ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ (Airport Passengers) ಕಾಗದರಹಿತ ಪ್ರವೇಶ ಕಲ್ಪಿಸಲು ಕೇಂದ್ರ ಸರ್ಕಾರ ಮುಖಚಹರೆಯನ್ನೇ ಬಯೋಮೆಟ್ರಿಕ್ ಗುರುತಾಗಿ ಬಳಸಿಕೊಳ್ಳಲು ಅಧಿಕೃತವಾಗಿ ‘ಡಿಜಿಯಾತ್ರಾ’(Digi Yatra) ಪ್ರಾರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು (ಡಿಸೆಂಬರ್ 01) ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya M. Scindia) ‘ಡಿಜಿಯಾತ್ರಾ’ ವನ್ನು ಅನಾವರಣಗೊಳಿಸಿದರು. ಪ್ರಯಾಣಿಕರ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಪ್ರವೇಶವನ್ನು ‘ಡಿಜಿಯಾತ್ರಾ’ ಅನುಮತಿಸುತ್ತದೆ. ಇದರೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ ಹಾಗೂ ಗುರುತಿನ ಪುರಾವೆಗೆ ಮುಕ್ತಿ ಸಿಕ್ಕಂತಾಗಿದೆ.
ಈ ಡಿಜಿಯಾತ್ರಾದೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಾಗದರಹಿತ ಪ್ರವೇಶವಾಗಿರುತ್ತದೆ. ಮತ್ತು ಭದ್ರತಾ ತಪಾಸಣೆ ಸೇರಿದಂತೆ ವಿವಿಧ ಚೆಕ್ಕಿಂಗ್ ಬೋರ್ಡ್ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಡೇಟಾವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲು ಸಹಾಯಕವಾಗಿದೆ. ಇನ್ನು ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅಥವಾ ಸೆಕ್ಯೂರಿಟಿ ಚೆಕ್ಕಿಂಗ್ಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುವ ತಾಪತ್ರಯ ಇರುವುದಿಲ್ಲ.
ಬೋರ್ಡಿಂಗ್ ಪಾಸ್, ಗುರುತಿನ ಪುರಾವೆ ಒಯ್ಯುವ ರಗಳೆ ಬೇಡ ಎನ್ನುವ ಪ್ರಯಾಣಿಕರು, ಪ್ರಯಾಣಿಕರು ಮೊದಲು ಡಿಜಿಯಾತ್ರಾ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಆಧಾರ್ ಸಂಖ್ಯೆಯೊಂದಿಗೆ ತಮ್ಮ ಸೆಲ್ಫಿ ಫೋಟೋ ಗುರುತನ್ನು ಮೌಲ್ಯೀಕರಿಸಬೇಕು. ಬಳಿಕ ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಗುರುತಿನ ದಾಖಲೆ ನೀಡಿ ನೋಂದಾಯಿಸಿಕೊಳ್ಳಬೇಕು. ಆನಂತರ ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಮುಖಚಹರೆ ಸಂಗ್ರಹಿಸಲಾಗುತ್ತದೆ. ಅದಾದ ಬಳಿಕ ಪ್ರಯಾಣ ಮಾಡಿದರೆ, ಪ್ರಯಾಣಿಕರ ಮುಖವೇ ಗುರುತಿನ ಪುರಾವೆ ಹಾಗೂ ಬೋರ್ಡಿಂಗ್ ಪಾಸ್ ಆಗಿರುತ್ತದೆ.
