AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವೋಟ್ ಚೋರಿ’ ಕೇವಲ ರಾಜಕೀಯ ಟೂಲ್‌ಕಿಟ್: ಫಾರಂ-6, ಎಸ್‌ಐಆರ್ ಮತ್ತು ಇವಿಎಂ ಮೇಲಿನ ಸುಳ್ಳುಗಳಿಗೆ ಆಯೋಗದ ಅಂಕಿ-ಅಂಶಗಳ ಉತ್ತರ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಮತ್ತು 'ವೋಟ್ ಚೋರಿ' ಆರೋಪಗಳನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದೆ. 13 ಕೋಟಿ ಮತಗಳ ರದ್ದತಿ, ಫಾರಂ 6 ಬದಲಾವಣೆ, EVM ವಿಶ್ವಾಸಾರ್ಹತೆ ಕುರಿತು ಹರಡಿದ ಸುಳ್ಳುಗಳನ್ನು ಸತ್ಯಾಂಶಗಳೊಂದಿಗೆ ಆಯೋಗ ವಿವರಣೆ ನೀಡಿದೆ. ಹೊಸ ಮತದಾರರ ಸೇರ್ಪಡೆ, ಆಯೋಗದ ನಿರ್ಧಾರಗಳ ಪಾರದರ್ಶಕತೆ ಹಾಗೂ ಮತದಾರರ ಅನುಕೂಲಕ್ಕಾಗಿ ಕೈಗೊಂಡ ಕ್ರಮಗಳನ್ನು ಇದು ವಿವರಿಸುತ್ತದೆ.

'ವೋಟ್ ಚೋರಿ' ಕೇವಲ ರಾಜಕೀಯ ಟೂಲ್‌ಕಿಟ್: ಫಾರಂ-6, ಎಸ್‌ಐಆರ್ ಮತ್ತು ಇವಿಎಂ ಮೇಲಿನ ಸುಳ್ಳುಗಳಿಗೆ ಆಯೋಗದ ಅಂಕಿ-ಅಂಶಗಳ ಉತ್ತರ
ಚುನಾವಣಾ ಆಯೋಗ Image Credit source: PTI
ನಯನಾ ರಾಜೀವ್
|

Updated on: Oct 02, 2026 | 11:55 AM

Share

ನವದೆಹಲಿ, ಅಕ್ಟೋಬರ್ 02: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕುರಿತ ವಿವಾದ ಹಾಗೂ ಮತ ಕಳ್ಳತನದ ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದ್ದು, 13 ಕೋಟಿ ಮತಗಳ ರದ್ದತಿ ಸುಳ್ಳು ಎಂದು ಸತ್ಯಾಂಶಗಳ ಮೂಲಕ ವಿವರಣೆ ನೀಡಿದೆ. ಕೇಂದ್ರ ಚುನಾವಣಾ ಆಯೋಗವು  ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತಂತೆ ಹರಡಿರುವ ಗೊಂದಲಗಳು, ವಿವಾದಗಳು ಮತ್ತು ಅವುಗಳ ಹಿಂದಿನ  ಸತ್ಯಾಂಶಗಳನ್ನು ಒಳಗೊಂಡ ಪ್ರಮುಖ ಪ್ರಶ್ನೋತ್ತರಗಳು ಇಲ್ಲಿವೆ.

  • ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ದೇಶದ 13 ಕೋಟಿ ಜನರ ಮತಗಳನ್ನು ಅಳಿಸಿಹಾಕಲಾಗಿದೆಯೇ ಉತ್ತರ: ಇಲ್ಲ, ಇದು ಸಂಪೂರ್ಣ ತಪ್ಪು ಮಾಹಿತಿ.

ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತದಲ್ಲಿ ‘ಕರಡು ಮತದಾರರ ಪಟ್ಟಿ’ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ಸುಮಾರು 13 ಕೋಟಿ ಹೆಸರುಗಳನ್ನು ಪರಿಶೀಲನೆಗಾಗಿ ‘ASDD’ (ಮೃತಪಟ್ಟವರು, ಸ್ಥಳ ಬದಲಿಸಿದವರು, ಸಿಗದಿರುವವರು ಮತ್ತು ನಕಲಿ ಹೆಸರುಗಳು) ಎಂದು ಕೇವಲ ಗುರುತಿಸಲಾಗಿದೆಯೇ ಹೊರತು ಅಳಿಸಿಹಾಕಿಲ್ಲ. ಇದರಲ್ಲಿ 2.8 ಕೋಟಿ ಮೃತರು, 3 ಕೋಟಿ ಪತ್ತೆಯಾಗದವರು, 6.3 ಕೋಟಿ ಕಾಯಂ ಆಗಿ ಬೇರೆಡೆ ಹೋದವರು ಹಾಗೂ 1 ಕೋಟಿ ನಕಲಿ ದಾಖಲೆಗಳು ಸೇರಿವೆ.

ಈ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳ 20 ಲಕ್ಷ ಬೂತ್ ಮಟ್ಟದ ಏಜೆಂಟರಿಗೆ ನೀಡಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಮತದಾರರಿಗೆ ಸಂಪೂರ್ಣ ಅವಕಾಶವಿದೆ. ಕರಡು ಪಟ್ಟಿಯಲ್ಲಿ ಗುರುತು ಮಾಡುವುದು ಮತ್ತು ಅಂತಿಮವಾಗಿ ಹೆಸರನ್ನು ತೆಗೆದುಹಾಕುವುದು ಎರಡೂ ಬೇರೆ ಬೇರೆ ವಿಷಯಗಳಾಗಿವೆ.

  •  ಹೊಸ ಮತದಾರರ ನೋಂದಣಿಯ ‘ಫಾರಂ 6’ ಅರ್ಜಿಯನ್ನು ಅಕ್ರಮವಾಗಿ ಬದಲಾಯಿಸಲಾಗಿದೆಯೇ? ಉತ್ತರ: ಇಲ್ಲ, ಮೂಲ ಫಾರಂ 6 ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಮತದಾರರ ಅನುಕೂಲಕ್ಕಾಗಿ ಮತ್ತು ಪದೇ ಪದೇ ಒಟಿಪಿ (OTP) ಪಡೆಯುವ ತ್ರಾಸ ತಪ್ಪಿಸಲು, ಫಾರಂ 6 ರ ಜೊತೆಗೆ ಹೆಚ್ಚುವರಿ ‘ಘೋಷಣಾ ಪತ್ರ’ವನ್ನು  ಮಾತ್ರ ಜೋಡಿಸಲಾಗಿತ್ತು.

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರೂ ಆಯುಕ್ತರ ಸರ್ವಾನುಮತದ ಒಪ್ಪಿಗೆಯೊಂದಿಗೆ ಈ ಆದೇಶ ಹೊರಡಿಸಲಾಗಿತ್ತು.

ಸುಪ್ರೀಂ ಕೋರ್ಟ್ ಕೂಡ 2026ರ ಮೇ 27 ರಂದು ಈ ಆದೇಶದ ಸಿಂಧುತ್ವವನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.

  •  ಚುನಾವಣಾ ಆಯೋಗದ ‘ECINET’ ಸಾಫ್ಟ್‌ವೇರ್ ಮತ್ತು ಮತದಾರರ ಡೇಟಾಬೇಸ್ ಅನ್ನು ಕೇಂದ್ರೀಕೃತ ಮಾಡಲಾಗಿದೆಯೇ? ಉತ್ತರ: ಇಲ್ಲವೇ ಇಲ್ಲ.

ಮತದಾರರ ಪಟ್ಟಿಯ ಡೇಟಾಬೇಸ್ ಮೊದಲಿನಂತೆಯೇ ಈಗಲೂ ವಿಕೇಂದ್ರೀಕೃತವಾಗಿಯೇ ಇದೆ.

