
ನವದೆಹಲಿ, ಡಿಸೆಂಬರ್ 11: ಚುನಾವಣಾ ಆಯೋಗವು ಭಾರತದ 5 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗಡುವನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ. ಈ ವಿಸ್ತರಣೆಯು ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಅನ್ವಯಿಸುತ್ತದೆ. ಆದರೆ, ಈ ನಿರ್ಧಾರ ಪಶ್ಚಿಮ ಬಂಗಾಳಕ್ಕೆ ಅನ್ವಯವಾಗುವುದಿಲ್ಲ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಗೆ ಡಿಸೆಂಬರ್ 14ರಂದು ಗಡುವು ವಿಧಿಸಲಾಗಿತ್ತು. ಆದರೆ, ಇದೀಗ ಆ ಗಡುವನ್ನು ಡಿಸೆಂಬರ್ 19ರವೆರೆಗ ವಿಸ್ತರಿಸಲಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಎಸ್ಐಆರ್ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದ್ದು, ಹೊಸ ಸಲ್ಲಿಕೆ ದಿನಾಂಕವನ್ನು ಡಿಸೆಂಬರ್ 23ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಒಳನುಸುಳುವಿಕೆ ನಿಲ್ಲಿಸುವುದು ಅತ್ಯಗತ್ಯ; SIR ಬಗ್ಗೆ ಅಮಿತ್ ಶಾ ಹೇಳಿಕೆ
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಂಘಟಿತ ರೀತಿಯಲ್ಲಿ ಪೂರ್ಣಗೊಳಿಸಲು ಮತ್ತು ನಿಖರವಾದ ಮತ್ತು ನವೀಕರಿಸಿದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಹೆಚ್ಚುವರಿ 2 ವಾರಗಳ ಕಾಲಾವಕಾಶ ನೀಡುವಂತೆ ಉತ್ತರ ಪ್ರದೇಶ ಸರ್ಕಾರ ಭಾರತದ ಚುನಾವಣಾ ಆಯೋಗವನ್ನು ಕೋರಿತ್ತು. ಜಿಲ್ಲಾ ಚುನಾವಣಾ ಅಧಿಕಾರಿಗಳು ಮೃತ, ಸ್ಥಳಾಂತರಗೊಂಡ ಮತ್ತು ಗೈರುಹಾಜರಾದ ಮತದಾರರ ವಿವರಗಳನ್ನು ಮರು ಪರಿಶೀಲಿಸಲು ಅವಕಾಶ ನೀಡಲು ವಿಸ್ತರಣೆಯನ್ನು ಕೋರಲಾಗಿತ್ತು.
ಇದನ್ನೂ ಓದಿ: 12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಗಡುವು ವಿಸ್ತರಿಸಿದ ಚುನಾವಣಾ ಆಯೋಗ
ಈ ಹಿಂದೆ, ಚುನಾವಣಾ ಆಯೋಗವು ಕೇರಳಕ್ಕೆ ಡಿಸೆಂಬರ್ 11ರಿಂದ ಡಿಸೆಂಬರ್ 18ರವರೆಗೆ ಗಡುವನ್ನು ವಿಸ್ತರಿಸಿತ್ತು. ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ ಶೇ. 90ಕ್ಕೂ ಹೆಚ್ಚು ಫಾರ್ಮ್‌ಗಳನ್ನು ವಿತರಿಸಲಾಗಿದೆ. ಇದಲ್ಲದೆ, ಶೇ. 80ರಷ್ಟು ಮತದಾರರು ಈಗಾಗಲೇ ತಮ್ಮ ಫಾರ್ಮ್‌ಗಳನ್ನು ಪೂರ್ಣಗೊಳಿಸಿ ಸಲ್ಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Thu, 11 December 25