ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿಯನ್ನು ಆರೋಪಿಯನ್ನಾಗಿ ಮಾಡಲಿದೆ ಜಾರಿ ನಿರ್ದೇಶನಾಲಯ

|

Updated on: May 14, 2024 | 5:29 PM

ಅಪರಾಧದ ಆಪಾದಿತ ಆದಾಯದ ಒಂದು ಭಾಗವನ್ನು ಆಮ್ ಆದ್ಮಿ ಪಕ್ಷವು ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಳಸಿಕೊಂಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಮಾರ್ಚ್‌ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಂಧಿಸಿತ್ತು.

ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿಯನ್ನು ಆರೋಪಿಯನ್ನಾಗಿ ಮಾಡಲಿದೆ ಜಾರಿ ನಿರ್ದೇಶನಾಲಯ
ಅರವಿಂದ್ ಕೇಜ್ರಿವಾಲ್
Follow us on

ದೆಹಲಿ ಮೇ 14: ಮದ್ಯ ನೀತಿ ಹಗರಣ (liquor policy scam case) ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಮಾಡುವುದಾಗಿ ಜಾರಿ ನಿರ್ದೇಶನಾಲಯ (Enforcement Directorate) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿರುವ ಮನವಿಯನ್ನು ನ್ಯಾಯಾಲಯ ಪರಿಗಣಿಸುತ್ತಿರುವಾಗ ಕೇಂದ್ರ ಸಂಸ್ಥೆ ಈ ಸಲ್ಲಿಕೆ ಮಾಡಿದೆ. ಪೂರಕ ಚಾರ್ಜ್ ಶೀಟ್‌ನಲ್ಲಿ ಎಎಪಿಯನ್ನು ಆರೋಪಿಯನ್ನಾಗಿ ಮಾಡಲಾಗುವುದು ಎಂದು ಇಡಿ ಹೇಳಿದೆ. ಏತನ್ಮಧ್ಯೆ, ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ದೆಹಲಿ ಮದ್ಯದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಇಡಿ ಸಲ್ಲಿಸಿದ ಆರನೇ ಪೂರಕ ಚಾರ್ಜ್ ಶೀಟ್ ಪರಿಗಣನೆಯ ಮೇಲಿನ ವಾದವನ್ನು ಮೇ 20 ಕ್ಕೆ ಮುಂದೂಡಿದೆ.

ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರ ನ್ಯಾಯಾಂಗ ಬಂಧನವನ್ನು ಮೇ 20ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ಅವರು ಕಳೆದ ವರ್ಷ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಗಳನ್ನು ಹಲವಾರು ನ್ಯಾಯಾಲಯಗಳು ತಿರಸ್ಕರಿಸಿದವು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಎಎಪಿ ನಾಯಕರು ಮದ್ಯದ ಉದ್ಯಮಿಗಳು ಮತ್ತು ರಾಜಕಾರಣಿಗಳ ಗುಂಪು ‘ಸೌತ್ ಗ್ರೂಪ್’ ಹಿತಾಸಕ್ತಿಗಳಿಗೆ ಅನುಕೂಲಕರವಾದ ಮದ್ಯ ನೀತಿಯನ್ನು ರೂಪಿಸಿದ್ದಕ್ಕಾಗಿ ಪ್ರತಿಯಾಗಿ ಕಿಕ್‌ಬ್ಯಾಕ್ ಸ್ವೀಕರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಅಪರಾಧದ ಆಪಾದಿತ ಆದಾಯದ ಒಂದು ಭಾಗವನ್ನು ಆಮ್ ಆದ್ಮಿ ಪಕ್ಷವು ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಳಸಿಕೊಂಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಮಾರ್ಚ್‌ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಂಧಿಸಿತ್ತು.

ಈ ತಿಂಗಳ ಆರಂಭದಲ್ಲಿ, ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿತು. ಆದರೆ, ದೆಹಲಿಯ ಮುಖ್ಯಮಂತ್ರಿಯಾಗಿ ಆಡಳಿತಾತ್ಮಕ ಕೆಲಸಗಳನ್ನು ಕೈಗೆತ್ತಿಕೊಳ್ಳದಂತೆ ಕೇಜ್ರಿವಾಲ್‌ಗೆ ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆ ಬಿಜೆಪಿಯಿಂದ ಮೋದಿ ಬದಲು ಚರ್ಚೆಗೆ ಇಳಿಯಲಿರುವ ಅಭಿನವ್ ಪ್ರಕಾಶ್ ಯಾರು?

ಒಂಬತ್ತು ಇಡಿ ಸಮನ್ಸ್‌ಗಳಿಗೆ ಗೈರಾದ ನಂತರ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು. ದೆಹಲಿ ಸಿಎಂ ತನಿಖೆಗೆ ಹಾಜರಾಗದ ಕಾರಣ ಸಂಸ್ಥೆಗೆ ಬೇರೆ ಮಾರ್ಗವಿರಲಿಲ್ಲ ಎಂದು ದೆಹಲಿ ಹೈಕೋರ್ಟ್ ಅವರ ಬಂಧನವನ್ನು ಎತ್ತಿಹಿಡಿದಿದೆ.

ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಹೊರತುಪಡಿಸಿ, ಎಎಪಿ ಸಂಸದ ಸಂಜಯ್ ಸಿಂಗ್ ಅವರು ಪ್ರಕರಣದಲ್ಲಿ ಐದು ತಿಂಗಳು ಜೈಲಿನಲ್ಲಿ ಕಳೆದರು. ಸದ್ಯ ಅವರು ಜಾಮೀನು ಪಡೆದು ಹೊರಗಿದ್ದಾರೆ. ಆಮ್ ಆದ್ಮಿ ಪಕ್ಷ ತಾವು ಯಾವುದೇ ತಪ್ಪೆಸಗಿಲ್ಲ ಎಂದು ಹೇಳಿದ್ದು, ಇಡಿಗೆ ಹಣದ ಆರೋಪ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