ಮಾಜಿ ಸಿಎಂ ಜಯಲಲಿತಾ ವಿಶ್ವವಿದ್ಯಾಲಯದ ಹೆಸರು ಬದಲಾವಣೆ ವಿವಾದ; ಎಐಎಡಿಎಂಕೆ ನಾಯಕರಿಂದ ಪ್ರತಿಭಟನೆ

| Updated By: Lakshmi Hegde

Updated on: Sep 01, 2021 | 11:24 AM

Tamil Nadu: ಜಯಲಲಿತಾ ಹೆಸರಿನಲ್ಲಿದ್ದ ವಿಶ್ವವಿದ್ಯಾಲಯವನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿಸುವ ಬಿಲ್​​ನ್ನು ಉನ್ನತ ಶಿಕ್ಷಣ ಸಚಿವ ಕೆ.ಪೊನ್ನುಮುಡಿ ಸದನದ ಎದುರಿಗೆ ಇಟ್ಟರು.

ಮಾಜಿ ಸಿಎಂ ಜಯಲಲಿತಾ ವಿಶ್ವವಿದ್ಯಾಲಯದ ಹೆಸರು ಬದಲಾವಣೆ ವಿವಾದ; ಎಐಎಡಿಎಂಕೆ ನಾಯಕರಿಂದ ಪ್ರತಿಭಟನೆ
ತಮಿಳುನಾಡು ಮಾಜಿ ಸಿಎಂ ಜಯಲಲಿತಾ
Follow us on

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ (Jayalalithaa) ಹೆಸರಿನಲ್ಲಿದ್ದ ವಿಶ್ವ ವಿದ್ಯಾಲಯ (University)ವನ್ನು ಅಣ್ಣಾಮಲೈ ಯೂನಿವರ್ಸಿಟಿಯೊಂದಿಗೆ ಸಂಯೋಜಿಸುವ ಸಂಬಂಧ ಮಂಗಳವಾರ ಡಿಎಂಕೆ ಸರ್ಕಾರ (DMK Government) ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕಾರ ಮಾಡಿದೆ. ಈ ಹೊತ್ತಲ್ಲಿ ಸಿಟ್ಟಿಗೆದ್ದ ವಿರೋಧ ಪಕ್ಷ ಎಐಎಡಿಎಂಕೆ (AIADMK Party) ಪ್ರತಿಭಟಿಸಿ, ಸದನದಿಂದ ಹೊರನಡೆಯಿತು. ಹೊರಗೆ ಬಂದ ಮೇಲೆ ಕೂಡ ಎಐಎಡಿಎಂಕೆ ಶಾಸಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸರ್ಕಾರ ರಾಜಕೀಯ ದ್ವೇಷದಿಂದ ಹೀಗೆ ವರ್ತಿಸುತ್ತಿದೆ ಎಂದೂ ಆರೋಪಿಸಿದರು.

ಜಯಲಲಿತಾ ಹೆಸರಿನಲ್ಲಿದ್ದ ವಿಶ್ವವಿದ್ಯಾಲಯವನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿಸುವ ಬಿಲ್​​ನ್ನು ಉನ್ನತ ಶಿಕ್ಷಣ ಸಚಿವ ಕೆ.ಪೊನ್ನುಮುಡಿ ಸದನದ ಎದುರಿಗೆ ಇಟ್ಟರು. ಆಗಲೇ ಪ್ರತಿಪಕ್ಷ ಎಐಎಡಿಎಂಕೆ ಉಪ ನಾಯಕ ಪನ್ನೀರಸೆಲ್ವಂ ಮತ್ತು ಕೆ.ಪಿ.ಅನ್ಬಳಗನ್ ಇದನ್ನು ವಿರೋಧಿಸಿದರು. ಇದಕ್ಕೆ ತಮ್ಮ ಒಪ್ಪಿಗೆಯೇ ಇಲ್ಲವೆಂದು ಪಕ್ಷದ ನಾಯಕರೆಲ್ಲ ಹೊರಗೆ ನಡೆದರು. ಎಐಎಡಿಎಂಕೆ ಮೈತ್ರಿ ಪಕ್ಷ ಬಿಜೆಪಿ ಕೂಡ ಇದೇ ಮಾರ್ಗವನ್ನು ಅನುಸರಿಸಿತು. ಸದನದಿಂದ ಹೊರಬಂದ ಎಐಎಡಿಎಂಕೆ ಶಾಸಕರು, ನಾಯಕರು ಪನ್ನೀರಸೆಲ್ವಂ ನೇತೃತ್ವದಲ್ಲಿ, ವಿಧಾನಸಭೆ ಕಲಾಪ ನಡೆಯುತ್ತಿರುವ ಕಲೈವನಾರ್ ರಂಗದ ಎದುರು ವಲ್ಲಜಾ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಕೂಡ ಪಡೆದರು.

ಜಯಲಲಿತಾ ಹೆಸರಿನ ಯೂನಿವರ್ಸಿಟಿಯನ್ನು ವಿಲೀನಗೊಳಿಸುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪನ್ನೀರಸೆಲ್ವಂ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಮಾಜಿ ಸಿಎಂ ಜಯಲಲಿತಾ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಡುವಾಗ ನಮ್ಮ ಎಐಎಡಿಎಂಕೆ ಸರ್ಕಾರ ರಾಜ್ಯಪಾಲರಿಂದ ಅನುಮತಿಯನ್ನು ಪಡೆದಿತ್ತು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಡಿಎಂಕೆ ಸರ್ಕಾರ ರಾಜಕೀಯ ದ್ವೇಷದಿಂದ ಇಂಥದ್ದೊಂದು ಬಿಲ್ ಮಂಡಿಸಿದೆ. ಅದು ಅಂಗೀಕಾರ ಆಗುವುದಕ್ಕೂ ಮೊದಲೇ ನಾವು ಪ್ರತಿಭಟನೆ ಶುರು ಮಾಡಿದ್ದೇವೆ. ಆದರೆ ಸ್ಪೀಕರ್​  ನಮಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಅಮ್ಮಾ (ಜಯಲಲಿತಾ) ವಿದ್ಯಾರ್ಥಿಗಳ ಏಳ್ಗೆಗಾಗಿ ಅನೇಕ ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದ್ದಾರೆ. ತಮ್ಮ ಅವಧಿಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗಳನ್ನೊಳಗೊಂಡು ಸುಮಾರು 60 ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಹಾಗಾಗಿ ಯೂನಿವರ್ಸಿಟಿ ಅವರ ಹೆಸರಿನಲ್ಲಿಯೇ ಇರುವುದು ಸೂಕ್ತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೌಹಾರ್ದ ರಾಜಕಾರಣಕ್ಕೆ ತಮಿಳುನಾಡು ಮೇಲ್ಪಂಕ್ತಿ:  ಶಾಲಾ ಬ್ಯಾಗ್​ಗಳ ಮೇಲೆ ಜಯಲಲಿತಾ, ಪಳನಿಸ್ವಾಮಿ ಚಿತ್ರ ಉಳಿಸಿದ ಮುಖ್ಯಮಂತ್ರಿ ಸ್ಟಾಲಿನ್

ಗಣಿಗಾರಿಕೆಯಿಂದ ಬೇಸತ್ತು ದಯಾಮರಣಕ್ಕೆ ರೈತರ ಮನವಿ; ನಂದಿ ಬೆಟ್ಟದಲ್ಲಿ ಭೂಕುಸಿತಕ್ಕೂ ಗಣಿಗಾರಿಕೆಗೂ ಇದೆಯಾ ನಂಟು?