ಆರ್ಟ್​ ಆಫ್ ಲಿವಿಂಗ್​ ಪ್ರತಿಷ್ಠಾನದ ಕಾರ್ಯಕ್ರಮ ನಿರ್ದೇಶಕ ರಿಷಿ ನಿತ್ಯಪ್ರಜ್ಞಾ ಕೊವಿಡ್​ 19 ಸೋಂಕಿನಿಂದ ನಿಧನ; ರವಿಶಂಕರ ಗುರೂಜಿ ಆಪ್ತರು ಇವರು

| Updated By: Lakshmi Hegde

Updated on: Dec 29, 2021 | 1:37 PM

ಆರ್ಟ್​ ಆಫ್​ ಲಿವಿಂಗ್ ಸೇರುವುದಕ್ಕೂ ಮೊದಲು ರಿಷಿ ನಿತ್ಯಪ್ರಜ್ಞಾ ಕಾರ್ಪೋರೇಟ್ ಕಂಪನಿಯಲ್ಲಿ ಕೆಮಿಕಲ್​ ಇಂಜಿನಿಯರ್ ಆಗಿದ್ದರು. ಸಾಫ್ಟ್​ವೇರ್​ ಡೆವಲೆಪ್​ಮೆಂಟ್​ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದರು.

ಆರ್ಟ್​ ಆಫ್ ಲಿವಿಂಗ್​ ಪ್ರತಿಷ್ಠಾನದ ಕಾರ್ಯಕ್ರಮ ನಿರ್ದೇಶಕ ರಿಷಿ ನಿತ್ಯಪ್ರಜ್ಞಾ ಕೊವಿಡ್​ 19 ಸೋಂಕಿನಿಂದ ನಿಧನ; ರವಿಶಂಕರ ಗುರೂಜಿ ಆಪ್ತರು ಇವರು
ರಿಷಿ ನಿತ್ಯಪ್ರಜ್ಞಾ
Follow us on

ದೆಹಲಿ: ಆರ್ಟ್​ ಆಫ್ ಲಿವಿಂಗ್​ ಪ್ರತಿಷ್ಠಾನ(Art of Living Foundation)ದ ಕಾರ್ಯಕ್ರಮ ನಿರ್ದೇಶಕ ರಿಷಿ ನಿತ್ಯಪ್ರಜ್ಞಾ(Rishi Nityapragya) ಅವರು ಡಿಸೆಂಬರ್​ 27ರಂದು ಕೊವಿಡ್​ 19 ಸೋಂಕಿ(Covid 19 Virus)ನಿಂದ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಆರ್ಟ್​ ಆಫ್​ ಲಿವಿಂಗ್ ಒಂದು ಅಧ್ಯಾತ್ಮ ಬಿತ್ತರ ಸಂಸ್ಥೆಯಾಗಿದ್ದು, ರಿಷಿ ನಿತ್ಯಪ್ರಜ್ಞಾ ಅವರು ಇಲ್ಲಿಗೆ ಬರುವುದಕ್ಕೂ ಮೊದಲು ಕಾರ್ಪೋರೇಟ್​ ವೃತ್ತಿಯಲ್ಲಿದ್ದರು. ಅಲ್ಲದೆ, ಆರ್ಟ್ ಆಫ್​ ಲಿವಿಂಗ್ ಸಂಸ್ಥಾಪಕರಾದ ರವಿ ಶಂಕರ ಗುರೂಜಿಯವರ ಆಪ್ತರಾಗಿದ್ದರು. ಡಿಸೆಂಬರ್​ 13ರಿಂದಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ. ಕೊವಿಡ್ 19ನಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ತಮ್ಮನ್ನು ಡಿಸ್​ಚಾರ್ಜ್​ ಮಾಡುವಂತೆ ಕೇಳಿಕೊಂಡು ಮನೆಗೆ ಬಂದಿದ್ದರು. ಆದರೆ ಸೋಮವಾರ ಬೆಳಗ್ಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.  ಅದೇ ದಿನ ನಿಧನರಾಗಿದ್ದಾರೆ.

ರಿಷಿ ನಿತ್ಯಪ್ರಜ್ಞಾರ ನಿಧನದ ಬಗ್ಗೆ ಆರ್ಟ್​ ಆಫ್​ ಲಿವಿಂಗ್ ಪ್ರಕಟಣೆ ಹೊರಡಿಸಿದೆ. ರಿಷಿ ನಿತ್ಯಪ್ರಜ್ಞಾ ಅವರು ದಶಕಗಳ ಕಾಲ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿದ್ದಾರೆ. ಭಕ್ತಿಪೂರ್ವಕ, ಭಾವಪೂರ್ಣ ಸತ್ಸಂಗಗಳ ಮೂಲಕ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಉತ್ಸಾಹ ಮತ್ತು ವರ್ಚಸ್ಸಿಗೆ ಸರಿಸಾಟಿಯಲ್ಲ. ಅವರು ನಮ್ಮ ಹೃದಯದಲ್ಲಿ ಸದಾ ಸ್ಮರಣೀಯರು ಎಂದು ಹೇಳಿದೆ. ಹಾಗೇ ಟ್ವೀಟ್​ ಮಾಡಿರುವ ಪ್ರತಿಷ್ಠಾನ ಅವರ ಫೋಟೋ ಶೇರ್​ ಮಾಡಿಕೊಂಡು,  ಅವರೊಬ್ಬ ಉತ್ಸಾಹಿ ನಾಯಕರಾಗಿದ್ದು, ಅನೇಕರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದೆ.

