ನನ್ನ ಕೈಲಾದಮಟ್ಟಿಗೂ ಒಳ್ಳೇ ಕೆಲಸ ಮಾಡಿದೆ, ಯಾರಿಗೆ ಏನನ್ನಿಸಿತೋ ಗೊತ್ತಿಲ್ಲ: ವರ್ಣರಂಜಕ ವ್ಯಕ್ತಿತ್ವದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ವಿದಾಯ ಭಾಷಣ

|

Updated on: Apr 23, 2021 | 10:21 PM

‘ನನ್ನಲ್ಲಿ ಇಂದು ಭಾವನೆಗಳ ಹೊಯ್ದಾಟವಿತ್ತು. ಯಾವುದೇ ವಿಷಯವನ್ನು ಸ್ಪಷ್ಟವಾಗಿ ಹೇಳಲು ನನಗೆ ಸಾಧ್ಯವಾಗಲಿಲ್ಲ. ಆದರೆ ನನಗೆ ಹೇಳಲು ಸಾಕಷ್ಟು ಇತ್ತು’ ಎಂದು ಬೋಬ್ಡೆ ಹೇಳಿದರು.

ನನ್ನ ಕೈಲಾದಮಟ್ಟಿಗೂ ಒಳ್ಳೇ ಕೆಲಸ ಮಾಡಿದೆ, ಯಾರಿಗೆ ಏನನ್ನಿಸಿತೋ ಗೊತ್ತಿಲ್ಲ: ವರ್ಣರಂಜಕ ವ್ಯಕ್ತಿತ್ವದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ವಿದಾಯ ಭಾಷಣ
ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಶುಕ್ರವಾರ ನಿವೃತ್ತರಾದರು.
Follow us on

ದೆಹಲಿ: ನನ್ನ ಕೈಲಾದಷ್ಟೂ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಯತ್ನಿಸಿದೆ. ಆದರೆ ದೇಶದ ಜನರಿಗೆ ಹೇಗೆ ಅನ್ನಿಸಿತೋ ಗೊತ್ತಿಲ್ಲ ಎಂದು ನಿವೃತ್ತರಾಗಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಶುಕ್ರವಾರದ ತಮ್ಮ ವಿದಾಯ ಭಾಷಣದಲ್ಲಿ ಹೇಳಿದರು. ಭಾಷಣದಲ್ಲಿ ತಮ್ಮ ಅಧಿಕಾರಾವಧಿಯ ಕೊನೆಯ ದಿನದ ವಿಚಾರಣೆಯ ಬಗ್ಗೆ ಪ್ರಸ್ತಾಪಿಸಿದ ಅವರು, ‘ನನ್ನ ಮನದಲ್ಲಿ ಮಿಶ್ರಭಾವನೆಗಳಿವೆ’ ಎಂದರು.

‘ನನ್ನಲ್ಲಿ ಇಂದು ಭಾವನೆಗಳ ಹೊಯ್ದಾಟವಿತ್ತು. ಯಾವುದೇ ವಿಷಯವನ್ನು ಸ್ಪಷ್ಟವಾಗಿ ಹೇಳಲು ನನಗೆ ಸಾಧ್ಯವಾಗಲಿಲ್ಲ. ಆದರೆ ನನಗೆ ಹೇಳಲು ಸಾಕಷ್ಟು ಇತ್ತು’ ಎಂದು ಬೋಬ್ಡೆ ಹೇಳಿದರು. ಬೋಬ್ಡೆ ಅವರಿದ್ದ ಸರ್​ಮೋನಿಯಲ್ ನ್ಯಾಯಪೀಠದಲ್ಲಿ ಮುಂದಿನ ಮುಖ್ಯನ್ಯಾಯಮೂರ್ತಿ ಎನ್​.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್.ಬೊಪಣ್ಣ ಮತ್ತು ವಿ.ರಾಮಸುಬ್ರಮಣ್ಯಂ ಅವರೂ ಇದ್ದರು.

‘ನಾನು ಈ ನ್ಯಾಯಾಲಯವನ್ನು ನಾನು ಖುಷಿಯಾಗಿ ಬಿಟ್ಟು ಹೋಗುತ್ತಿದ್ದೇನೆ. ಅತ್ಯುತ್ತಮ ವಾದಗಳು, ಉತ್ತಮ ನಡತೆ ಮತ್ತು ನ್ಯಾಯಕ್ಕಾಗಿ ಅತೀವ ಬದ್ಧತೆ ಇದ್ದವರ ಒಡನಾಟದ ನೆನಪುಗಳು ನನ್ನಲ್ಲಿವೆ’ ಎಂದರು.

