ಆಪರೇಷನ್ ಸಿಂಧೂರ್ ವೇಳೆ ಭಾರತ ಪಾಕಿಸ್ತಾನದ ಕಿರಾನಾ ಹಿಲ್ಸ್ ಪರಮಾಣು ಕೇಂದ್ರದ ಮೇಲೆ ದಾಳಿ ಮಾಡಿತ್ತಾ?

ಕಳೆದ ವರ್ಷ ನಡೆದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಸಮಯದಲ್ಲಿ ಭಾರತದ ಡ್ರೋನ್ ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ಬಿದ್ದಿತ್ತು. 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ವೇಳೆ ಭಾರತದ ಡ್ರೋನ್ (ಲೊಯಿಟರಿಂಗ್ ಮ್ಯೂನಿಷನ್) ಪಾಕಿಸ್ತಾನದ ಅತ್ಯಂತ ಆಯಕಟ್ಟಿನ ಮಿಲಿಟರಿ ಪ್ರದೇಶವಾದ ಕಿರಾನಾ ಹಿಲ್ಸ್ ಮೇಲೆ ಅಪ್ಪಳಿಸಿದ ಘಟನೆಗೆ ಸಂಬಂಧಿಸಿದಂತೆ ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ನೀಡಿರುವ ವಿವರಣೆ ಕೆಳಗಿನಂತಿದೆ.

ಆಪರೇಷನ್ ಸಿಂಧೂರ್ ವೇಳೆ ಭಾರತ ಪಾಕಿಸ್ತಾನದ ಕಿರಾನಾ ಹಿಲ್ಸ್ ಪರಮಾಣು ಕೇಂದ್ರದ ಮೇಲೆ ದಾಳಿ ಮಾಡಿತ್ತಾ?
Anil Chauhan
Image Credit source: TV9

Updated on: Aug 25, 2026 | 11:20 PM

ನವದೆಹಲಿ, ಆಗಸ್ಟ್ 25: ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯ ಸಮಯದಲ್ಲಿ ಭಾರತದ ಲೊಯಿಟರಿಂಗ್ ಮ್ಯೂನಿಷನ್ ಡ್ರೋನ್ ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ಬಿದ್ದಿತ್ತು. ಆದರೆ ಆ ದಾಳಿಯು ಸಂಪೂರ್ಣವಾಗಿ ಆಕಸ್ಮಿಕವಾಗಿತ್ತು ಎಂದು ಮಾಜಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ತಿಳಿಸಿದ್ದಾರೆ. ಭಾರತೀಯ ಪಡೆಗಳು ಸರ್ಗೋಧಾ ಮತ್ತು ಅದರ ಸುತ್ತಮುತ್ತಲಿನ ರಾಡಾರ್ ವ್ಯವಸ್ಥೆಗಳನ್ನು ಪತ್ತೆಹಚ್ಚಲು ಲೊಯಿಟರಿಂಗ್ ಡ್ರೋನ್‌ಗಳನ್ನು (ಇಸ್ರೇಲ್ ವಿನ್ಯಾಸದ ‘ಹ್ಯಾರೋಪ್’ ಡ್ರೋನ್) ನಿಯೋಜಿಸಿದ್ದವು ಎಂದು ಅವರು ತಿಳಿಸಿದ್ದಾರೆ.

ನವದೆಹಲಿಯ ವಿವೇಕಾನಂದ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನಿಲ್ ಚೌಹಾಣ್, ಸರ್ಗೋಧಾ ಮತ್ತು ಅತ್ಯಂತ ಆಯಕಟ್ಟಿನ ಮಿಲಿಟರಿ ಪ್ರದೇಶವಾದ ಕಿರಾನಾ ಹಿಲ್ಸ್ ಸುತ್ತಮುತ್ತಲಿನ ರಾಡಾರ್‌ಗಳನ್ನು ಪತ್ತೆಹಚ್ಚಲು ಭಾರತೀಯ ಪಡೆಗಳು ಈ ಡ್ರೋನ್‌ಗಳನ್ನು ನಿಯೋಜಿಸಿದ್ದವು ಎಂದು ವಿವರಿಸಿದರು.


ಪಾಕಿಸ್ತಾನದ ಪ್ರಮುಖ ಅಣುವಸ್ತ್ರ ಸಂಬಂಧಿತ ಮಿಲಿಟರಿ ನೆಲೆಯೆಂದು ಪರಿಗಣಿಸಲಾದ ಕಿರಾನಾ ಹಿಲ್ಸ್ ಅನ್ನು ಭಾರತ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿರಲಿಲ್ಲ. ಈ ಕಾರ್ಯಾಚರಣೆಯ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಸ್ಕಾರ್ದು ಮೇಲೆ ದಾಳಿ ಮಾಡಲು ಭಾರತೀಯ ವಾಯುಪಡೆಗೆ (IAF) ಅನುಮತಿ ಸಿಕ್ಕಿತ್ತಾದರೂ, ಹವಾಮಾನ ವೈಪರೀತ್ಯದಿಂದಾಗಿ ಆ ಕಾರ್ಯಾಚರಣೆಯನ್ನು ಕೈಬಿಡಬೇಕಾಯಿತು ಎಂದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಧ್ವಂಸಗೊಂಡಿದ್ದ ಜೈಶ್ ಪ್ರಧಾನ ಕಚೇರಿ ರೆಡಿ, ಮತ್ತೆ ಚುರುಕಾಯ್ತು ಜೆಇಎಂ ಉಗ್ರ ಜಾಲ