ಕೆಮಿಕಲ್ ಇಂಜಿನಿಯರ್ ಆಗಿದ್ದರು
ಆರ್ಟ್​ ಆಫ್​ ಲಿವಿಂಗ್ ಸೇರುವುದಕ್ಕೂ ಮೊದಲು ರಿಷಿ ನಿತ್ಯಪ್ರಜ್ಞಾ ಕಾರ್ಪೋರೇಟ್ ಕಂಪನಿಯಲ್ಲಿ ಕೆಮಿಕಲ್​ ಇಂಜಿನಿಯರ್ ಆಗಿದ್ದರು. ಸಾಫ್ಟ್​ವೇರ್​ ಡೆವಲೆಪ್​ಮೆಂಟ್​ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದರು. ವೃತ್ತಿಪರ ಗಾಯಕರಾಗಿದ್ದರು ಅಷ್ಟೇ ಅಲ್ಲ, ಬೈಕ್​ ರೇಸ್​ನಲ್ಲಿ ಅತ್ಯುತ್ಸಾಹ ಹೊಂದಿದವರಾಗಿದ್ದರು. ಆರ್ಟ್​ ಆಫ್​ ಲಿವಿಂಗ್ ಸೇರಿ, ಇಲ್ಲಿ ಕಾರ್ಯಕ್ರಮ ನಿರ್ದೇಶಕರಾದ ಬಳಿಕ ಹಲವು ಶಿಕ್ಷಕರಿಗೆ, ಸ್ವಯಂ ಸೇವಕರಿಗೆ ತರಬೇತಿ ನೀಡಿದ್ದಾರೆ. ಅನುಯಾಯಿಗಳಿಂದ ಆಧ್ಯಾತ್ಮಿಕ ವಿಜ್ಞಾನಿ ಎಂದೇ ಕರೆಸಿಕೊಳ್ಳುತ್ತಿದ್ದ ರಿಷಿ ನಿತ್ಯಪ್ರಜ್ಞಾ, ಸದಾ ಮನುಕುಲದ ಸೇವೆಯ ಆಕಾಂಕ್ಷಿಯಾಗಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ವಿಜ್ಞಾನದ ಬಗ್ಗೆ ಅಪಾರ ಒಲವು ಹೊಂದಿದ್ದರು. ಆರ್ಟ್​ ಆಫ್​ ಲಿವಿಂಗ್​ ನಲ್ಲಿ ಸ್ವಯಂಸೇವಕರಿಗಾಗಿ ಪಠ್ಯಕ್ರಮ ರಚಿಸುವ ಜವಾಬ್ದಾರಿ ಹೊತ್ತಿದ್ದರು. ಹಾಗೇ, ಅವರ ಆಲೋಚನೆಗಳನ್ನೆಲ್ಲ ಒಟ್ಟಾಗಿ  ‘ಸ್ವಾಧ್ಯಾಯ – ಸ್ವಯಂ ಅನ್ವೇಷಣೆ’ ಎಂದು ಕರೆಯಲಾಗುತ್ತದೆ. ಪ್ರಕೃತಿ ಪ್ರತಿಯೊಬ್ಬ ವ್ಯಕ್ತಿಗೂ ಅಪರಿಮಿತ ಶಕ್ತಿಯನ್ನು ನೀಡಿದೆ ಎಂಬುದು ರಿಷಿಯವರ ಜೀವನದ ತತ್ವವಾಗಿತ್ತು ಎಂದು ಹೇಳಲಾಗಿದೆ.

ಸರಳ, ವಿನಯತೆಯುಳ್ಳ ವ್ಯಕ್ತಿತ್ವದವರಾಗಿದ್ದ ರಿಷಿ ನಿತ್ಯಪ್ರಜ್ಞಾ, ಒಬ್ಬರು ಶಿಕ್ಷಕರಾಗಿದ್ದರು, ಮಾರ್ಗದರ್ಶಕ, ಅಧ್ಯಾತ್ಮ ಮಾರ್ಗದರ್ಶಕ, ಸಂಶೋಧನಾ ವಿಜ್ಞಾನಿ, ಲೇಖಕ, ಗಾಯಕರಾಗಿದ್ದರು. ಅಪಾರ ಜ್ಞಾನಿಗಳೂ ಹೌದು. ಇಷ್ಟಾಗ್ಯೂ ಕೂಡ ತಮ್ಮನ್ನು ತಾವು, ನಾನು ಈ ಜೀವನ ಕಲಿಸುವ ಪಾಠಗಳನ್ನು ಕಲಿಯುವ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಿದ್ದರು.  ರಿಷಿ ನಿತ್ಯಪ್ರಜ್ಞಾ ನಿಧನಕ್ಕೆ ಅಪಾರ ಗಣ್ಯರು ಕಂಬನಿ ಮಿಡಿದಿದ್ದಾರೆ. ಕೇಂದ್ರ ಮಾಜಿ ಸಚಿವ ಸುರೇಶ್​ ಪ್ರಭು, ಲೇಖಕ ಅಮೀಶ್​ ತ್ರಿಪಾಠಿ ಸೇರಿ ಅನೇಕರು ಸೋಷಿಯಲ್ ಮಿಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Video: ಅಫ್ಘಾನ್​ ಮಾಜಿ ಸೇನಾ ಅಧಿಕಾರಿಗೆ ತಾಲಿಬಾನಿಗಳಿಂದ ಥಳಿತ; ಕೂದಲು ಹಿಡಿದು, ಕೆನ್ನೆಗೆ ಹೊಡೆದ ದೃಶ್ಯ ನೋಡಿ ನೆಟ್ಟಿಗರ ಆಕ್ರೋಶ