ಮುಖಕ್ಕೆ ಕೊಂಚ ಗಾಯವಾಗಿ ಬ್ಯಾಂಡೇಜ್ ಸುತ್ತಿಕೊಂಡಿದ್ದರೂ, ಮುಖ ಚಹರೆಯನ್ನು ಯಂತ್ರಗಳು ಗುರುತು ಹಿಡಿಯಲಿವೆ. ಪ್ರತಿ ಐದು ವರ್ಷಕ್ಕೊಮ್ಮೆ ಚಹರೆಯ ಪರಿಷ್ಕೃತ ಚಿತ್ರವನ್ನು ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖಚಹರೆ ಆಧರಿತ ಬೋರ್ಡಿಂಗ್ ಪಾಸ್‌ಗೆ ತಾಂತ್ರಿಕ ಸೇವೆ ಒದಗಿಸಲು ಖಾಸಗಿ ಕಂಪನಿ ಜತೆ ಬೆಂಗಳೂರು ವಿಮಾನ ನಿಲ್ದಾಣ ಒಪ್ಪಂದ ಮಾಡಿಕೊಂಡಿತ್ತು.
ಇದನ್ನೂ ಓದಿ: Bengaluru airport ಕಣ್ಮನ ಸೆಳೆಯುವ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2; ಹೇಗಿದೆ ವಿನ್ಯಾಸ?
ನೂತನ ತಂತ್ರಜ್ಞಾನ ಹೇಗೆ ಕೆಲಸ ನಿರ್ವಹಿಸಲಿದೆ?
1 ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಿಯೋಸ್ಕ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅವುಗಳ ಮೂಲಕ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ.
2 ಪ್ರಯಾಣಿಕರು ಮೊದಲು ದ್ವಾರದ ಬಳಿ ಇರುವ ಕಿಯೋಸ್ಕ್ ಯಂತ್ರದಲ್ಲಿ ದಾಖಲೆಗಳ ಮಾಹಿತಿ ನಮೂದಿಸಬೇಕು. ಮುಖ ಹಾಗೂ ಕಣ್ಣಿನ ಗುರುತನ್ನು ಯಂತ್ರದಲ್ಲಿ ದಾಖಲಿಸಬೇಕು. ನಂತರ ನಿಲ್ದಾಣದ ಒಳಗೆ ಇರುವ ಕಿಯೋಸ್ಕ್ ಯಂತ್ರಗಳಲ್ಲಿ ಮುಖವನ್ನಷ್ಟೇ ತೋರಿಸಿ, ಸರಾಗವಾಗಿ ಮುಂದೆ ಹೋಗಬಹುದು.
3 ನಿಲ್ದಾಣದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಒಂದು ಬಾರಿ ನೋಂದಣಿ ಮಾಡುವುದು ಕಡ್ಡಾಯ. ಅದಾದ ನಂತರ ಜೀವನ ಪರ್ಯಂತ ಬೋರ್ಡಿಂಗ್ ಪಾಸ್ ಇಲ್ಲದೇ ನಿಲ್ದಾಣದಲ್ಲಿ ಓಡಾಡಬಹುದು.
4 ನೂತನ ತಂತ್ರಜ್ಞಾನದ ಸೌಲಭ್ಯ ದೇಶೀಯ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾತ್ರ ಸಿಗಲಿದೆ ಹಾಗೂ ವಿದೇಶಿ ಪ್ರಜೆಗಳಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ.
ವಿಮಾನ ನಿಲ್ದಾಣದಲ್ಲಿ ಇ ಗೇಟ್ ಪ್ರವೇಶ
1. ಪ್ರಯಾಣಿಕರು ಇ ಗೇಟ್ ಮೂಲಕ ಪ್ರವೇಶಿಸಬೇಕು
2. ಬಾರ್ ಕೋಡ್ ಇರುವ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿ
3. ಇ ಗೇಟ್ ನಲ್ಲಿ ಸ್ಥಾಪಿಸಿರುವ ಫೇಷಿಯಲ್ ರೆಕಗ್ನಿಷನ್ ಸಿಸ್ಟಂ ಕ್ಯಾಮೆರಾಕ್ಕೆ ಮುಖ ತೋರಿಸಿ
4. ಇದು ಪ್ರಯಾಣಿಕರ ಐಡಿ ಮತ್ತು ಪ್ರಯಾಣದ ಮಾಹಿತಿಯನ್ನು ಪರಿಶೀಲಿಸುತ್ತದೆ. ಪರಿಶೀಲನೆ ನಂತರ ಇ ಗೇಟ್ ತೆರೆಯುತ್ತದೆ.
