ನಾನೂ ಅದೇ ನೀರು ಕುಡಿದಿದ್ದೇನೆ; ಯಮುನಾ ನದಿ ಕುರಿತ ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ಮೋದಿ ಆಕ್ರೋಶ

ಆಮ್ ಆದ್ಮಿ ಪಕ್ಷದ ನಾಯಕರ ಸುಳ್ಳು ಹೇಳಿಕೆಗೆ ದೆಹಲಿ ಜನರು ಕಿವಿಗೊಡುವುದಿಲ್ಲ. ಹರಿಯಾಣ ಸರ್ಕಾರ ಯಮುನಾ ನದಿಗೆ ವಿಷ ಬೆರೆಸುವ ಕೆಲಸ ಮಾಡುತ್ತಿಲ್ಲ. ಅರವಿಂದ ಕೇಜ್ರಿವಾಲ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಹರಿಯಾಣದಿಂದ ಹರಿದು ಬರುವ ನೀರನ್ನು ನಾವು ಕೂಡ ಕುಡಿಯುತ್ತೇವೆ. ಹರಿಯಾಣ ಸರ್ಕಾರದ ವಿರುದ್ಧ ಕೇಜ್ರಿವಾಲ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೆಹಲಿಯ ಚುನಾವಣಾ ಱಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ನಾನೂ ಅದೇ ನೀರು ಕುಡಿದಿದ್ದೇನೆ; ಯಮುನಾ ನದಿ ಕುರಿತ ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ಮೋದಿ ಆಕ್ರೋಶ
Pm Modi

Updated on: Jan 29, 2025 | 3:43 PM

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ಇಂದು ದೆಹಲಿಯ ಉಸ್ಮಾನ್‌ಪುರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದರು. ಈ ವೇಳೆ ತಮ್ಮ ಭಾಷಣದ ಸಮಯದಲ್ಲಿ ಹರಿಯಾಣದ ಯಮುನಾ ನದಿಗೆ ವಿಷಪ್ರಾಶನ ಮಾಡುತ್ತಿದೆ ಎಂಬ ಆರೋಪಗಳ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಮೋದಿ ತರಾಟೆಗೆ ತೆಗೆದುಕೊಂಡರು. ಹರಿಯಾಣದ ಬಿಜೆಪಿ ಸರ್ಕಾರ ದೆಹಲಿಗೆ ಬಿಡುತ್ತಿರುವ ಯಮನಾ ನದಿಯ ನೀರಿನಲ್ಲಿ ವಿಷ ಬೆರೆಸುತ್ತಿದೆ. ಈ ಮೂಲಕ ನರಮೇಧಕ್ಕೆ ಸಂಚು ಮಾಡಿದೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದರು. ಇದನ್ನು ತಳ್ಳಿಹಾಕಿರುವ ಪ್ರಧಾನಿ ನರೇಂದ್ರ ಮೋದಿ, ನಾವು ಕೂಡ ಯಮುನಾ ನದಿ ನೀರನ್ನೇ ಕುಡಿದಿದ್ದೇವೆ. ಕೇಜ್ರಿವಾಲ್ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

ದೆಹಲಿಯ ಘೋಂಡಾದ ಯಮುನಾ ಖಾದರ್‌ನಲ್ಲಿ ಚುನಾವಣಾ ಱಲಿಯಲ್ಲಿ ಮಾಜಿ ಸಿಎಂ ಕೇಜ್ರಿವಾಲ್​ ಆರೋಪಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಈ ಬಾರಿ ಅಭಿವೃದ್ಧಿಯ ಕಮಲ ಅರಳಲಿದೆ. ಹರಿಯಾಣ ರಾಜ್ಯದ ಜನರು ಅಪಾರ ದೇಶಭಕ್ತಿ ಹೊಂದಿದ್ದಾರೆ. ದೆಹಲಿ ಜನರಿಗೆ ಅಭಿವೃದ್ಧಿ ಮಾಡುವ ಸರ್ಕಾರ ಬೇಕಿದೆ. ದೆಹಲಿಯ ಜನರಂತೆಯೇ ನಾನು ಕೂಡ ಯಮುನಾ ನದಿ ನೀರನ್ನೇ ಕುಡಿದಿದ್ದೇನೆ. ಈ ಬಾರಿ ಎಎಪಿ ಹಡಗು ಯಮುನಾ ನದಿಯಲ್ಲಿ ಮುಳುಗುತ್ತದೆ ಎಂದು ಕೇಜ್ರಿವಾಲ್ ಅವರನ್ನು ಪ್ರಧಾನಿ ಮೋದಿ ಟೀಕಿಸಿದರು.

ಇದನ್ನೂ ಓದಿ: ಯಮುನಾ ನದಿಗೆ ವಿಷ ಹಾಕಿದ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಸಾಕ್ಷಿ ಕೇಳಿದ ಚುನಾವಣಾ ಆಯೋಗ


“ದೆಹಲಿಯ ಮಾಜಿ ಮುಖ್ಯಮಂತ್ರಿಯೊಬ್ಬರು ಹರಿಯಾಣ ಜನರ ಮೇಲೆ ಆರೋಪ ಮಾಡಿದ್ದಾರೆ. ಹರಿಯಾಣದ ಜನರು ತಮ್ಮ ಸ್ವಂತ ಕುಟುಂಬ ಸದಸ್ಯರ ನೀರಿನಲ್ಲಿ ವಿಷ ಬೆರೆಸುತ್ತಾರಾ? ಮೋದಿ ಮತ್ತು ದೇಶದ ಎಲ್ಲಾ ನ್ಯಾಯಾಧೀಶರು ಮತ್ತು ವಿಶ್ವದ ರಾಯಭಾರ ಕಚೇರಿಗಳು ಸಹ ಅದೇ ನೀರನ್ನು ಕುಡಿಯುತ್ತವೆ. ಹರಿಯಾಣದ ಜನರು ಮೋದಿಯವರ ನೀರಿನಲ್ಲಿ ವಿಷ ಬೆರೆಸುತ್ತಾರೆ ಎಂದು ಯಾರಾದರೂ ನಂಬಲು ಸಾಧ್ಯವೇ?” ಎಂದು ಮೋದಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