ಒಳನುಸುಳುವಿಕೆ ನಿಲ್ಲಿಸುವುದು ಅತ್ಯಗತ್ಯ; SIR ಬಗ್ಗೆ ಅಮಿತ್ ಶಾ ಹೇಳಿಕೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್ಐಆರ್ ಸ್ಥಗಿತಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ. SIR ಭಾರತದ ಪ್ರಜಾಪ್ರಭುತ್ವವನ್ನು ಸುರಕ್ಷಿತಗೊಳಿಸುವ ಮತ್ತು ಶುದ್ಧೀಕರಿಸುವ ಗುರಿಯನ್ನು ಹೊಂದಿರುವ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗ ನಡೆಸುವ ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬೆಂಬಲಿಸುವಂತೆ ಅಮಿತ್ ಶಾ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ನವದೆಹಲಿ, ನವೆಂಬರ್ 21: ಭಾರತದ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ನಡೆಯುತ್ತಿರುವ ಚರ್ಚೆಯ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಭದ್ರತೆಗೆ ಒಳನುಸುಳುವಿಕೆಯನ್ನು ತಡೆಯುವುದು ಅತ್ಯಗತ್ಯ ಎಂದು ಹೇಳಿದ್ದಾರೆ. SIR ಅನ್ನು ವಿರೋಧಿಸಿದ್ದಕ್ಕಾಗಿ ವಿರೋಧ ಪಕ್ಷಗಳ ಮೇಲೆ ಅವರು ವಾಗ್ದಾಳಿ ನಡೆಸಿದ್ದಾರೆ. “ಕೆಲವು ರಾಜಕೀಯ ಪಕ್ಷಗಳು ಒಳನುಸುಳುವವರನ್ನು ನಿರ್ಬಂಧಿಸುವ ಅಭಿಯಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ” ಎಂದು ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಹೆಸರಿಸದಿದ್ದರೂ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಅಪಾಯಕಾರಿ ಎಂದು ಹೇಳಿದ್ದಾರೆ. ಇದಾದ ನಂತರ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಸ್ಫೋಟ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ; ಅಮಿತ್ ಶಾ ಶಪಥ
SIRನ ಮಹತ್ವವನ್ನು ಎತ್ತಿ ತೋರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, BSF ಒಳನುಸುಳುವಿಕೆಯನ್ನು ತಡೆಗಟ್ಟಲು ದೇಶದ ಎಲ್ಲಾ ಗಡಿಗಳಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದೆ. ಒಳನುಸುಳುವಿಕೆಯನ್ನು ತಡೆಯುವುದು ರಾಷ್ಟ್ರೀಯ ಭದ್ರತೆಗೆ ಮಾತ್ರವಲ್ಲದೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲುಷಿತಗೊಳಿಸದಂತೆ ರಕ್ಷಿಸಲು ಸಹ ಅತ್ಯಗತ್ಯ ಎಂದು ಹೇಳಿದರು.
ಕೆಲವು ರಾಜಕೀಯ ಪಕ್ಷಗಳು ನುಸುಳುಕೋರರನ್ನು ತೆಗೆದುಹಾಕುವ ಅಭಿಯಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ. “ಈ ಪಕ್ಷಗಳು ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಮತ್ತು ಪರಿಶೀಲಿಸಲು ಚುನಾವಣಾ ಆಯೋಗವು ಪ್ರಾರಂಭಿಸಿದ SIR ಪ್ರಕ್ರಿಯೆಯನ್ನು ವಿರೋಧಿಸುತ್ತಿವೆ” ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ ಸ್ಫೋಟದ ಅಪರಾಧಿಗಳು ಪಾತಾಳದಲ್ಲೇ ಅಡಗಿದ್ದರೂ ಬಿಡುವುದಿಲ್ಲ; ಅಮಿತ್ ಶಾ ಎಚ್ಚರಿಕೆ
“ಈ ದೇಶದಿಂದ ಪ್ರತಿಯೊಬ್ಬ ನುಸುಳುಕೋರರನ್ನು ಗುರುತಿಸಲು ಮತ್ತು ತೆಗೆದುಹಾಕಲು ನಾವು ಬದ್ಧರಾಗಿದ್ದೇವೆ. ತಮ್ಮ ಮುಖ್ಯಮಂತ್ರಿ ಅಥವಾ ಪ್ರಧಾನಿ ಯಾರು ಎಂದು ನಿರ್ಧರಿಸುವ ಹಕ್ಕು ಭಾರತೀಯ ನಾಗರಿಕರಿಗೆ ಮಾತ್ರ ಇದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲುಷಿತಗೊಳಿಸುವ ಅಥವಾ ನಮ್ಮ ಪ್ರಜಾಪ್ರಭುತ್ವ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಹಕ್ಕು ಯಾವುದೇ ನುಸುಳುಕೋರರಿಗೆ ಇಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




