
ಮುಂಬೈ, ಆಗಸ್ಟ್ 01: ಮಾಲೆಗಾಂವ್ ಸ್ಫೋಟ(Malegaon Blast) ಪ್ರಕರಣದಲ್ಲಿ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಅವರನ್ನು ಸಿಲುಕಿಸುವ ಪಿತೂರಿ ನಡೆದಿತ್ತು ಎಂದು ಮಾಜಿ ಎಟಿಎಸ್ ಅಧಿಕಾರಿ ಮೆಹಬೂಬ್ ಮುಜಾವರ್ ತಿಳಿಸಿದ್ದಾರೆ. 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಅಧಿಕಾರಿಯೊಬ್ಬರು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಒತ್ತಡವಿತ್ತು ಮತ್ತು ಹಾಗೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
‘‘ಮೋಹನ್ ಭಾಗವತ್ ಅವರಂತಹ ದೊಡ್ಡ ವ್ಯಕ್ತಿಯನ್ನು ಬಂಧಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿತ್ತು. ನಾನು ಆದೇಶಗಳನ್ನು ಪಾಲಿಸದ ಕಾರಣ, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು ಅದು ನನ್ನ 40 ವರ್ಷಗಳ ವೃತ್ತಿಜೀವನವನ್ನು ಹಾಳುಮಾಡಿತು’’ ಎಂದರು.
ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಮತ್ತು ಕರ್ನಲ್ ಪುರೋಹಿತ್ ಸೇರಿದಂತೆ ಎಲ್ಲಾ 7 ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರಂಭದಲ್ಲಿ ಎಟಿಎಸ್ ಪ್ರಕರಣದ ತನಿಖೆ ನಡೆಸಿತ್ತು, ಆದರೆ ನಂತರ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿತು.
ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ತಮ್ಮ ಬಳಿ ದಾಖಲೆಗಳಿವೆ, ಕೇಸರಿ ಭಯೋತ್ಪಾದನೆ ಇರಲಿಲ್ಲ. ಎಲ್ಲವೂ ನಕಲಿಯಾಗಿತ್ತು ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಈ ಕೇಸ್ ನನ್ನ ಬದುಕನ್ನೇ ಹಾಳು ಮಾಡಿತು; ಮಾಲೆಗಾಂವ್ ಸ್ಫೋಟದ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಮೊದಲ ಪ್ರತಿಕ್ರಿಯೆ
ಸೆಪ್ಟೆಂಬರ್ 29, 2008 ರಂದು ಆರು ಜನರು ಸಾವನ್ನಪ್ಪಿ 101 ಜನರು ಗಾಯಗೊಂಡ ಮಾಲೆಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಎಟಿಎಸ್ ತಂಡದ ಭಾಗವಾಗಿ ತಾವು ಇದ್ದಿದ್ದಾಗಿ ಅವರು ಹೇಳಿದ್ದಾರೆ.
ಮೋಹನ್ ಭಾಗವತ್ ಅವರನ್ನು ಹಿಡಿಯಲು ತಮ್ಮನ್ನು ಕೇಳಿಕೊಳ್ಳಲಾಗಿತ್ತು, ಆ ಸಮಯದಲ್ಲಿ ಎಟಿಎಸ್ ಏನು ತನಿಖೆ ನಡೆಸಿತು ಮತ್ತು ಏಕೆ ಎಂದು ನಾನು ಹೇಳಲಾರೆ.
ಆದರೆ ರಾಮ್ ಕಲ್ಸಂಗ್ರ, ಸಂದೀಪ್ ಡಾಂಗೆ, ದಿಲೀಪ್ ಪಾಟಿದಾರ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಂತಹ ವ್ಯಕ್ತಿಗಳ ಬಗ್ಗೆ ನನಗೆ ಕೆಲವು ಗೌಪ್ಯ ಆದೇಶಗಳನ್ನು ನೀಡಲಾಯಿತು. ಈ ಎಲ್ಲಾ ಆದೇಶಗಳನ್ನು ಅನುಸರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿಯೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ತಮ್ಮ ಅಧಿಕಾರಿಗಳು ಆದೇಶಿಸಿದ್ದರು. ಅವರು ನಿರಾಕರಿಸಿದಾಗ, ಅವರನ್ನು ಅಮಾನತುಗೊಳಿಸಲಾಯಿತು ಮತ್ತು ಕೆಲವು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಯಿತು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮಾಲೆಗಾಂವ್‌ನ ಮುಸ್ಲಿಂ ಏರಿಯಾದಲ್ಲಿ ಮಸೀದಿಯ ಬಳಿ ಬೈಕ್ನಲ್ಲಿದ್ದ ಸ್ಫೋಟಕ ಸಾಧನವು ಸ್ಫೋಟಗೊಂಡಿತ್ತು, ಇದರ ಪರಿಣಾಮವಾಗಿ ಆರು ಜನರು ಸಾವನ್ನಪ್ಪಿದ್ದರು. ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಂಜಾನ್ ತಿಂಗಳಲ್ಲಿ ಸ್ಫೋಟ ಸಂಭವಿಸಿತ್ತು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಆರಂಭದಲ್ಲಿ ತನಿಖೆಯ ನೇತೃತ್ವ ವಹಿಸಿತ್ತು,
ಮೋಟಾರ್ ಸೈಕಲ್‌ನ ಮಾಲೀಕತ್ವವನ್ನು ತ್ವರಿತವಾಗಿ ಪತ್ತೆಹಚ್ಚಿ, ಹಲವರನ್ನು ಬಂಧಿಸಲಾಗಿತ್ತು. 2011 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಂಡಾಗ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