Richa Chadha: ಗಾಲ್ವಾನ್ ಕುರಿತು ವಿವಾದಾತ್ಮಕ ಟ್ವೀಟ್, ಸೈನಿಕರಿಗೆ ಅವಮಾನ; ನಟಿ ರಿಚಾ ಚಡ್ಡಾ ವಿರುದ್ಧ ಆಕ್ರೋಶ
ಭಾರತ ಮತ್ತು ಚೀನಾ ನಡುವಿನ 2020ರ ಗಾಲ್ವಾನ್ ಘರ್ಷಣೆಯ ಬಗ್ಗೆ ಭಾರತೀಯ ಸೇನೆಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ರಿಚಾ ಚಡ್ಡಾ ವಿರುದ್ಧ ಹರಿಹಾಯ್ದಿದ್ದಾರೆ.
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (POK) ಹಿಂಪಡೆಯುವ ಆದೇಶಗಳನ್ನು ಕಾರ್ಯಗತಗೊಳಿಸಲು ಭಾರತೀಯ ಸೇನೆ ಸಕಲ ರೀತಿಯಲ್ಲೂ ಸಿದ್ಧವಾಗಿದೆ ಎಂಬ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (Lt General Upendra Dwivedi) ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ರಿಚಾ ಚಡ್ಡಾ (Richa Chadha) ಟ್ವಿಟ್ಟರ್‌ನಲ್ಲಿ ಭಾರತೀಯ ಸೇನೆಯನ್ನು (Indian Army) ಅವಮಾನಿಸಿದ್ದಾರೆ ಎಂಬ ಆರೋಪ ಕೇಳಬಂದಿದೆ. ಅವರ ಟ್ವೀಟ್ ಈಗ ಭಾರೀ ಟೀಕೆಗೆ ಕಾರಣವಾಗಿದೆ.
“ಗಾಲ್ವಾನ್ ಹಾಯ್ ಎಂದು ಹೇಳುತ್ತಿದೆ ಎಂದು ನಟಿ ರಿಚಾ ಚಡ್ಡಾ ಟ್ವೀಟ್ ಮಾಡಿದ್ದರು. ಇದು ಅವಮಾನಕಾರಿ ಟ್ವೀಟ್ ಆಗಿದ್ದು, ಇದನ್ನು ಆದಷ್ಟು ಬೇಗ ಹಿಂಪಡೆಯಬೇಕು. ನಮ್ಮ ಸಶಸ್ತ್ರ ಪಡೆಗಳನ್ನು ಅವಮಾನಿಸುವುದು ಸಮರ್ಥನೀಯವಲ್ಲ” ಎಂದು ಬಿಜೆಪಿಯ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಚೀನಾ ನಡುವಿನ 2020ರ ಗಾಲ್ವಾನ್ ಘರ್ಷಣೆಯ ಬಗ್ಗೆ ಭಾರತೀಯ ಸೇನೆಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಮತ್ತು ಸೈನಿಕರ ತ್ಯಾಗವನ್ನು ಲೇವಡಿ ಮಾಡಿದ್ದಕ್ಕಾಗಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ರಿಚಾ ಚಡ್ಡಾ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಆದೇಶಕ್ಕಾಗಿ ಕಾಯುತ್ತಿದ್ದೇವೆ; ರಕ್ಷಣಾ ಸಚಿವರ ಗಿಲ್ಗಿಟ್- ಬಾಲ್ಟಿಸ್ತಾನ್ ವಶದ ಕುರಿತ ಹೇಳಿಕೆಗೆ ಭಾರತೀಯ ಸೇನೆ ಪ್ರತಿಕ್ರಿಯೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದು ಭಾರತದ ಗುರಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಹಿಂದೆ ಘೋಷಿಸಿದ ಹಿನ್ನೆಲೆಯಲ್ಲಿ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಈ ಹೇಳಿಕೆ ನೀಡಿದ್ದರು. “ನಾವು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ನಮ್ಮ ಅಭಿವೃದ್ಧಿಯ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ನಾವು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ತಲುಪಿದಾಗ ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ. ಭಯೋತ್ಪಾದನೆಗೆ ಧರ್ಮವಿಲ್ಲ. ಭಯೋತ್ಪಾದಕರ ಒಂದೇ ಗುರಿಯೆಂದರೆ ಭಾರತವನ್ನು ಟಾರ್ಗೆಟ್ ಮಾಡುವುದು. ಪಾಕಿಸ್ತಾನದ ಕೈಯಲ್ಲಿ ಶೋಷಣೆಗೆ ಒಳಪಡುವ ಮತ್ತು ತಮ್ಮ ಹಕ್ಕುಗಳನ್ನು ಕಳೆದುಕೊಂಡಿರುವ ಪಿಒಕೆ ನಿವಾಸಿಗಳ ನೋವು ನಮಗೆ ಅರ್ಥವಾಗುತ್ತದೆ” ಎಂದು ರಕ್ಷಣಾ ಸಚಿವರು ಹೇಳಿದ್ದರು.