ಪ್ರತಿಯೊಂದು ರಾಜ್ಯದ ಮತದಾರರ ಪಟ್ಟಿಯನ್ನು ಆಯಾ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿಗಳೇ ನಿರ್ವಹಿಸುತ್ತಾರೆ.

ತಂತ್ರಜ್ಞಾನ ಡಿಜಿಟಲ್ ಆಗಿದೆಯೇ ಹೊರತು, ಅಧಿಕಾರಿಗಳ ಅಧಿಕಾರದಲ್ಲಾಗಲಿ ಅಥವಾ ವ್ಯವಸ್ಥೆಯ ಸ್ವರೂಪದಲ್ಲಾಗಲಿ ಯಾವುದೇ ಬದಲಾವಣೆಯಾಗಿಲ್ಲ.

  •  ಯುವಕರು ಹಾಗೂ ಹೊಸ ಮತದಾರರ ಹೆಸರು ಸೇರ್ಪಡೆಗೆ ಅಡ್ಡಿಯಾಗುತ್ತಿದೆಯೇ? ಉತ್ತರ: ಇಲ್ಲ, ಬದಲಿಗೆ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲಾಗಿದೆ.

18 ವರ್ಷ ತುಂಬಿದ ಅಥವಾ ತುಂಬಲಿರುವ ಯುವಕರು ವರ್ಷದ ನಾಲ್ಕು ದಿನಾಂಕಗಳ ಆಧಾರದಲ್ಲಿ (ಜನವರಿ 1, ಏಪ್ರಿಲ್ 1, ಜುಲೈ 1, ಅಕ್ಟೋಬರ್ 1) ಯಾವುದೇ ಸಮಯದಲ್ಲಿ ಫಾರಂ 6 ಸಲ್ಲಿಸಿ ಹೆಸರು ಸೇರಿಸಬಹುದು.

ಎಸ್‌ಐಆರ್ ಆರಂಭವಾದ ನಂತರ (24 ಜೂನ್ 2025 ರಿಂದ) ಬರೋಬ್ಬರಿ 2.37 ಕೋಟಿ ಹೊಸ ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ.

ಪ್ರತಿ ತಿಂಗಳು ಸುಮಾರು 16 ಲಕ್ಷ ಯುವಕರು (ದಿನಕ್ಕೆ 50 ಸಾವಿರಕ್ಕೂ ಹೆಚ್ಚು) ಮತದಾರರ ಪಟ್ಟಿಗೆ ಸೇರುತ್ತಿದ್ದಾರೆ.

  • ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು (CEC) ಇತರ ಇಬ್ಬರು ಆಯುಕ್ತರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆಯೇ? ಉತ್ತರ: ಇದು ಸಂಪೂರ್ಣ ಆಧಾರರಹಿತ ಮತ್ತು ದಾರಿತಪ್ಪಿಸುವ ಆರೋಪ.

ಚುನಾವಣಾ ಆಯೋಗವು ಮೂವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಸಂಸ್ಥೆಯಾಗಿದೆ.

ಎಸ್‌ಐಆರ್ ಸೇರಿದಂತೆ ಆಯೋಗ ತೆಗೆದುಕೊಂಡಿರುವ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಮೂವರೂ ಆಯುಕ್ತರು ಸರ್ವಾನುಮತದಿಂದಲೇ ಅಂಗೀಕರಿಸಿದ್ದಾರೆ.

ಕರಡು ಹಂತದಲ್ಲಿ ಆಯುಕ್ತರು ಪ್ರಶ್ನೆಗಳನ್ನು ಕೇಳುವುದು ಅಥವಾ ಸಲಹೆ ನೀಡುವುದು ಆಡಳಿತಾತ್ಮಕ ಚರ್ಚೆಯ ಭಾಗವೇ ಹೊರತು ಭಿನ್ನಾಭಿಪ್ರಾಯವಲ್ಲ.