17 ತಿಂಗಳ ಅಧಿಕಾರ ಅವಧಿ
ದೇಶದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಬೋಬ್ಡೆ ನವೆಂಬರ್ 2019ರಲ್ಲಿ ಅಧಿಕಾರ ಸ್ವೀಕರಿಸಿದ್ದರು. ಸುಮಾರು 17 ತಿಂಗಳ ಅವಧಿಯಲ್ಲಿ ಹಲವು ಪ್ರಮುಖ ಪ್ರಕರಣಗಳನ್ನು ಬೋಬ್ಡೆ ನಿರ್ವಹಿಸಿದ್ದರು. ಸುಪ್ರೀಂಕೋರ್ಟ್​ನಲ್ಲಿ ಇದೀಗ ಅತ್ಯಂತ ಹಿರಿಯ ನ್ಯಾಯಮೂರ್ತಿ ಎನಿಸಿರುವ ನೌತಲಪತಿ ವೆಂಕಟ ರಮಣ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ: ಕಡಿಮೆ ಮಾತು, ಖಚಿತ ನಿಲುವು- ಇದು ಸುಪ್ರೀಂಕೋರ್ಟ್​ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ಕಾರ್ಯಶೈಲಿ

ಹಲವಾರು ಮಹತ್ವದ ಪ್ರಕರಣಗಳು ಬೋಬ್ಡೆ ಅಧಿಕಾರ ಅವಧಿಯಲ್ಲಿ ಇತ್ಯರ್ಥವಾದವು.

ಅಯೋಧ್ಯಾ ಪ್ರಕರಣ, ಖಾಸಗಿ ಬದುಕಿನ ಹಕ್ಕು (ರೈಟ್ ಟು ಪ್ರೈವೆಸಿ), ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಟಾಟಾ-ಮಿಸ್ತ್ರಿ ಪ್ರಕರಣ, ಗ್ರೇಟ್ ಇಂಡಿಯನ್ ಬಸ್ಟರ್ಡ್​ ಹಕ್ಕಿಯ ಸಂರಕ್ಷಣೆ, ಕರ್ನಾಟಕದ ಗೋಕರ್ಣ ಮಹಾಬಲೇಶ್ವರ ದೇವಾಲಯ ವಿವಾದ, ಪಟಾಕಿ ನಿಷೇಧ ಮತ್ತು ಹೈಕೋರ್ಟ್​ಗಳಿಗೆ ಹಂಗಾಮಿ ನ್ಯಾಯಮೂರ್ತಿಗಳ ನೇಮಕ ಸೇರಿದಂತೆ ಹಲವು ಮಹತ್ವದ ವಿದ್ಯಮಾನಗಳನ್ನು ಬೋಬ್ಡೆ ತಮ್ಮ ಅಧಿಕಾರ ಅವಧಿಯಲ್ಲಿ ನಿರ್ವಹಿಸಿದರು. ನ್ಯಾಯದಾನ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಪ್ರತಿಪಾದಿಸುತ್ತಿದ್ದ ಬೋಬ್ಡೆ ಕಾನೂನು ಸಂಶೋಧನೆಯಲ್ಲಿ ನ್ಯಾಯಾಧೀಶರಿಗೆ ನೆರವಾಗಲೆಂದು ಸುಪ್ರೀಂಕೋರ್ಟ್​ ಪೋರ್ಟಲ್ ಆರಂಭಿಸಿದ್ದರು.

ಬೈಕ್ ಸವಾರಿ ಸಹ ಬೋಬ್ಡೆ ಅವರ ಆಸಕ್ತಿಗಳಲ್ಲಿ ಒಂದಾಗಿತ್ತು. ಹಾರ್ಲೆ ಡೇವಿಡ್​ಸನ್ ಕಂಪನಿಯ ದುಬಾರಿ ಬೈಕ್ ಸವಾರಿ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿದ್ದವು. ‘ಕೆಲ ನ್ಯಾಯಾಧೀಶರಿಗೆ ಗಾಲ್ಫ್​, ಬಾಡ್ಮಿಂಟನ್ ಇಷ್ಟದ ಆಟಗಳಾಗಿರುತ್ತವೆ. ಅದೇ ರೀತಿ ಬೋಬ್ಡೆ ಅವರಿಗೆ ಬೈಕ್ ಓಡಿಸುವುದು ಇಷ್ಟದ ಹವ್ಯಾಸ. ಕಾಲೇಜು ದಿನಗಳಲ್ಲಿಯೂ ಅವರು ಬಹುದೂರ ಬುಲೆಟ್ ಓಡಿಸುತ್ತಿದ್ದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರಿದ ನಂತರವೂ ಈ ಹವ್ಯಾಸವನ್ನು ಅವರು ಬಿಡಲಿಲ್ಲ’ ಎಂದು ಬೋಬ್ಡೆ ಅವರ ಗೆಳೆಯರು ನೆನಪಿಸಿಕೊಳ್ಳುತ್ತಾರೆ. ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ಬೈಕ್​ನಿಂದ ಬಿದ್ದು ಹಿಮ್ಮಡಿಯ ಮೂಳೆ ಮುರಿದಿತ್ತು. ಆಗಲೂ ಬೋಬ್ಡೆ ಅವರ ಬೈಕ್ ಪ್ರೀತಿ ದೇಶದಲ್ಲಿ ಸುದ್ದಿಯಾಗಿತ್ತು.

