ಇನ್ನುಮುಂದೆ ಭಾರತ, ಈಜಿಪ್ಟ್ಗೆ ಗೋಧಿಯನ್ನು ರಫ್ತು ಮಾಡಲಿದೆ. ಭಾರತದ ಗೋಧಿ ಆಮದು ಮಾಡಿಕೊಳ್ಳಲು ಈಜಿಪ್ಟ್ ಸರ್ಕಾರ ಅನುಮೋದನೆ ನೀಡಿದ್ದು, ಇತ್ತ ಭಾರತ ಸರ್ಕಾರವೂ ಕೂಡ ರಫ್ತಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಾಗಿದ್ದು, ಬರೀ ಈಜಿಪ್ಟ್ ಅಷ್ಟೇ ಅಲ್ಲ, ನೈಜೀರಿಯಾ, ಟರ್ಕಿ, ಅಫ್ಘಾನಿಸ್ತಾನ, ವಿಯೆಟ್ನಾಂ ಮತ್ತಿತರ ದೇಶಗಳಿಗೂ ಇಲ್ಲಿಂದ ಗೋಧಿ ಪೂರೈಕೆ ಆಗಲಿದೆ. ಇಡೀ ವಿಶ್ವ ಸದ್ಯ ಕೊರೊನಾ ಸಾಂಕ್ರಾಮಿಕ ಮತ್ತು ಆಹಾರ ಕೊರತೆ ಸಮಸ್ಯೆಯ ವಿರುದ್ಧ ಹೋರಾಡುತ್ತಿದೆ. ಕೊರೊನಾ ವೈರಸ್ ಲಸಿಕೆಯನ್ನು ಈಗಾಗಲೇ ಜಗತ್ತಿನ ಹಲವು ದೇಶಗಳಿಗೆ ಪೂರೈಕೆ ಮಾಡುತ್ತಿರುವ ಭಾರತ ಇದೀಗ ಆಹಾರಧಾನ್ಯ ರಫ್ತು ಮಾಡಲು ಮುಂದಾಗಿದ್ದು ಹೆಗ್ಗಳಿಕೆ.
ಪಿಯೂಶ್ ಗೋಯೆಲ್ ಟ್ವೀಟ್
ಈಜಿಪ್ಟ್ಗೆ ಇನ್ನು ಭಾರತ ಗೋಧಿಯನ್ನು ರಫ್ತು ಮಾಡಲಿದೆ ಎಂಬುದನ್ನು ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿ ದೃಢಪಡಿಸಿದ್ದಾರೆ. ನಮ್ಮ ರೈತರು ಇಡೀ ಜಗತ್ತಿಗೆ ಆಹಾರ ಪೂರೈಸುತ್ತಿದ್ದಾರೆ. ಭಾರತದಿಂದ ಗೋಧಿ ಆಮದು ಮಾಡಿಕೊಳ್ಳಲು ಈಜಿಪ್ಟ್ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇಡೀ ವಿಶ್ವ ಪರ್ಯಾಯವಾದ, ಸ್ಥಿರವಾದ ಆಹಾರ ಪೂರೈಕೆ ಮಾರ್ಗವನ್ನು ಹುಡುಕುತ್ತಿದ್ದು, ಅದಕ್ಕೆ ಪೂರಕವಾಗಿ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ
ಭಾರತವು ಜಾಗತಿಕ ಮಟ್ಟದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತಿದೆ. ಆದರೆ ದಿಗ್ಗಜ ರಾಷ್ಟ್ರ ಎನ್ನಿಸಿಕೊಂಡಿದ್ದ ಅಮೆರಿಕ ಪ್ರತಿ ವಿಚಾರದಲ್ಲೂ ವಿಫಲವಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧ, ಲಸಿಕೆಯ ಕೊರತೆ, ಆಹಾರ ಕೊರತೆ ಸಮಸ್ಯೆ ಸೇರಿದಂತೆ ಇನ್ಯಾವುದೇ ಸಮಸ್ಯೆಗಳು ಇರಲಿ, ಅವುಗಳ ಪರಿಹಾರಕ್ಕೆ ಮುಂಚೂಣಿಯಲ್ಲಿ ನಿಂತಿರುವುದು ಭಾರತವೇ ಹೊರತು ಅಮೆರಿಕ ಅಲ್ಲ. ಇಡೀ ಜಗತ್ತು ಕೊರೊನಾ ಲಸಿಕೆಯ ಕೊರತೆಯಿಂದ ಬಳಲುತ್ತಿದ್ದಾಗ ಜಗತ್ತಿನ ಅನೇಕ ಬಡ ದೇಶಗಳಿಗೆ ಭಾರತವು ಕೊರೊನಾ ಲಸಿಕೆಯನ್ನು ಪೂರೈಸಿದೆ. ಈಗ ಜಗತ್ತಿನ ಅನೇಕ ದೇಶಗಳು ಆಹಾರದ ಕೊರತೆಯಿಂದ ಬಳಲುತ್ತಿವೆ. ಹೀಗಾಗಿ ಈಗ ಗೋಧಿಯನ್ನು ಅನೇಕ ದೇಶಗಳಿಗೆ ಭಾರತ ಪೂರೈಸುತ್ತಿದೆ.
ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲಾಗದೇ, ಸೋಲೋಪ್ಪಿಕೊಂಡಿರುವ ಅಮೆರಿಕಾ, ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಸಿದೆ. ಚೀನಾ ದೇಶ ಇಡೀ ಜಗತ್ತಿಗೆ ಕೊರೊನಾ ವೈರಸ್ ಅನ್ನು ತನ್ನ ಕೊಡುಗೆಯಾಗಿ ನೀಡಿದೆ. ಭಾರತವು ಜಗತ್ತಿನಲ್ಲಿ ಫಾರ್ಮಾ ಜಗತ್ತಿನ ನಾಯಕನಾಗಿ ಕೊರೊನಾ ಲಸಿಕೆಯನ್ನು ಉತ್ಪಾದಿಸಿ ಜಗತ್ತಿಗೆ ನೀಡಿದೆ. ಚೀನಾ ದೇಶವು ಬಡ ದೇಶಗಳಿಗೆ ಹಣವನ್ನು ಸಾಲವಾಗಿ ನೀಡಿ ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡಿದೆ. ಚೀನಾದ ಸಾಲದ ಸುಳಿಗೆ ಸಿಲುಕಿ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದೆ. ಪಾಕಿಸ್ತಾನವು ಚೀನಾ ಸಾಲದಿಂದ ಆರ್ಥಿಕವಾಗಿ ದಿವಾಳಿಯಾಗುವ ಸ್ಥಿತಿಯಲ್ಲಿದೆ. ನೇಪಾಳದ ಸ್ಥಿತಿಯೂ ಭಿನ್ನವಾಗಿಯೇನೂ ಇಲ್ಲ. ಆಮೆರಿಕಾ ವಿವಿಧ ದೇಶಗಳ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಆದರೇ, ಭಾರತ ನಿಜವಾಗಿಯೂ ಅನೇಕ ದೇಶಗಳ ಸಮಸ್ಯೆಗೆ ಪರಿಹಾರಗಳನ್ನು ನೀಡಿದೆ. ಈ ಮೂಲಕ ಭಾರತವು ತಾನೊಬ್ಬ ಜಾಗತಿಕ ನಾಯಕನಾಗಲು ಅರ್ಹ ರಾಷ್ಟ್ರ ಎಂಬುದನ್ನು ತನ್ನ ಕೆಲಸದ ಮೂಲಕ ಸಾಬೀತುಪಡಿಸಿದೆ.
