ಹಿಜಾಬ್ (Hijab) ಮತ್ತು ನಾಮಾವಳಿ ಧರಿಸುವ ವಿಚಾರದಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಹೊಡೆದಾಟದ ನಂತರ ಪಶ್ಚಿಮ ಬಂಗಾಳದ(West Bengal) ಹೌರಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಹುಡುಗಿಯರ ಇನ್ನೊಂದು ಗುಂಪು ಹಿಜಾಬ್ ಧರಿಸಿ ಶಾಲೆಗೆ ಬಂದಾಗ ಕೆಲವು ವಿದ್ಯಾರ್ಥಿಗಳು ನಾಮಾವಳಿ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ವಾಗ್ವಾದವು ಮಾರಾಮಾರಿಯಾಗಿ ಉಲ್ಬಣಗೊಂಡಾಗ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರನ್ನು ಕರೆಯಲಾಯಿತು. ಯಾವುದೇ ದೂರು ದಾಖಲಾಗಿಲ್ಲ, ಯಾರಿಗೂ ಗಾಯವಾಗಿಲ್ಲ. ಸೋಮವಾರ ಬೋರ್ಡ್ ಪೂರ್ವ ಪರೀಕ್ಷೆಗಳು ನಡೆಯುತ್ತಿದ್ದಾಗ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆಗೆ ಹೋಗಿದ್ದರು. ಇವರನ್ನು ನೋಡಿದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ನಾಮಾವಳಿ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಶಾಲಾ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಡ್ರೆಸ್ ಕೋಡ್ ಅನುಸರಿಸುವಂತೆ ಹೇಳಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಮಂಗಳವಾರ ಮತ್ತೆ ಬಾಲಕಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿ ಗಲಾಟೆ ನಡೆಸಿದ್ದಾರೆ. ಶಾಲೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಆಂತರಿಕ ವಿಚಾರ ಎಂದು ಪೊಲೀಸರು ಮೊದಲು ಶಾಲೆಗೆ ಪ್ರವೇಶಿಸಲಿಲ್ಲ. ಆದರೆ ನಂತರ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಒಳಗೆ ಹೋದರು ಎಂದು ಅಧಿಕಾರಿ ಹೇಳಿದರು.
ಪರೀಕ್ಷೆಗಳನ್ನು ರದ್ದುಗೊಳಿಸಿದ್ದು ಜಗಳದಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ. “ಶಾಲಾ ಅಧಿಕಾರಿಗಳು, ಪೋಷಕರು, ಪೊಲೀಸರು, ಸ್ಥಳೀಯ ಬ್ಲಾಕ್ ಆಡಳಿತ ಮತ್ತು ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ ಈ ವಿಷಯವನ್ನು ಚರ್ಚಿಸಿ ಶನಿವಾರ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಅಧಿಕಾರಿ ಹೇಳಿದರು.
ಫೆಬ್ರವರಿಯಲ್ಲಿ ಮುಖ್ಯೋಪಾಧ್ಯಾಯರು ಕೆಲವು ವಿದ್ಯಾರ್ಥಿಗಳಿಗೆ ಹಿಜಾಬ್ ಬದಲಿಗೆ ಶಾಲಾ ಸಮವಸ್ತ್ರವನ್ನು ಧರಿಸಲು ಹೇಳಿದರು ಎಂಬ ವರದಿಗಳ ಮೇಲೆ ಮುರ್ಷಿದಾಬಾದ್‌ನ ಶಾಲೆಯೊಂದರ ಸಿಬ್ಬಂದಿಯ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಕನಿಷ್ಠ 18 ಜನರನ್ನು ಬಂಧಿಸಲಾಯಿತು.
ಮಾಲ್ಡಾದಲ್ಲಿ ಈ ವರ್ಷದ ಆರಂಭದಲ್ಲಿ ಕರ್ತವ್ಯದ ವೇಳೆ ಹಿಜಾಬ್ ಧರಿಸಿದ್ದಕ್ಕಾಗಿ ಮೇಲಧಿಕಾರಿಯೊಬ್ಬರು ಪದೇ ಪದೇ ಕಿರುಕುಳ ನೀಡಿದ್ದರು ಎಂದು ಸರ್ಕಾರಿ ಆರೋಗ್ಯ ಕಾರ್ಯಕರ್ತೆಯೊಬ್ಬರು ದೂರಿದ್ದರು.
Published On - 10:03 pm, Wed, 23 November 22