Galwan says hi . https://t.co/agoXrJxFpW
— RichaChadha (@RichaChadha) November 23, 2022
ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಸರ್ಕಾರದ ಆದೇಶಗಳನ್ನು ಕಾರ್ಯಗತಗೊಳಿಸಲು ಸೇನೆಯು ಯಾವಾಗಲೂ ಸಿದ್ಧವಾಗಿದೆ. ಭಾರತೀಯ ಸೇನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ನೀಡುವ ಯಾವುದೇ ಆದೇಶವನ್ನು ನಾವು ಪಾಲಿಸುತ್ತೇವೆ. ಯಾವಾಗ ಸರ್ಕಾರ ಆದೇಶ ನೀಡಿದರೂ ನಾವು ಅದಕ್ಕೆ ಸಿದ್ಧರಾಗಿರುತ್ತೇವೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Crime News: ಜಮ್ಮು ಕಾಶ್ಮೀರದಲ್ಲಿ ಭೀಕರ ಬಸ್ ಅಪಘಾತ; ಮೂವರು ಸಾವು, 17 ಜನರಿಗೆ ಗಾಯ
ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ತಮ್ಮ ಇತ್ತೀಚಿನ ಟ್ವೀಟ್ನಲ್ಲಿ ಉಪೇಂದ್ರ ದ್ವಿವೇದಿ ಅವರ ಟ್ವೀಟ್ ಅನ್ನು ಶೇರ್ ಮಾಡಿಕೊಂಡು ಅದಕ್ಕೆ ಗಾಲ್ವಾನ್ ಹಾಯ್ ಎನ್ನುತ್ತಿದೆ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ರಿಚಾ ಚಡ್ಡಾ ಅವರ ಟ್ವೀಟ್ ವಿರುದ್ಧ ಬಾಯ್ಕಟ್ ಬಾಲಿವುಡ್ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಿ, ಆಕ್ರೋಶ ಹೊರಹಾಕಿದ್ದಾರೆ.
ಶ್ರೀನಗರದಲ್ಲಿ ನಡೆದ ಶೌರ್ಯ ದಿವಸ್ ಕಾರ್ಯಕ್ರಮದಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನವು ತಾನು ಆಕ್ರಮಿಸಿಕೊಂಡ ಕಾಶ್ಮೀರದ ಭಾಗದುದ್ದಕ್ಕೂ ಜನರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಿದ್ದು, ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗಗಳಾಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್‌ಗಳನ್ನು ತಲುಪಿದ ಬಳಿಕ ಅವಳಿ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳ ಒಟ್ಟಾರೆ ಅಭಿವೃದ್ಧಿಯ ನಮ್ಮ ಗುರಿಯನ್ನು ತಲುಪಿದಂತಾಗುತ್ತದೆ ಎಂದಿದ್ದರು.
ಕಾಶ್ಮೀರ ಮತ್ತು ಲಡಾಖ್ ಅಭಿವೃದ್ಧಿ ಹಾಗೂ ಸಮೃದ್ಧಿಯ ಹೊಸ ಮಾರ್ಗದಲ್ಲಿವೆ. ಇದು ಕೇವಲ ಆರಂಭವಷ್ಟೇ. ಗಿಲ್ಗಿಟ್ ಬಾಲ್ಟಿಸ್ತಾನ್ ಹಾಗೂ ಪಿಒಕೆ ಪ್ರದೇಶಗಳು ಭಾರತದೊಂದಿಗೆ ಮರಳಿ ಸೇರಿದಾಗ ಯೋಜನೆ ಪೂರ್ಣಗೊಳ್ಳುತ್ತದೆ. 1947ರ ನಿರಾಶ್ರಿತರು ತಮ್ಮ ಭೂಮಿಯನ್ನು ಹಾಗೂ ಮನೆಗಳನ್ನು ಮರಳಿ ಪಡೆದಾಗ ನ್ಯಾಯ ಸಲ್ಲಿಕೆಯಾಗುತ್ತದೆ. ಆ ಸಮಯ ಹೆಚ್ಚು ದೂರವಿಲ್ಲ ಎಂದು ಪಿಒಕೆಯನ್ನು ಮರಳಿ ಸ್ವಾಧೀನ ಪಡಿಸಿಕೊಳ್ಳುವ ಸುಳಿವನ್ನು ರಾಜನಾಥ್ ಸಿಂಗ್ ನೀಡಿದ್ದರು.