ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ರಾಜಕೀಯ ಹೈಡ್ರಾಮಾಗಳು ನಡೆದಿವೆ. ಈ ಕಾರಣಕ್ಕೆ ಚುನಾವಣಾ ಆಯೋಗ ಈ ರಾಜ್ಯದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ.
294 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಹೆಚ್ಚು ಕಟ್ಟುನಿಟ್ಟಾಗಿ ಚುನಾವಣೆ ನಡೆಸಬೇಕು ಎನ್ನುವ ಕಾರಣಕ್ಕೆ 8 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.
ನಿನ್ನೆ ಚುನಾವಣಾ ದಿನಾಂಕ ಘೋಷಣೆ ಮಾಡಿದ್ದ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ, ಎಲ್ಲಾ ಕಡೆಗಳಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ. ಈ ಮೂಲಕ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಇದಾದ ಮರುದಿನವೇ ಪಶ್ಚಿಮ ಬಂಗಾಳದ ಎಡಿಜಿ ಮತ್ತು ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಾವೇದ್ ಶಮೀಮ್ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಜಗ್ ಮೋಹನ್ ಅವರನ್ನು ತರಲಾಗಿದೆ.
BREAKING: ADG & IGP (Law and Order) replaced in West Bengal. Jag Mohan, IPS, presently posted as DG Fire Services, WB (in the rank of ADG) appointed to the post of ADG & IGP (L&O) and state nodal police officer, WB, in place of Jawed Shamim, IPS, with immediate effect
— Bharti Jain (@bhartijainTOI) February 27, 2021
ಇಂದು ಬಿಜೆಪಿ ನಿಯೋಗವು ಸಿಇಒ ಅರಿಜ್ ಅಫ್ತಾಬ್ ಅವರನ್ನು ಭೇಟಿಯಾಗಿ ಪಕ್ಷಪಾತ ಮಾಡುವ ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಇದಾದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.
ಐದು ರಾಜ್ಯಗಳ ಚುನಾವಣೆ ದಿನಾಂಕ:
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆಯು ಮೇ 2ರಂದು ನಡೆಯಲಿದೆ. ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ. ಅಸ್ಸಾಂನಲ್ಲಿ 27 ಮಾರ್ಚ್, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ವಿಶ್ಲೇಷಣೆ | ಕರ್ನಾಟಕದ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವು ಘೋಷಿಸಲಿಲ್ಲ ಏಕೆ?
Published On - 10:13 pm, Sat, 27 February 21