಸೀಮಾ ಆನ್‌ಲೈನ್ ಗೇಮ್ ಪಬ್ಜಿ ಮೂಲಕ 2020 ರಲ್ಲಿ ಭಾರತೀಯ ಪ್ರಜೆ ಸಚಿನ್ ಮೀನಾ ಅವರೊಂದಿಗೆ ಸಂಪರ್ಕಕ್ಕೆ ಬಂದರು. ಸುಮಾರು 15 ದಿನಗಳ ಕಾಲ ಗೇಮ್ ಆಡಿದ ನಂತರ, ಇಬ್ಬರೂ ತಮ್ಮ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಹೆಚ್ಚಿನ ಸಂವಹನಕ್ಕಾಗಿ ವಾಟ್ಸಾಪ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಂತರ ಅವರಿಬ್ಬರೂ ಪರಸ್ಪರ ಪ್ರೀತಿಸತೊಡಗಿದರು.
ಇದನ್ನೂ ಓದಿ: ಪಬ್ ಜಿ ಲವ್ ಸ್ಟೋರಿ; ಬಂಧನದ ಭೀತಿಯಿಂದ ಪಾಕ್ ಮಹಿಳೆ ಪಲಾಯನ ಮಾಡಲು ಪ್ರಯತ್ನಿಸಿದ್ದರು: ಪೊಲೀಸ್
ತನ್ನ ಪ್ರೇಮಿಯೊಂದಿಗೆ ಒಂದಾಗಲು ಸೀಮಾ ತನ್ನ ಮಕ್ಕಳೊಂದಿಗೆ ನೇಪಾಳ ಮತ್ತು ದುಬೈ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದರು. ಸೀಮಾ ಅವರ ಪಾಕಿಸ್ತಾನಿ ಪತಿ ಧುಲಾಮ್ ಹೈದರ್ 2019 ರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಕಲೆಹಾಕಿರುವ ಮಾಹಿತಿಯ ಪ್ರಕಾರ, ಗುಲಾಮ್ ಅವರು ಪ್ರತಿ ತಿಂಗಳು ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಮತ್ತು ಇತರ ಮನೆಯ ಖರ್ಚುಗಳಿಗೆಂದು ಹಣ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಸಚಿನ್ ಜೊತೆ ಸೀಮಾ ಅವರ ಪ್ರೇಮ ಸಂಬಂಧ ಗುಲಾಮ್ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಲಾಗುತ್ತಿದೆ. ಭಾರತೀಯ ಮಾಧ್ಯಮ ವರದಿಗಳ ಮೂಲಕ ಅವರು ಆ ಬಗ್ಗೆ ತಿಳಿದುಕೊಂಡರು. ಗುಲಾಮ್ ಅವರು ಸೀಮಾ ಅವರನ್ನು ಕಳುಹಿಸಿಕೊಡುವಂತೆ ಭಾರತ ಸರ್ಕಾರಕ್ಕೆ ವಿನಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:52 pm, Wed, 19 July 23