ತಂಪು ಪಾನೀಯ ಕುಡಿದಿದ್ದ 7 ಮಕ್ಕಳು ದುರ್ಮರಣ; ಹಳ್ಳಿಗೆ ಹೋಗಿ ಪರಿಶೀಲನೆ ನಡೆಸಿದ ವೈದ್ಯರ ತಂಡ

| Updated By: Lakshmi Hegde

Updated on: Apr 15, 2022 | 5:32 PM

ಘಟನೆ ಬಗ್ಗೆ ರಾಜಸ್ಥಾನ ಆರೋಗ್ಯ ಸಚಿವ ಪ್ರಸಾದಿ ಲಾಲ್​ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ. ಇದು ತಂಪು ಪಾನೀಯದಿಂದ ಉಂಟಾದ ಸಾವಲ್ಲ. ಮಕ್ಕಳಿಗೆ ವೈರಲ್ ಇನ್​ಫೆಕ್ಷನ್​ ಇತ್ತು ಎಂಬುದು ಗೊತ್ತಾಗಿದೆ ಎಂದಿದ್ದಾರೆ.

ತಂಪು ಪಾನೀಯ ಕುಡಿದಿದ್ದ 7 ಮಕ್ಕಳು ದುರ್ಮರಣ; ಹಳ್ಳಿಗೆ ಹೋಗಿ ಪರಿಶೀಲನೆ ನಡೆಸಿದ ವೈದ್ಯರ ತಂಡ
ಪ್ರಾತಿನಿಧಿಕ ಚಿತ್ರ
Follow us on

ರಾಜಸ್ಥಾನದ ಸಿರೋಹಿ ಎಂಬ ಗ್ರಾಮದಲ್ಲಿ ಏಳು ಮಕ್ಕಳು ನಿಗೂಢವಾಗಿ ಮೃತಪಟ್ಟಿದ್ದಾರೆ. ಗ್ರಾಮದಲ್ಲಿಯೇ ತಯಾರು ಮಾಡಿದ ಪಾನೀಯವೊಂದನ್ನು ಕುಡಿದ ಬಳಿಕ ತೀವ್ರ ಅಸ್ವಸ್ಥರಾಗಿದ್ದ ಮಕ್ಕಳು ಬದುಕಿ ಉಳಿಯಲೇ ಇಲ್ಲ. ಪಾಲಕರು ಶೋಕದಲ್ಲಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ರಾಜ್ಯ ಮಟ್ಟದ ಪ್ರಮುಖ ವೈದ್ಯರನ್ನೊಳಗೊಂಡ  ಆರೋಗ್ಯ ಸಿಬ್ಬಂದಿ ಸಿರೋಹಿ ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳು ಕುಡಿದ ಪಾನೀಯದ ಪ್ಯಾಕೆಟ್​ನ್ನು ಪರಿಶೀಲನೆ ನಡೆಸಿದೆ.  ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹಾಗೇ, ಮೃತ ಮಕ್ಕಳ ಪಾಲಕರನ್ನೂ ವಿಚಾರಿಸಿದೆ. 

ಈ ಗ್ರಾಮದಲ್ಲಿ ಅಂಗಡಿ ಇಟ್ಟಿದ್ದ ಸ್ಥಳೀಯ ವ್ಯಾಪಾರಿಯೊಬ್ಬ ಪ್ಯಾಕೇಟ್​​ನಲ್ಲಿ ಪಾನೀಯ ಮಾರಾಟ ಮಾಡಿದ್ದ. ಅದು ಐಸ್​ ಮಿಶ್ರಿತ ಪಾನೀಯವಾಗಿತ್ತು. ಪ್ಯಾಕೇಟ್​​ನಿಂದ ಪಾನೀಯವನ್ನು ಕುಡಿಯಲು ಪ್ಲಾಸ್ಟಿಕ್​ನ ಚಿಕ್ಕ ಕಡ್ಡಿಯನ್ನು ಇಡಲಾಗಿತ್ತು. ಮಕ್ಕಳು ವ್ಯಾಪಾರಿಯಿಂದ ಅದನ್ನು ಪಡೆದು ಕುಡಿದಿದ್ದರು. ಹೀಗೆ ಯಾವೆಲ್ಲ ಮಕ್ಕಳು  ಅದನ್ನು ಕುಡಿದಿದ್ದರೋ, ಅವರೆಲ್ಲ ಮುಂಜಾನೆ ಹೊತ್ತಿಗೆ ತೀವ್ರ ಅಸ್ವಸ್ಥರಾಗಿದ್ದಾರೆ.  ಹಾಗೇ ಮೃತಪಟ್ಟಿದ್ದಾರೆ. ಈ ತಂಪು ಪಾನೀಯ ಅಲ್ಲಿನ ವಿವಿಧ ಅಂಗಡಿಗಳಲ್ಲಿ ಕೂಡ ಇದ್ದು ಅದರ ಮಾದರಿಯನ್ನೂ ವೈದ್ಯಕೀಯ ತಂಡ ಪರೀಕ್ಷೆಗಾಗಿ ಸಂಗ್ರಹ ಮಾಡಿಕೊಂಡಿದೆ. ಅಲ್ಲದೆ, ಪರೀಕ್ಷೆ ಮುಗಿದು ವರದಿ ಬರುವ ವರೆಗೂ ಈ ಕೋಲ್ಡ್ ಡ್ರಿಂಕ್ಸ್ ಮಾರಾಟ ಮಾಡದಂತೆ ಸೂಚಿಸಿದೆ.

ಆರೋಗ್ಯ ಸಚಿವರ ಪ್ರತಿಕ್ರಿಯೆ ಏನು?

ಘಟನೆ ಬಗ್ಗೆ ರಾಜಸ್ಥಾನ ಆರೋಗ್ಯ ಸಚಿವ ಪ್ರಸಾದಿ ಲಾಲ್​ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ. ಇದು ತಂಪು ಪಾನೀಯದಿಂದ ಉಂಟಾದ ಸಾವಲ್ಲ. ಮಕ್ಕಳಿಗೆ ವೈರಲ್ ಇನ್​ಫೆಕ್ಷನ್​ ಇತ್ತು ಎಂಬುದು ಗೊತ್ತಾಗಿದೆ ಎಂದಿದ್ದಾರೆ. ನಾನು ಕಲೆಕ್ಟರ್​ ಜತೆ ಮಾತನಾಡಿದೆ. ಅವರೆಲ್ಲರಿಗೂ ತುಂಬ ಜ್ವರವಿತ್ತು. ಇಡೀ ಗ್ರಾಮದಲ್ಲಿ ಮತ್ತೆ ಯಾವುದಾದರೂ ಮಕ್ಕಳಲ್ಲಿ ಜ್ವರ ಇದೆಯಾ ಎಂಬುದನ್ನೂ ಸಮೀಕ್ಷೆಗೆ ಒಳಪಡಿಸಲಾಗಿದೆ. ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜೈಪುರ ಮತ್ತು ಜೋಧಪುರದಿಂದಲೂ ಇಲ್ಲಿಗೆ ವೈದ್ಯರ ತಂಡ ಭೇಟಿ ಕೊಟ್ಟಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: ಕೈದಿಯ ಹೆಂಡತಿ ಗರ್ಭಿಣಿಯಾಗಲೆಂದು ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ 15 ದಿನಗಳ ಪೆರೋಲ್!