ಆಹಾರದ ಕೊರತೆ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಜನರು ಎಂದಿಗಿಂತಲೂ ಹೆಚ್ಚು ಚಿಂತಿತರಾಗಿರುವ ಜಗತ್ತಿನಲ್ಲಿ, ಭಾರತದ ಗೋದಾಮುಗಳು ಧಾನ್ಯದಿಂದ ತುಂಬಿವೆ. ದೇಶದ ರೈತರು ಮತ್ತೊಂದು ದಾಖಲೆಯ ಸುಗ್ಗಿಗೆ ಸಜ್ಜಾಗುತ್ತಿದ್ದಾರೆ. ಭಾರತದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯ ಕಟಾವು ಮಾಡುತ್ತಿದ್ದಾರೆ. ಚೀನಾದ ನಂತರ ಭಾರತವು ಗೋಧಿಯ ಅಗ್ರ ಜಾಗತಿಕ ಉತ್ಪಾದಕ ರಾಷ್ಟ್ರವಾಗಿದೆ. 2022-23 ನೇ ವರ್ಷದಲ್ಲಿ ವಿಶ್ವ ಮಾರುಕಟ್ಟೆಗೆ 12 ಮಿಲಿಯನ್ ಟನ್ಗಳಷ್ಟು ಗೋಧಿ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಅತ್ಯಂತ ಉತ್ತಮ ದಾಖಲೆಯಾಗಿದೆ. 2021-22ರಲ್ಲಿ 8.5 ಮಿಲಿಯನ್ ಟನ್ ಗೋಧಿಯನ್ನು ಭಾರತವು ರಫ್ತು ಮಾಡಿದ ದಾಖಲೆಯೂ ಇದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಮೊದಲು ಕೃಷಿ ಸರಕುಗಳ ಬೆಲೆಗಳು ಗಗನಕ್ಕೇರಿದ್ದವು. ಏಕೆಂದರೆ ಬರದಿಂದ ಜಾಗತಿಕ ಕೊಯ್ಲುಗಳನ್ನು ಕಡಿಮೆಗೊಳಿಸಿತು. ಬೇಡಿಕೆಯು ಹೆಚ್ಚಾಯಿತು. ಇದು ವಿಶ್ವ ಆಹಾರ ವೆಚ್ಚವನ್ನು ದಾಖಲೆಯ ಮಟ್ಟಕ್ಕೇರುವಂತೆ ಮಾಡಿತ್ತು. ಯುದ್ಧವು ಜಾಗತಿಕ ಆಹಾರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಏಕೆಂದರೆ ಯುದ್ದವು ಹೆಚ್ಚು ಉತ್ಪಾದಿಸುವ ಪ್ರದೇಶಗಳಿಂದ ಆಹಾರ ಸಾಗಣೆಯನ್ನು ಸ್ಥಗಿತಗೊಳಿಸಿದೆ. ಉಕ್ರೇನ್, ರಷ್ಯಾದಿಂದ ಗೋಧಿ ಸಾಗಣೆ ಸ್ಥಗಿತವಾಗಿದೆ. ಉಕ್ರೇನ್ ದೇಶ ಕೂಡ ಗೋಧಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ದೇಶ. ವಿಶ್ವದ ಗೋಧಿ ಪೂರೈಕೆಯ ಕಾಲು ಭಾಗಕ್ಕಿಂತ ಹೆಚ್ಚಿನ ಪ್ರಮಾಣದ ಗೋಧಿ ಸಾಗಣೆಯು ಸ್ಥಗಿತವಾಗಿದೆ.
“ಭಾರತೀಯ ಗೋಧಿ ರಫ್ತುಗಳು ಕಠಿಣವಾದ ವಿಶ್ವ ಪೂರೈಕೆ ಪರಿಸ್ಥಿತಿಯಲ್ಲಿ ಮಾರುಕಟ್ಟೆಗೆ ಸಹಾಯ ಮಾಡುತ್ತವೆ” ಎಂದು ಸಿಂಗಾಪುರ ಮೂಲದ ಅಗ್ರೋಕಾರ್ಪ್ ಇಂಟರ್ನ್ಯಾಷನಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಜಯ್ ಅಯ್ಯಂಗಾರ್ ಹೇಳಿದರು. ಭಾರತವು ವಾರ್ಷಿಕವಾಗಿ ಸುಮಾರು 12 ಮಿಲಿಯನ್ ಟನ್ ಧಾನ್ಯವನ್ನು ವ್ಯಾಪಾರ ಮಾಡುತ್ತದೆ. “ಇದು ಜಾಗತಿಕ ಬೆಲೆಗಳ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಭಾರತವು ದೊಡ್ಡ ಪ್ರಮಾಣದಲ್ಲಿ ಗೋಧಿಯನ್ನು ರಫ್ತು ಮಾಡದಿದ್ದರೆ, ಬೆಲೆಗಳು ಬಹುಶಃ ಇನ್ನಷ್ಟು ಹೆಚ್ಚಾಗುತ್ತಿತ್ತು.
