ವಿಶ್ಲೇಷಣೆ | ಕರ್ನಾಟಕದ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವು ಘೋಷಿಸಲಿಲ್ಲ ಏಕೆ?
ಮಾರ್ಚ್ 4ರಿಂದ ಬಜೆಟ್ ಅಧಿವೇಶನ ಮತ್ತು ಮಾರ್ಚ್ 8ರಂದು ರಾಜ್ಯ ಬಜೆಟ್ ನಿಗದಿಯಾಗಿದೆ. ಚುನಾವಣಾ ದಿನಾಂಕ ಘೋಷಣೆಯಾದರೆ ಬಜೆಟ್ ಮಂಡನೆಗೆ ತೊಂದರೆಯಾಗಬಹುದು ಎಂದು ಚುನಾವಣಾ ಆಯೋಗ ಯೋಚಿಸಿರಬಹುದು.
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಐದು ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಿಸಿದೆ. ಈ ಸಂದರ್ಭ ಕರ್ನಾಟಕದ ಮೂರು ವಿಧಾನಸಭೆ ಮತ್ತು ಒಂದು ಲೋಕಸಭೆ ಕ್ಷೇತ್ರಕ್ಕೂ ಚುನಾವಣೆ ಘೋಷಿಸಬಹುದು ಎಂಬ ನಿರೀಕ್ಷೆಯಿತ್ತು. ‘ಸೂಕ್ತ ಕಾಲದಲ್ಲಿ ಕರ್ನಾಟಕ ಮತ್ತು ಆಂಧ್ರದ ಉಪಚುನಾವಣೆ ದಿನಾಂಕ ಘೋಷಿಸಲಾಗುವುದು’ ಎಂದಷ್ಟೇ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನಿಲ್ ಅರೋರ ಹೇಳಿದರು.
ದೇಶದ ಐದು ರಾಜ್ಯಗಳಿಗೆ ಚುನಾವಣೆ ಘೋಷಿಸಿದ ಆಯುಕ್ತರು ಕರ್ನಾಟಕ ಉಪಚುನಾವಣೆಗಳ ಬಗ್ಗೆ ಸರಿಯಾಗಿ ಯಾವ ಮಾಹಿತಿಯನ್ನೂ ನೀಡಲಿಲ್ಲವೇಕೆ ಎಂದು ರಾಜಕೀಯ ವಲಯಗಳಲ್ಲಿ ವಿಚಾರ ಮಾಡಿದಾಗ ಮಾರ್ಚ್ 8ರಂದು ರಾಜ್ಯ ಬಜೆಟ್ ಇರುವ ಸಂಗತಿಯ ಬಗ್ಗೆ ಕೆಲವರು ಗಮನ ಸೆಳೆದರು. ಮಾರ್ಚ್ 4ರಿಂದ ಬಜೆಟ್ ಅಧಿವೇಶನ ಮತ್ತು ಮಾರ್ಚ್ 8ರಂದು ರಾಜ್ಯ ಬಜೆಟ್ ನಿಗದಿಯಾಗಿದೆ. ಒಂದು ವೇಳೆ ಇಂದೇ ಚುನಾವಣಾ ದಿನಾಂಕ ಘೋಷಣೆಯಾದರೆ ಬಜೆಟ್ ಮಂಡನೆಗೆ ತೊಂದರೆಯಾಗಬಹುದು ಎಂದು ಚುನಾವಣಾ ಆಯೋಗ ಯೋಚಿಸಿರಬಹುದು.
ಚುನಾವಣೆ ಘೋಷಣೆಯಾದ ನಂತರ ಮಂಡಿಸುವ ಬಜೆಟ್ನಲ್ಲಿ ಆದಾಯ ಮತ್ತು ಖರ್ಚಿನ ವಿವರ ನೀಡಬಹುದೇ ಹೊರತು ಸಾಮಾಜಿಕ (ಜನಪ್ರಿಯ) ಯೋಜನೆಗಳನ್ನು ಬಜೆಟ್ನ ಭಾಗವಾಗಿಸಲು ಸಾಧ್ಯವಾಗುವುದಿಲ್ಲ. ಕೊರೊನಾ ಸಂಕಷ್ಟದಿಂದ ಕಂಗಾಲಾಗಿರುವ ರಾಜ್ಯದ ಆರ್ಥಿಕತೆ ಇದರಿಂದ ಸಮಸ್ಯೆಯಾಗುತ್ತಿತ್ತು ಎಂಬ ಕಾರಣಕ್ಕೆ ಉಪಚುನಾವಣೆ ಘೋಷಣೆಯನ್ನು ಆಯೋಗ ತುಸು ಮುಂದೂಡಿದಂತೆ ಇದೆ ಎಂಬ ಮಾತುಗಳು ರಾಜಕೀಯ ವಿಶ್ಲೇಷಕರ ವಲಯದಲ್ಲಿ ಕೇಳಿಬರುತ್ತಿದೆ.
ಎಲ್ಲೆಲ್ಲಿ ಉಪ-ಚುನಾವಣೆ? ರಾಜ್ಯದ ಮಸ್ಕಿ, ಬಸವಕಲ್ಯಾಣ, ಸಿಂದಗಿ ವಿಧಾನಸಭೆ ಕ್ಷೇತ್ರ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಚುನಾವಣೆ ಘೋಷಣೆಯಾದ ನಂತರ ಒಟ್ಟಾರೆ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗಕ್ಕೆ 45 ದಿನ ಬೇಕು.
ಪ್ರಸ್ತುತ ಚುನಾವಣಾ ಆಯೋಗವು ಎಲ್ಲ ರಾಜ್ಯಗಳಿಗೂ ಮೇ 2ನೇ ತಾರೀಖನ್ನು ಫಲಿತಾಂಶ ಪ್ರಕಟಣೆಗೆ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ ಮಾರ್ಚ್ 15ರಂದು ಚುನಾವಣೆ ಘೋಷಿಸಿದರೂ ಮೇ 2ರ ಹೊತ್ತಿಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಬಜೆಟ್ ನಂತರ ಉಪಚುನಾವಣೆ ಘೋಷಣೆಯಾಗಬಹುದು ಎಂಬ ಅಭಿಪ್ರಾಯ ರಾಜಕೀಯ ವಲಯಗಳಲ್ಲಿ ವ್ಯಕ್ತವಾಗಿದೆ.
ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಇದನ್ನೂ ಓದಿ: ತಮಿಳುನಾಡು, ಪ.ಬಂಗಾಳ ಸೇರಿ 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
Published On - 8:56 pm, Fri, 26 February 21