ನವದೆಹಲಿ, ಅಕ್ಟೋಬರ್ 26: ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ, ಮಾದರಿ ನೀತಿ ಸಂಹಿತೆ (Model Code of Conduct) ಉಲ್ಲಂಘಿಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರಿಗೆ ಭಾರತೀಯ ಚುನಾವಣಾ ಆಯೋಗ (ECI) ಗುರುವಾರ ಶೋಕಾಸ್ ನೋಟಿಸ್ ನೀಡಿದೆ. ಪ್ರಿಯಾಂಕಾ ಗಾಂಧಿ, ವೃಥಾ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಬುಧವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ರಾಜಸ್ಥಾನದ ದೌಸಾದಲ್ಲಿ ಭಾಷಣ ಮಾಡುವಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಪ್ರಿಯಾಂಕಾ ಗಾಂಧಿ ಮೇಲಿದೆ. ಅಕ್ಟೋಬರ್ 30ರ ಸಂಜೆ 5 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಆಯೋಗ ಸೂಚಿಸಿದೆ.
ಅಕ್ಟೋಬರ್ 20 ರಂದು ದೌಸಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೃಢೀಕೃತವಲ್ಲದ ಆರೋಪಗಳನ್ನು ಮಾಡಿದ್ದರು. ಮೋದಿ ಅವರು ದೇವಸ್ಥಾನದಲ್ಲಿ ನೀಡಿದ ದೇಣಿಗೆಯ ಲಕೋಟೆಯನ್ನು ತೆರೆದಾಗ ಅದರಲ್ಲಿ ಕೇವಲ 21 ರೂಪಾಯಿ ಇದ್ದುದು ಟಿವಿಯಲ್ಲಿ ನೋಡಿದೆ ಎಂದು ಪ್ರಿಯಾಂಕಾ ಹೇಳಿದ್ದರು.
ನಾನು ಇತ್ತೀಚೆಗೆ ಟಿವಿಯಲ್ಲಿ ವಿಡಿಯೋ ಒಂದನ್ನು ನೋಡಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ದೇವನಾರಾಯಣ ದೇವಸ್ಥಾನಕ್ಕೆ ತೆರಳಿದ್ದ ಪ್ರಧಾನಿ ಮೋದಿ ಕಾಣಿಕೆ ಪೆಟ್ಟಿಗೆಯಲ್ಲಿ ದೇಣಿಗೆ ಲಕೋಟೆಯನ್ನು ಹಾಕಿದ್ದರು. ಅದರಲ್ಲಿ ಏನಿರಬಹುದು ಎಂದು ಜನರು ಆಶ್ಚರ್ಯ ಪಟ್ಟಿದ್ದರು, ಆದರೆ ಅದನ್ನು ತೆರೆದಾಗ 21 ರೂಪಾಯಿ ಇತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.
ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ, ಪ್ರಿಯಾಂಕಾ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಪ್ರಶ್ನಿಸಿದ್ದಾರೆ ಎಂದು ಆರೋಪಿಸಿತ್ತು. ಜತೆಗೆ, ಪ್ರಿಯಾಂಕಾ ಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.
ಇದನ್ನೂ ಓದಿ: ನಮ್ಮ ಸರ್ಕಾರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರ ಅನುಸರಿಸುತ್ತದೆ: ಶಿರಡಿಯಲ್ಲಿ ಮೋದಿ
‘ಮಾದರಿ ನೀತಿ ಸಂಹಿತೆ ಮತ್ತು ಆರ್‌ಪಿ ಕಾಯ್ದೆಯನ್ನು ಉಲ್ಲಂಘಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಕ್ಟೋಬರ್ 20 ರಂದು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ನಾವು ಚುನಾವಣಾ ಆಯೋಗದ ಸದಸ್ಯರನ್ನು ಭೇಟಿ ಮಾಡಿದ್ದೇವೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾದರಿ ನೀತಿ ಸಂಹಿತೆಗಿಂತ ಮೇಲಿದ್ದಾರೆಯೇ ಎಂದು ನಾವು ಚುನಾವಣಾ ಆಯೋಗವನ್ನು ಕೇಳಲು ಬಯಸುತ್ತೇವೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ’ ಎಂದು ಕಾನೂನು ಸಚಿವ ಅರ್ಜುನ್ ಮೇಘವಾಲ್ ಹೇಳಿದ್ದರು.
Election Commission of India issues show-cause notice to Congress leader Priyanka Gandhi Vadra for allegedly violating Model Code of Conduct guidelines during the election campaign in Rajasthan. BJP had submitted a complaint to the EC yesterday saying she made false, unverified… pic.twitter.com/zNaBXiODnN
— ANI (@ANI) October 26, 2023
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಇತರ ನಾಯಕರ ಸಾರ್ವಜನಿಕ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿಲ್ಲದ ಖಾಸಗಿ ಜೀವನದ ಎಲ್ಲಾ ಅಂಶಗಳನ್ನು ಟೀಕೆಗಳಿಂದ ದೂರವಿಡಬೇಕು ಎಂದು ಪ್ರಿಯಾಂಕಾ ಅವರಿಗೆ ನೀಡಿದ ನೋಟಿಸ್ನಲ್ಲಿ ಚುನಾವಣಾ ಆಯೋಗ ಚುನಾವಣಾ ನೀತಿ ಸಂಹಿತೆಯಲ್ಲಿನ ನಿಬಂಧನೆಯನ್ನು ಉಲ್ಲೇಖಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