ಚಿಕಾಗೋದ ಬೆಂಚ್ ಮಾರ್ಕ್ ಪ್ರಕಾರ, ಗೋಧಿ ಬೆಲೆ ರಷ್ಯಾದ ಆಕ್ರಮಣದ ನಂತರ ಈ ತಿಂಗಳು ಒಂದು ಬುಶೆಲ್ಗೆ 13.635 ಡಾಲರ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತು, ದಾಳಿಯ ಹಿಂದಿನ ದಿನದ ಐದು ವರ್ಷಗಳಲ್ಲಿ ಸರಾಸರಿ ಸುಮಾರು 5.50 ಡಾಲರ್ ಗೆ ಹೋಲಿಸಿದರೆ ಇದು ಬಾರಿ ಅಧಿಕ. ಪ್ರಮುಖ ರಫ್ತು ಮಾಡುವ ದೇಶಗಳಿಂದ ಪೂರೈಕೆಯು ಕಷ್ಟವಾಗಿರುವುದರಿಂದ ಮತ್ತು ಧಾನ್ಯಗಳ ಬೆಲೆ ಏರಿಕೆಯು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತೀಯ ಗೋಧಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿಸಿದೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ದಾಖಲೆಯ ಪ್ರಮಾಣದ ಕೃಷಿ ಉತ್ಪಾದನೆಯಾಗಿದೆ. ಭಾರತವು ಹೆಚ್ಚುವರಿ ಕೃಷಿ ಉತ್ಪನ್ನವನ್ನು ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಉತ್ತರ ಆಫ್ರಿಕಾದಲ್ಲಿ ಆಮದು ಮಾಡಿಕೊಳ್ಳುವವರಿಗೆ ಭಾರತವೇ ಈಗ ಪ್ರಮುಖ ದೇಶವಾಗಿದೆ.
ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ
ಭಾರತವು ಹೆಚ್ಚಾಗಿ ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ಕೆಲವು ಮಧ್ಯಪ್ರಾಚ್ಯ ಮಾರುಕಟ್ಟೆಗಳಿಗೆ ಗೋಧಿಯನ್ನು ಸಾಗಿಸಲು ಒಲವು ತೋರಿದೆ, ರಫ್ತುದಾರರು ಈಗ ಆಫ್ರಿಕಾದಾದ್ಯಂತ ಮತ್ತು ಮಧ್ಯಪ್ರಾಚ್ಯ ಪ್ರದೇಶದ ಇತರ ಪ್ರದೇಶಗಳಲ್ಲಿ ಖರೀದಿದಾರರನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಪ್ರಾಯೋಗಿಕವಾಗಿ ಪ್ರತಿಯೊಂದು ಮಾರುಕಟ್ಟೆಯು ಈಗ ಭಾರತೀಯ ಗೋಧಿಯನ್ನು ಪರಿಗಣಿಸಬೇಕಾಗಿದೆ, ವಿಶೇಷವಾಗಿ ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತೀಯ ಗೋಧಿಯನ್ನು ಅಮದು ಮಾಡಿಕೊಳ್ಳಬೇಕಾಗಿದೆ ಎಂದು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಸರಕುಗಳ ವ್ಯಾಪಾರ ಮಾಡುತ್ತಿರುವ ವಿಜಯ್ ಅಯ್ಯಂಗಾರ್ ಹೇಳಿದರು. ಭಾರತದ ಗೋಧಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮಟ್ಟಗಿನ ಬೇಡಿಕೆಯನ್ನು ಹಿಂದೆಂದೂ ನಾವು ನೋಡಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ವಿಶ್ವದ ಅಗ್ರ ಖರೀದಿದಾರನಾಗಿರುವ ಈಜಿಪ್ಟ್ಗೆ ಗೋಧಿ ಸಾಗಣೆಯನ್ನು ಪ್ರಾರಂಭಿಸಲು ಭಾರತದ ಅಂತಿಮ ಮಾತುಕತೆಯು ಯಶಸ್ವಿಯಾಗಿದೆ. ಈಜಿಪ್ಟ್ ದೇಶವು ಭಾರತದಿಂದ ಗೋಧಿಯನ್ನು ಅಮದು ಮಾಡಿಕೊಳ್ಳಲಿದೆ ಎಂದು ಈಜಿಪ್ಟ್ ಇಂದು ಹೇಳಿದೆ. ಆದರೆ ಚೀನಾ, ಟರ್ಕಿ, ಬೋಸ್ನಿಯಾ, ಸುಡಾನ್, ನೈಜೀರಿಯಾ ಮತ್ತು ಇರಾನ್ ದೇಶಗಳೊಂದಿಗೆ ಚರ್ಚೆಗಳು ಪ್ರಗತಿಯಲ್ಲಿವೆ ಎಂದು ವಾಣಿಜ್ಯ ಸಚಿವಾಲಯ ಈ ತಿಂಗಳು ತಿಳಿಸಿದೆ. ಭಾರತದಿಂದ ಗೋಧಿ ರಫ್ತು ಈಗಾಗಲೇ ನಾಲ್ಕು ಪಟ್ಟು ಹೆಚ್ಚಾಗಿದ್ದು, ಜನವರಿಯಿಂದ 10 ತಿಂಗಳುಗಳಲ್ಲಿ ಸುಮಾರು 6 ಮಿಲಿಯನ್ ಟನ್ಗಳಷ್ಟು ಗೋಧಿ ರಫ್ತು ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳುತ್ತವೆ.
ಸಾಂಪ್ರದಾಯಿಕ ಕಪ್ಪು ಸಮುದ್ರದ ರಫ್ತುದಾರರಾದ ಉಕ್ರೇನ್ ಮತ್ತು ರಷ್ಯಾಕ್ಕಿಂತ ಮಧ್ಯಪ್ರಾಚ್ಯಕ್ಕೆ ಹಡಗಿನ ಮೂಲಕ ಸಾಗಾಟದ ಸಮಯವು ಹೆಚ್ಚು ಇರುತ್ತದೆ, ಆದರೆ ಆಮೆರಿಕಾದ ವಿದೇಶಿ ಕೃಷಿ ಸೇವೆಯ ಪ್ರಕಾರ ಭಾರತವು ಕಡಿಮೆ-ವೆಚ್ಚದ ಗೋಧಿ ಪೂರೈಕೆದಾರರಾಗಿ ಹೆಜ್ಜೆ ಹಾಕಲು ಉತ್ತಮ ಸ್ಥಾನದಲ್ಲಿದೆ. ಮಾರ್ಚ್ ಆರಂಭದಲ್ಲಿ 23 ಮಿಲಿಯನ್ ಟನ್ಗಳಿಗಿಂತಲೂ ಹೆಚ್ಚು ಗೋಧಿಯನ್ನು ಸರ್ಕಾರಿ-ಚಾಲಿತ ಗೋದಾಮುಗಳು ಹೊಂದಿದ್ದವು, ಇದು ವರ್ಷದ ಈ ಸಮಯಕ್ಕೆ ಸರ್ಕಾರಕ್ಕೆ ಅಗತ್ಯವಿರುವ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚು ಎಂದು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಕಿಅಂಶ ಹೇಳಿದೆ.
ವರದಿ-ಚಂದ್ರಮೋಹನ್