‘ಸಿಜೆಪಿ ಪ್ರತಿಭಟನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ’; ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಗಂಭೀರ ಆರೋಪ
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ರಾಜಕೀಯ ಕೆಸರೆರಚಾಟ ಹೆಚ್ಚಾಗಿದ್ದು, ಸುತ್ತಲಿನ ರಾಜಕೀಯ ವಾಗ್ದಾಳಿ ತೀವ್ರಗೊಂಡಿದ್ದು, ಈ ಇಡೀ ಆಂದೋಲನದ ಹಿಂದೆ ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ಕುಮ್ಮಕ್ಕಿದೆ ಎಂದು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ಭಾರಿ ಭದ್ರತೆ ಹಾಗೂ ನಿರ್ಬಂಧಗಳ ನಡುವೆ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಸಿಜೆಪಿ 'ಲೆಹ್ರಾ ದೋ ತಿರಂಗ' ರ್ಯಾಲಿ ನಡೆಸಲು ನಿರ್ಧರಿಸಿದ ದಿನವೇ ಬ್ರಿಜ್ ಭೂಷಣ್ ಸಿಂಗ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಮುಖ್ಯಾಂಶಗಳು
- ಸಿಜೆಪಿ ಪ್ರತಿಭಟನೆಗೆ ಎಲಾನ್ ಮಸ್ಕ್ ಬೆಂಬಲವೆಂದು ಬ್ರಿಜ್ ಭೂಷಣ್ ಆರೋಪ
- ದೆಹಲಿಯ ಪ್ರತಿಭಟನೆಯ ದಿನವೇ ಬಿಜೆಪಿ ನಾಯಕನಿಂದ ಶಾಕಿಂಗ್ ಹೇಳಿಕೆ
- ಪ್ರತಿಭಟನೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದ ಬ್ರಿಜ್ ಭೂಷಣ್
ನವದೆಹಲಿ, ಅಕ್ಟೋಬರ್ 16: ಭಾರತದಲ್ಲಿ ನಡೆಯುತ್ತಿರುವ ವಿವಿಧ ಪ್ರತಿಭಟನೆಗಳು ಹಾಗೂ ಆಂದೋಲನಗಳ ಹಿಂದೆ ಜಾಗತಿಕ ಉದ್ಯಮಿ ಎಲಾನ್ ಮಸ್ಕ್ ಅವರ ಕೈವಾಡವಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮತ್ತು ಕೆಲವೊಂದು ನಿರ್ದಿಷ್ಟ ಚಳವಳಿಗಳನ್ನು ಮುನ್ನಡೆಸಲು ಎಲಾನ್ ಮಸ್ಕ್ ಅವರ ಪ್ರಭಾವ ಹಾಗೂ ಅವರ ಒಡೆತನದ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಈ ಪ್ರತಿಭಟನೆಗೆ ಕರೆ ನೀಡಿತ್ತು. ಜಂತರ್ ಮಂತರ್ಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕ ಅವರನ್ನು ಬಂಧಿಸಿ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಬೆನ್ನಲ್ಲೇ ಈ ಚಳವಳಿ ಮತ್ತಷ್ಟು ಕಾವು ಪಡೆದುಕೊಂಡಿದೆ.
ಇದನ್ನೂ ಓದಿ: ದೆಹಲಿಯಲ್ಲಿ ನಾಳೆ ನಡೆಯುವ ಸಿಜೆಪಿ ಪ್ರತಿಭಟನೆ ತಡೆಯಲು ಹೈಕೋರ್ಟ್ ನಕಾರ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಗೆ ಸೂಚನೆ
“ಈ ಇಡೀ ಚಳವಳಿಯನ್ನು ಎಲಾನ್ ಮಸ್ಕ್ ಸೂಚನೆ ಮೇರೆಗೆ ಸಂಘಟಿಸಲಾಗುತ್ತಿದೆ. ಇದು ನಮ್ಮ ರಾಷ್ಟ್ರದ ವಿರುದ್ಧ ನಡೆಯುತ್ತಿರುವ ಬೃಹತ್ ಪಿತೂರಿಯಾಗಿದೆ. ನಮ್ಮ ದೇಶವನ್ನು ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಹೋಲಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಸುಪ್ರೀಂ ಕೋರ್ಟ್ ಅನ್ನು ಬೆದರಿಸುವ ಉದ್ದೇಶದಿಂದಲೇ ಮೊದಲ ಬಾರಿಗೆ ಇಲ್ಲಿ ಇಂತಹ ರ್ಯಾಲಿಯನ್ನು ಆಯೋಜಿಸಲಾಗಿದೆ. ಭಾರತದಲ್ಲಿ ಈ ಹಿಂದೆಂದೂ ಇಂತಹ ಘಟನೆ ನಡೆದಿಲ್ಲ” ಎಂದು ಬ್ರಿಜ್ ಭೂಷಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
#WATCH | Unnao, Uttar Pradesh: On CJP’s ‘Lehra Do Tiranga’ protest at Central Park, BJP leader Brij Bhushan Sharan Singh says, “This entire movement is being orchestrated at his (Elon Musk) behest. It is a massive conspiracy against our nation. Our country is being compared to Bangladesh and Pakistan, and for the first time, a march has been organised here with the explicit intent of intimidating the Supreme Court. Nothing like this has ever happened before. These foreigners—who wish to conduct business in our country, but only on their own terms—are the ones fueling this movement.”
— ANI (@ANI) October 16, 2026
ವಿದೇಶಿ ಉದ್ಯಮಿಗಳ ಹಿತಾಸಕ್ತಿ:
“ನಮ್ಮ ದೇಶದಲ್ಲಿ ತಮ್ಮದೇ ಷರತ್ತುಗಳ ಮೇಲೆ ವ್ಯಾಪಾರ-ವಹಿವಾಟು ನಡೆಸಲು ಬಯಸುವ ಈ ವಿದೇಶಿಯರೇ ಈ ರೀತಿಯ ಆಂದೋಲನಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ತಂತ್ರಜ್ಞಾನವನ್ನು ಬಳಸಿ ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಕೆಲವರು ಯತ್ನಿಸುತ್ತಿದ್ದಾರೆ. ಈ ಹಿಂದೆ ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲೂ ಹಲವು ರಾಜಕೀಯ ಷಡ್ಯಂತ್ರಗಳು ನಡೆದಿದ್ದವು ಎಂಬುದನ್ನು ಅವರು ಈ ವೇಳೆ ಸ್ಮರಿಸಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Fri, 16 October 26