ಭದ್ರತಾ ತಪಾಸಣೆ ವೇಳೆ ಅನುಸರಿಸಬೇಕಾದ ಕ್ರಮಗಳು
1. ಪ್ರಯಾಣಿಕರು ಪ್ರವೇಶ ಇ-ಗೇಟ್‌ಗೆ ಬರಬೇಕು
2. ಇ-ಗೇಟ್‌ನಲ್ಲಿ ಸ್ಥಾಪಿಸಲಾದ FRS ಕ್ಯಾಮೆರಾ ನೋಡಿ
3. ಸಿಸ್ಟಂ ಪ್ರಯಾಣಿಕರ ಐಡಿ ಮತ್ತು ಪ್ರಯಾಣ ದಾಖಲೆಯನ್ನು ಮೌಲ್ಯೀಕರಿಸುತ್ತದೆ
4. ಪ್ರಯಾಣಿಕರಿಗೆ ಭದ್ರತಾ ತಪಾಸಣೆಗೆ ಅವಕಾಶ ನೀಡಲು ಇ-ಗೇಟ್ ತೆರೆಯುತ್ತದೆ.
ಪ್ರಯಾಣಿಕರು DigiYatra ಬಳಸುವುದು ಹೇಗೆ?
1. ಬಯೋಮೆಟ್ರಿಕ್ ನೋಂದಣಿ
2. ಪ್ಲೇ ಸ್ಟೋರ್ ಅಥವಾ ಐಒಎಸ್ನಿಂದ ಡಿಜಿಯಾತ್ರಾ ಆಪ್ ಡೌನ್ ಲೋಡ್ ಮಾಡಿ
3.ನಿಮ್ಮ ಫೋನ್ ಸಂಖ್ಯೆ ಮತ್ತು ಒಟಿಪಿ ಬಳಸಿ ನೋಂದಣಿ ಮಾಡಿ
4.ಡಿಜಿ ಲಾಕರ್ ಬಳಸಿ ಆಧಾರ್ ಮಾಹಿತಿ ನೀಡಿ
5. ಡಿಜಿಲಾಕರ್ ನೋಂದಣಿ ಆಗಿರದಿದ್ದರೆ ನೋಂದಣಿ ಮಾಡಿಕೊಳ್ಳಿ
6. ಸೆಲ್ಫಿ ಕ್ಲಿಕ್ಕಿಸಿಕೊಳ್ಳಿ. ಸೆಲ್ಫಿಯ ಮೌಲ್ಯೀಕರಣವನ್ನು ಆಧಾರ್ ಮತ್ತು ಇನ್ನಿತರ ಮಾಹಿತಿಗಳಿಂದ ಮಾಡಲಾಗುತ್ತದೆ
7. ಸ್ಕ್ಯಾನ್ ಬೋರ್ಡಿಂಗ್ ಪಾಸ್ (ಪೂರ್ವಾಪೇಕ್ಷಿತ – ಚೆಕ್-ಇನ್) – ಸ್ಕ್ಯಾನಿಂಗ್ ಉದ್ದೇಶಗಳಿಗಾಗಿ ಫೋನ್ ಹೊರತುಪಡಿಸಿ ಬೇರೆ ಸಾಧನದಲ್ಲಿ ಭೌತಿಕ ಬೋರ್ಡಿಂಗ್ ಪಾಸ್ ಅಥವಾ ಬೋರ್ಡಿಂಗ್ ಪಾಸ್ QR ಕೋಡ್ / ಬಾರ್ ಕೋಡ್ ಹೊಂದಿರಬೇಕು
8. ವಿಮಾನ ನಿಲ್ದಾಣದಲ್ಲಿ ಈ ಮಾಹಿತಿ ಮತ್ತು ಬೋರ್ಡಿಂಗ್ ಪಾಸ್ ಮಾಹಿತಿ ಹಂಚಿಕೊಳ್ಳಿ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