  • ಎಸ್​ಐಆರ್ ಪ್ರಕ್ರಿಯೆಯು ‘ವೋಟ್ ಚೋರಿ’ (ಮತಗಳ ಕಳ್ಳತನ) ಮಾಡುವ ತಂತ್ರವೇ? ಉತ್ತರ: ‘ವೋಟ್ ಚೋರಿ’ ಎಂಬುದು ಕೇವಲ ರಾಜಕೀಯ ಟೂಲ್‌ಕಿಟ್ ಪದವಾಗಿದ್ದು, ಇದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ.

ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಅವರ ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳ 20 ಲಕ್ಷ ಬೂತ್ ಏಜೆಂಟರು ಈ ಪ್ರಕ್ರಿಯೆಯನ್ನು ನೇರವಾಗಿ ಪರಿಶೀಲಿಸುತ್ತಾರೆ.

ಮತದಾನದ ದಿನದಂದು ಶೇಕಡಾ 100 ರಷ್ಟು ವೆಬ್‌ಕಾಸ್ಟಿಂಗ್ ಇರುತ್ತದೆ ಮತ್ತು ಮತ ಎಣಿಕೆಯಲ್ಲೂ ಅಭ್ಯರ್ಥಿಗಳ ಪ್ರತಿನಿಧಿಗಳು ಹಾಜರಿರುತ್ತಾರೆ.

ಇಷ್ಟೊಂದು ಹಂತದ ಸಾರ್ವಜನಿಕ ಮತ್ತು ರಾಜಕೀಯ ಕಣ್ಗಾವಲು ಇರುವಾಗ ಮತ ಕಳ್ಳತನ ಮಾಡಲು ಸಾಧ್ಯವೇ ಇಲ್ಲ.

  •  ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಬೇಕೆಂದೇ ಕೈಬಿಡಲಾಗಿದೆಯೇ? ಉತ್ತರ: ಈ ಆರೋಪ ಸುಳ್ಳು.

2023 ರ ಹಿಂದಿನವರೆಗೆ ಚುನಾವಣಾ ಆಯುಕ್ತರ ನೇಮಕಾತಿಗೆ ಯಾವುದೇ ನಿರ್ದಿಷ್ಟ ಕಾನೂನು ಇರಲಿಲ್ಲ; ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ನೇಮಕ ಮಾಡುತ್ತಿದ್ದರು.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಂಸತ್ತು ಹೊಸ ಕಾಯ್ದೆಯನ್ನು ಜಾರಿಗೆ ತಂದಿತು.

ಪ್ರಸ್ತುತ ನಿಯಮದ ಪ್ರಕಾರ ಪ್ರಧಾನಿ, ಒಬ್ಬ ಕೇಂದ್ರ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ನೇಮಕ ಮಾಡುತ್ತದೆ. ವಿಪಕ್ಷ ನಾಯಕರಿಗೆ ಸ್ಥಾನ ನೀಡಿರುವುದರಿಂದ ಈ ವ್ಯವಸ್ಥೆ ಹಿಂದಿಗಿಂತ ಹೆಚ್ಚು ಪಾರದರ್ಶಕವಾಗಿದೆ.

  • ಎಸ್‌ಐಆರ್‌ನಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಕೃತಕ ಬುದ್ಧಿಮತ್ತೆ (AI) ಬಳಸಲಾಗುತ್ತಿದೆಯೇ? ಉತ್ತರ: ಇಲ್ಲ, ಮತದಾರರ ಪಟ್ಟಿ ತಯಾರಿಕೆಯಲ್ಲಿ ಯಾವುದೇ ರೀತಿಯ ಎಐ (AI) ಬಳಕೆ ಮಾಡುತ್ತಿಲ್ಲ.

ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಥವಾ ತೆಗೆದುಹಾಕುವ ಪ್ರತಿಯೊಂದು ನಿರ್ಧಾರವನ್ನು ಕಾನೂನುಬದ್ಧವಾಗಿ ಆಯಾ ಕ್ಷೇತ್ರದ ಇಆರ್‌ಒ (ERO) ಮಾತ್ರ ಕೈಗೊಳ್ಳುತ್ತಾರೆ.

ನೋಟಿಸ್ ನೀಡುವುದು, ವಿಚಾರಣೆ ನಡೆಸುವುದು ಎಲ್ಲವೂ ಕಾನೂನಿನ ಚೌಕಟ್ಟಿನಲ್ಲೇ ಮಾನವ ಹಸ್ತಕ್ಷೇಪದ ಮೂಲಕ ನಡೆಯುತ್ತದೆ.

  • ಇವಿಎಂ (EVM) ಮತಯಂತ್ರಗಳು ನಂಬಿಕೆಗೆ ಅರ್ಹವೇ? ಉತ್ತರ: ಹೌದು, ಇವಿಎಂಗಳು ಸಂಪೂರ್ಣ ಸುರಕ್ಷಿತ ಮತ್ತು ವಿಶ್ವಾಸಾರ್ಹ

ಇವಿಎಂಗಳು ಯಾವುದೇ ನೆಟ್‌ವರ್ಕ್ ಅಥವಾ ಇಂಟರ್ನೆಟ್‌ಗೆ ಸಂಪರ್ಕವಿಲ್ಲದ ಸ್ವತಂತ್ರ ಯಂತ್ರಗಳಾಗಿವೆ.

ರಾಜಕೀಯ ಪಕ್ಷಗಳ ಸಮ್ಮುಖದಲ್ಲೇ ಮೊದಲ ಹಂತದ ತಪಾಸಣೆ (FLC), ಯಂತ್ರಗಳ ರ‍್ಯಾಂಡಮೈಸೇಶನ್ ಮತ್ತು ಅಣಕು ಮತದಾನ ನಡೆಯುತ್ತದೆ.

ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಇವಿಎಂ ಜೊತೆ ತಾಳೆ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್ ಕೂಡ ಹಲವು ಬಾರಿ ಇವಿಎಂಗಳ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದಿದೆ.

  • ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಆಯೋಗ ತೆಗೆದುಕೊಂಡಿರುವ ಹೊಸ ಕ್ರಮಗಳೇನು? ಉತ್ತರ: ಮತದಾರರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಆಯೋಗ ಹಲವು ಸುಧಾರಣೆಗಳನ್ನು ತಂದಿದೆ:

ಮನೆ ಬಾಗಿಲಿಗೆ ಬಿಎಲ್‌ಒ: ನೋಟಿಸ್ ಬಂದ ಮತದಾರರ ಮನೆಗೆ ಬಿಎಲ್‌ಒಗಳೇ ತೆರಳಿ ದಾಖಲೆಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಮತದಾರರು ಅಧಿಕಾರಿಗಳ ಕಚೇರಿಗೆ ಹೋಗುವ ಅಗತ್ಯವಿಲ್ಲ.

ಕಾಲಾವಕಾಶ ವಿಸ್ತರಣೆ: ದೆಹಲಿ (ಅಕ್ಟೋಬರ್ 30 ರವರೆಗೆ) ಮತ್ತು ಮಹಾರಾಷ್ಟ್ರದಲ್ಲಿ (ಅಕ್ಟೋಬರ್ 12 ರವರೆಗೆ) ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ನಿರಾಶ್ರಿತರಿಗೆ ವಿಶೇಷ ಶಿಬಿರ: ಕೂಲಿ ಕಾರ್ಮಿಕರು, ಬಡವರು ಮತ್ತು ನಿರಾಶ್ರಿತರ ಹೆಸರುಗಳು ಪಟ್ಟಿಯಿಂದ ಬಿಟ್ಟುಹೋಗದಂತೆ ವಿಶೇಷ ಶಿಬಿರ ಹಾಗೂ ಹೆಲ್ಪ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More