ಇದನ್ನೂ ಓದಿ: ಬುದ್ಧಿಜೀವಿಗಳೇ ಗೋವಾಕ್ಕೆ ಬನ್ನಿ, ಏಕರೂಪ ನಾಗರಿಕ ಸಂಹಿತೆ ಇಲ್ಲಿ ಹೇಗೆ ಕೆಲಸ ಮಾಡುತ್ತೆ ನೋಡಿ: ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಕರೆ

ಬೈಕ್ ಪ್ರಿಯ ಸಿಜೆ ಎಸ್.ಎ.ಬೋಬ್ಡೆ

ವರ್ಚುವಲ್ ವಿಚಾರಣೆ ಜಾರಿಗೆ ತಂದ ಖ್ಯಾತಿ
ತಮ್ಮ ಅಧಿಕಾರ ಅವಧಿಯಲ್ಲಿ ಒಂದೂ ನೇಮಕಾತಿಯನ್ನು ಬೋಬ್ಡೆ ಪೂರ್ಣಗೊಳಿಸಲಿಲ್ಲ ಎಂಬ ಅಪಖ್ಯಾತಿಯೂ ಅವರಿಗೆ ಬಂದಿದೆ. ಆದರೆ ಕೊರೊನಾ ಸೋಂಕು ಬಾಧಿಸುತ್ತಿರುವ ಸಂದರ್ಭದಲ್ಲಿ ನ್ಯಾಯಾಂಗದಲ್ಲಿ ವರ್ಚುವಲ್ ವ್ಯವಸ್ಥೆಯನ್ನು ಬೋಬ್ಡೆ ವಿಕಾಸಗೊಳಿಸಿದರು. ವಿಡಿಯೊ ಕಾನ್ಫರೆನ್ಸ್​ಗಳ ಮೂಲಕ ವಿಚಾರಣೆ, ಇ-ಫೈಲಿಂಗ್ ಮೂಲಕ ಅರ್ಜಿ ಪರಿಶೀಲನೆಗಳು ಚಾಲ್ತಿಗೆ ಬಂದವು. ಕೊರೊನಾ ಪಿಡುಗು ಅಗತ್ಯವಿರುವವರಿಗೆ ಕೋರ್ಟ್​ಗಳ ಬಾಗಿಲು ದೂರ ಮಾಡಲು ಬೋಬ್ಡೆ ಬಿಡಲಿಲ್ಲ. 1950ರಿಂದ ನ್ಯಾಯಾಲಯಗಳಲ್ಲಿ ಬಾಕಿಯಿದ್ದ ಅಯೋಧ್ಯಾ ಭೂವಿವಾದವನ್ನು ಇತ್ಯರ್ಥಿಪಡಿಸಿದ ಸಂವಿಧಾನ ಪೀಠದಲ್ಲಿ ಬೋಬ್ಡೆ ಸಹ ಇದ್ದರು ಎಂಬುದು ಉಲ್ಲೇಖನೀಯ ಅಂಶ.

ಮಹಾರಾಷ್ಟ್ರದ ನಾಗಪುರದಲ್ಲಿ ಏಪ್ರಿಲ್ 24, 1956ರಲ್ಲಿ ಜನಿಸಿದ ಬೊಬ್ಡೆ ಸುಪ್ರೀಂಕೋರ್ಟ್​ನಲ್ಲಿ 21 ವರ್ಷಗಳ ಕಾಲ ವಕೀಲರಾಗಿ ಕೆಲಸ ಮಾಡಿದ್ದರು. ಮಾರ್ಚ್ 29, 2000ರಲ್ಲಿ ಬಾಂಬೆ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಅಕ್ಟೋಬರ್ 16, 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರಿ ಸ್ವೀಕರಿಸಿದ್ದರು. ಏಪ್ರಿಲ್ 12, 2013ರಲ್ಲಿ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

(Did my best dont know how it came across says outgoing chief justice SA Bobde)

ಇದನ್ನೂ ಓದಿ: ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಶಾರುಖ್​ ಖಾನ್​ಗೂ ಇತ್ತು ಆಹ್ವಾನ

ಇದನ್ನೂ ಓದಿ: ಮುಖ್ಯನ್ಯಾಯಮೂರ್ತಿ ಹುದ್ದೆಗೇರುವವರಿಗೆ 3 ವರ್ಷದ ಅಧಿಕಾರವಾದರೂ ಸಿಗಬೇಕು: ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್

Published On - 10:20 pm, Fri, 23 April 21