ಇಸ್ರೇಲ್ ವಿನ್ಯಾಸದ ‘ಹ್ಯಾರೋಪ್’ ಡ್ರೋನ್ ಆಗಿರಬಹುದಾದ ಈ ಕ್ಷಿಪಣಿಯು ಸೀಮಿತ ಹಾರಾಟದ ಸಮಯವನ್ನು ಹೊಂದಿತ್ತು. ತನ್ನ ಕಾರ್ಯಾಚರಣೆಯ ಅವಧಿಯಲ್ಲಿ ಯಾವುದೇ ರಾಡಾರ್ ಗುರಿಯನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ, ಅದು ಅಂತಿಮವಾಗಿ ಆ ಪ್ರದೇಶದ ಬೆಟ್ಟಗಳಲ್ಲಿ ಒಂದಕ್ಕೆ ಅಪ್ಪಳಿಸಿತು ಎಂದು ಅನಿಲ್ ಚೌಹಾಣ್ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ಪ್ರಮುಖ ಅಣುವಸ್ತ್ರ ಸಂಬಂಧಿತ ಮಿಲಿಟರಿ ನೆಲೆಯೆಂದು ಪರಿಗಣಿಸಲಾದ ಕಿರಾನಾ ಹಿಲ್ಸ್ ಬಳಿ ನಡೆದ ದಾಳಿಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಅನಿಲ್ ಚೌಹಾಣ್, ಭಾರತೀಯ ಮಿಲಿಟರಿ ಕಿರಾನಾ ಹಿಲ್ಸ್ ಅನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು. “ಪಾಕಿಸ್ತಾನದ ಅಣುವಸ್ತ್ರ ಸೌಲಭ್ಯಗಳಿರುವ ಕಿರಾನಾ ಹಿಲ್ಸ್ ಮೇಲೆ ದಾಳಿ ನಡೆದಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಹಲವು ಬಾರಿ ಕೇಳಿಬಂದಿದೆ. ಆ ದಾಳಿಗಳಿಗೆ ಮೊದಲು, ನಾವು ಸರ್ಗೋಧಾಗೆ ಹಲವಾರು ಲೊಯಿಟರಿಂಗ್ ಡ್ರೋನ್‌ಗಳನ್ನು ಕಳುಹಿಸಿದ್ದೆವು. ಸರ್ಗೋಧಾದಿಂದ ಸುಮಾರು 10 ಕಿಲೋಮೀಟರ್ ಉತ್ತರಕ್ಕೆ ಕಿರಾನಾ ಹಿಲ್ಸ್ ಇದೆ. ಆದ್ದರಿಂದ ಈ ಡ್ರೋನ್ ಸರ್ಗೋಧಾ ಸುತ್ತಮುತ್ತಲಿನ ರಾಡಾರ್‌ಗಳನ್ನು ಹುಡುಕುತ್ತಿತ್ತು. ಇವುಗಳಿಗೆ ನಿರ್ದಿಷ್ಟ ಆಯಸ್ಸು ಇರುತ್ತದೆ. ಅಂದರೆ ಅವು ಸುಮಾರು 2 ಗಂಟೆಗಳ ಕಾಲ ಆಕಾಶದಲ್ಲಿ ಸುತ್ತಾಡುತ್ತವೆ. ಒಂದುವೇಳೆ ಗುರಿ ಸಿಗದಿದ್ದರೆ ಕೆಳಗೆ ಬಿದ್ದು ಎಲ್ಲೋ ಒಂದೆಡೆ ಅಪ್ಪಳಿಸುತ್ತವೆ. ಆ ದಿನ ಕೂಡ ಆ ಡ್ರೋನ್ ಹಾಗೆಯೇ ಬಂದು ಆ ಬೆಟ್ಟಗಳಲ್ಲಿ ಒಂದಕ್ಕೆ ಅಪ್ಪಳಿಸಿರಬೇಕು. ಪಾಕಿಸ್ತಾನಿ ಮಾಧ್ಯಮಗಳು ಕಿರಾನಾ ಹಿಲ್ಸ್‌ನಿಂದ ಹೊಗೆ ಬರುತ್ತಿರುವ ಕೆಲವು ಚಿತ್ರಗಳನ್ನು ತೋರಿಸಿದ್ದಕ್ಕೆ ಇದುವೇ ಕಾರಣವಾಗಿರಬಹುದು” ಎಂದು ಮಾಜಿ ಸಿಡಿಎಸ್ ಅನಿಲ್ ಚೌಹಾಣ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us